ಎಸ್.ಎಸ್.ಎಲ್.ಸಿ. ಫಲಿತಾಂಶದ ಬಗ್ಗೆ ಚರ್ಚೆ ಮಾಡುತ್ತಾ ವಿಶ್ವನ ಮನೆಯಲ್ಲಿ ಕುಳಿತಿದ್ದೆ.
“ಪಾಸಾಗುವ ಶಾಲೆಗಳೇ ಬೇರೆ, ಫೈಲ್ ಆಗುವ ಶಾಲೆಗಳೇ ಬೇರೆ” ಎಂದ ವಿಶ್ವ.
“ಮೇಷ್ಟ್ರು ನೆಟ್ಟಗಿಲ್ಲ ಅಂದ್ರೆ ವಿದ್ಯಾರ್ಥಿಗಳನ್ನ ಬೈದು ಏನು ಪ್ರಯೋಜನ?” ಎಂದಳು ವಿಶಾಲು.
“ಈ ಸಲ ೭೮ ಶಾಲೆಗಳಿಗೆ ಶೂನ್ಯ ಫಲಿತಾಂಶ ಬಂದಿದೆಯಂತಲ್ಲ ಹೇಗೆ?” ಎಂದು ವಿಶ್ವ ಕೇಳಿದ.
“ಕೆಲವು ಶಾಲೆಗಳಲ್ಲಿ ಒಬ್ಬ ವಿದ್ಯಾರ್ಥಿ ಸಹ ಸ್ಯಾಂಪಲ್‌ಗೂ ಪಾಸಾಗಿಲ್ಲ” ಎಂದೆ.
“ಈ ಪ್ರಚಂಡ ನಪಾಸಿಗೆ ಕಾರಣ ಏನು?” ವಿಶ್ವ ಕೇಳಿದ.
“ಇದೇ ವಿಷಯದ ಬಗ್ಗೆ ನಾನೊಂದು ಘಟನೆ ಹೇಳ್ತೀನಿ, ಮಾರಿ ಹಳ್ಳಿ ಹಿಂದುಳಿದ ಪ್ರದೇಶ. ಅಲ್ಲಿನ ಶಾಲೆಯಲ್ಲಿ ಸದಾ ಶೂನ್ಯ ಫಲಿತಾಂಶ ರ‍್ತಾ ಇತ್ತು. ನಲವತ್ತು ಹುಡುಗ್ರು ಎಸ್.ಎಸ್.ಎಲ್.ಸಿ. ಕಟ್ಟಿದ್ರೆ ಸೆಂಟ್ ಪರ್ಸೆಂಟ್ ಫೈಲ್ ಆಗ್ತಾ ಇದ್ರು”
“ಸೊನ್ನೆ ತರೋದರಲ್ಲೂ ಪೈಪೋಟೀನಾ?” ವಿಶಾಲೂ ಕೇಳಿದಳು.
“ಗ್ರಾಮಾಭಿವೃದ್ಧಿ ಮಂಡಳಿಯವರು ಶಾಲೇನ ನೋಡ್ಕೋತಾ ಇದ್ರು. ಶಾಲಾ ಮಂಡಳಿ ಅಧ್ಯಕ್ಷರು ಹೆಬ್ಬೆಟ್ಟು! ಅವರಿಗೆ ಹೆಬ್ಬೆಟ್ಟು ಹಾಕಲು ಬಲಗೈಯೋ ಎಡಗೈಯೋ ತಿಳೀತಿರಲಿಲ್ಲ. ಹುಡುಗ್ರು ಫೈಲಾಗೋದು ಮಾಮೂಲಾಗಿದ್ದರಿಂದ ಶಾಲಾ ಮಂಡಳಿಯವರೂ ತಲೆ ಕೆಡಿಸಿಕೊಂಡಿರಲಿಲ್ಲ” ಎಂದೆ.
“ಒಳ್ಳೇ ಮಾಸ್ತರನ್ನ ತಂದು ಹಾಕಬಾರದಿತ್ತಾ?” ವಿಶಾಲೂ ಕೇಳಿದಳು.
“ಒಬ್ಬ ಹೊಸ ಹೆಡ್ ಮಾಸ್ತರ್‌ನ ಹುಡುಕಿ ತಂದ್ರು. ಅವರ ಹೆಸರು ವೀರೇಂದ್ರ ಗಾದಿ ಅಂತ. ಗಾದಿ ಮಾಸ್ತರು ಅನೇಕ ಶಾಲೆಗಳಲ್ಲಿ ಹೆಸರು ಮಾಡಿದ್ದವರು. ಅತ್ಯಂತ ಸರಳವಾದ ವ್ಯಕ್ತಿ. ಅವರು ೨೦೧೪ರಲ್ಲಿ ಮಾಸ್ತರಾಗಿ ಮಾರಿಹಳ್ಳಿ ಶಾಲೆಗೆ ಬಂದ್ರು” ಎಂದೆ.
“ಅಲ್ಲೀವರೆಗೂ ಇದ್ದ ಪದ್ಧತಿ?”
“ಫೈಲಾದವರಲ್ಲಿ ಜಾಸ್ತಿ ಅಂಕ ಪಡೆದ ವಿದ್ಯಾರ್ಥಿಗೆ ಅಧ್ಯಕ್ಷರು ಸನ್ಮಾನ ಮಾಡ್ತಾ ಇದ್ರು” ಎಂದೆ.
“ಫೈಲಾದವರಿಗೂ ಸನ್ಮಾನ ಉಂಟಾ?” ವಿಶಾಲೂ ನಕ್ಕಳು.
“ಗಾದಿ ಮಾಸ್ತರು ಬಂದ್ಮೇಲೆ ಎಲ್ಲಾ ಮಾಸ್ತರ್‌ಗಳನ್ನೂ ಕರೆದು ಮೀಟಿಂಗ್ ಮಾಡಿದರು. ಪ್ರತಿಯೊಬ್ಬರ ಜವಾಬ್ದಾರಿ ಬಗ್ಗೆ ತಿಳಿಸಿದ್ರು. ವಿದ್ಯಾರ್ಥಿಗಳ ಮತ್ತು ಗುರುಗಳ ನಡುವೆ ಸ್ನೇಹ ಸೇತುವೆ ನಿರ್ಮಿಸಿದರು. ತಾವೂ ಸಹ ಮಕ್ಕಳೊಂದಿಗೆ ಮಗುವಾಗಿ ಕ್ರಿಕೆಟ್ ಆಡಿದರು. ಮಕ್ಕಳಲ್ಲಿ ಓದುವ ಆಸಕ್ತಿ ತನಗೆ ತಾನೇ ಬರುವಂತೆ ಮಾಡಿದರು” ಎಂದೆ.
“ರ‍್ವಾಗಿಲ್ವೇ, ಗಾದಿ ಮಾಸ್ತರು ಆಟ ಆಡ್ತಾ ಪಾಟ ಮಾಡ್ತಿದ್ರೇನು?” ವಿಶಾಲೂಗೆ ಆಶ್ಚರ್ಯ.
“ಹೌದು, ಗಾದಿ ಮಾಸ್ತರು ಬಂದ್ಮೇಲೆ ಶಾಲೆಯ ಸ್ವರೂಪಾನೇ ಬದಲಾವಣೆ ಆಯ್ತು. ತಪ್ಪು ಮಾಡಿದವನಿಗೆ ಶಿಕ್ಷೆ ಕೊಡ್ತಾ ಇದ್ರು. ಚೆನ್ನಾಗಿ ಓದಿದವರಿಗೆ ಪ್ರಶಂಸೆ ಮಾಡ್ತಾ ಇದ್ರು” ಎಂದೆ.
“ಮಕ್ಕಳ ಫಲಿತಾಂಶ ಏನಾಯ್ತು?”
“ಪ್ರತಿವರ್ಷ ಸುಧಾರಣೆ ಆಗ್ತಾ ಬಂತು. ೨೦೧೪ರಲ್ಲಿ ಬಂದ ಮಾಸ್ತರು ೨೦೨೪ಕ್ಕೆ ಶೇಕಡ ೯೯ರಷ್ಟು ಫಲಿತಾಂಶ ನೀಡಿದರು”
“ಹತ್ತು ವರ್ಷದಲ್ಲಿ ಅಷ್ಟು ಉತ್ತಮ ಫಲಿತಾಂಶಾನಾ?” ವಿಶಾಲೂಗೆ ಖುಷಿ.
“ಮಾಸ್ತರಿಗೆ ಹಿಂದಿಲ್ಲ ಮುಂದಿಲ್ಲ. ಮದುವೆಯಂತೂ ಮೊದಲೇ ಇಲ್ಲ. ಶಾಲಾ ಮಕ್ಕಳೇ ತಮ್ಮ ಮಕ್ಕಳು ಅಂತ ಹಗಲಿರುಳೂ ಚಿಂತಿಸಿ ವಿದ್ಯಾದಾನ ಮಾಡಿದರು. ದೇಶದ ಬಗ್ಗೆ ಅಭಿಮಾನ, ಗೌರವ ಬೆಳೆಸಿದರು. ದೀಪಾವಳಿ ಹಬ್ಬಗಳನ್ನು ಮಕ್ಕಳು ಮತ್ತು ಪೋಷಕರೊಂದಿಗೆ ಆಚರಿಸ್ತಿದ್ರು” ಎಂದೆ.
“ಬಹಳ ಇಂಟರೆಸ್ಟಿಂಗ್, ಮುಂದೆ ಹೇಳಿ” ಎಂದಳು ವಿಶಾಲೂ.
“೨೦೨೫ರ ವರ್ಷದಲ್ಲಿ ನೂರಕ್ಕೆ ನೂರು ಫಲಿತಾಂಶ ಬಂತು. ಅಷ್ಟೇ ಅಲ್ಲ, ಎರಡು ರ‍್ಯಾಂಕ್‌ಗಳು ಸಹ ಆ ಶಾಲೆಗೆ ಬಂದಿದ್ದು ಅಪ್ರತಿಮ ಸಾಧನೆ” ಎಂದೆ. ವಿಶಾಲೂಗೆ ಆನಂದವಾಗಿ ಚಪ್ಪಾಳೆ ಹೊಡೆದಳು.
“ಇಂಜಿನ್ ಸರಿ ಇದ್ರೆ ಬೋಗಿಗಳು ಸರಿಯಾಗಿ ಓಡುತ್ತೆ” ಎಂದ ವಿಶ್ವ. “ಅಬ್ಬಾ! ಆ ಗಾದಿ ಮಾಸ್ತರ್‌ನ ಎಷ್ಟು ಹೊಗಳಿದ್ರೂ ಸಾಲ್ದು ಕಣ್ರೀ” ಎಂದಳು ವಿಶಾಲೂ.
ರ‍್ಯಾಂಕ್ ಬಂದ ಮೇಲೆ ಸನ್ಮಾನದ ಸಮಸ್ಯೆ ಶುರುವಾಯ್ತು. ಯಾರಿಗೆ ಮಾಡಬೇಕು ಸನ್ಮಾನ? ಆಡಳಿತ ಮಂಡಳಿ ಸಭೆ ಮಾಡಿತು. ಪಾಸಾಗಿರೋದು ಯಾರು? ಮಾಸ್ತರಲ್ಲ, ಪಾಸಾಗಿರೋದು ವಿದ್ಯಾರ್ಥಿ. ವಿದ್ಯಾರ್ಥಿ ಹೇಗೋ ಪಾಸಾದ. ಮಾಸ್ತರೇನು ಪರೀಕ್ಷೆ ಬರೆದ್ರಾ? ಉತ್ತರ ಹೇಳಿಕೊಟ್ರಾ? ಗಾದಿ ಮಾಸ್ತರಿಗೆ ಇದರ ಕ್ರೆಡಿಟ್ ಕೊಡಬಾರದು ಎಂಬ ಕ್ಯಾತೆ ಶುರು ಆಯ್ತು.”
“ಶಾಲೆಗೆ ರ‍್ಯಾಂಕ್‌ಗಳು ಬಂದಿದ್ದು ಗಾದಿ ಮಾಸ್ತರ್ ಬಂದ ಮೇಲೆ ತಾನೇ?” ಎಂದಳು ವಿಶಾಲೂ.
“ಮಕ್ಕಳು ರ‍್ಯಾಂಕ್ ಪಡೆದಿದ್ದಾರೆ ನಿಜ. ಆದ್ರೆ ಅರ‍್ನ ಆ ಲೆವೆಲ್‌ಗೆ ತಯಾರಿ ಮಾಡಿದ್ದು ಗಾದಿ ಮಾಸ್ತರ್ ಅಲ್ವಾ?” ಎಂದು ಹಳ್ಳಿ ಜನರೂ ಕೇಳಿದರು.
“ಗಾದಿ ಮಾಸ್ತರ್ ಬಂದ್ಮೇಲೆ ನಮ್ಮ ಶಾಲೆಯ ವಾತಾವರಣಾನೇ ಬದಲಾವಣೆ ಆಗಿದೆ. ಮಕ್ಕಳಲ್ಲಿ ಶಿಸ್ತು ಬಂತು. ಸಂಪ್ರದಾಯ ಬಂತು. ದೇಶಭಕ್ತಿ ಬಂತು” ಎಂದೆಲ್ಲ ಜನ ಹೊಗಳಿದ್ದರು.
ಆದರೆ ಗ್ರಾಮಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಹೆಬ್ಬೆಟ್ಟಯ್ಯ ಇದಕ್ಕೆ ಸುತರಾಂ ಒಪ್ಪಲಿಲ್ಲ.
“ಸುಳ್ ಯಾಕ್ರೀ ಹೇಳ್ತೀರ? ನಮ್ಮಿಂದ ಅನುದಾನ ಈ ಶಾಲೆಗೆ ಇತ್ತು. ನೀವೆಲ್ಲ ಸಂಬಳಕ್ಕೆ ಪಾಠ ಮಾಡಿದ್ದೀರ. ಆದ್ದರಿಂದ ಇದ್ರಲ್ಲಿ ನಿಮ್ಮ ಪಾತ್ರ ಏನೇನೂ ಇಲ್ಲ” ಎಂದರು.
ಹತ್ತು ವರ್ಷದಲ್ಲಿ ಶೂನ್ಯ ಫಲಿತಾಂಶದಿಂದ ರ‍್ಯಾಂಕ್ ಮಟ್ಟಕ್ಕೆ ಶಾಲೆ ಬೆಳೆಸಿದ ಗಾದಿ ಮಾಸ್ತರನ್ನ ಸನ್ಮಾನ ಮಾಡ್ಬೇಕು ಅಂತೆಲ್ಲ ಪ್ರಜೆಗಳು ಮಾತಾಡ್ಕೊಂಡ್ರು. ಆದರೆ ಅಭಿವೃದ್ಧಿ ಮಂಡಳಿ ಒಪ್ಪಲಿಲ್ಲ.
“ಸನ್ಮಾನ ಗಾದಿ ಮಾಸ್ತರ್‌ಗೆ ಮಾಡ್ಬರ‍್ದು. ವಿದ್ಯಾರ್ಥಿಗೂ ಮಾಡಬರ‍್ದು. ಈಗ ಶಾಲೆ ನಡೆಸ್ತಿರೋದು ನಾವು. ಆದ್ದರಿಂದ ನಮ್ಗೇ ಸನ್ಮಾನ ಮಾಡ್ಬೇಕಾಗುತ್ತೆ” ಎಂದರು ಅಧ್ಯಕ್ಷ ಹೆಬ್ಬೆಟ್ಟಯ್ಯ.
“ಅಲ್ಲ, ಸ್ವಾಮಿ, ನಿಮ್ಮ ಮಂಡಳಿಯ ಅಧ್ಯಕ್ಷರು ಒಂದು ದಿನವೂ ಈ ಕಡೆ ಬಂದಿಲ್ಲ. ಶಾಲೇನ ನೋಡ್ತಿಲ್ಲ. ಆಗಸ್ಟ್ ೧೫ ರಂದು ಬಾವುಟ ಕೂಡ ಎಳೆದಿಲ್ಲ. ಅವರಿಗ್ಯಾಕೆ ಸನ್ಮಾನ ಮಾಡಬೇಕು” ಎಂದು ಕೆಲವರು ಪ್ರಶ್ನಿಸಿದರು.
“ಅದೇನೇ ಆಗ್ಲಿ, ನಮ್ಮ ಕೈ ಕೆಳಗೆ ಶಾಲೆ ಬರುತ್ತೆ. ಆದ್ದರಿಂದ ಮಾಸ್ತರಿಗೆ ಸನ್ಮಾನ ಹೋಗಬಾರದು. ರ‍್ಯಾಂಕ್ ಪಡೆದ ಕ್ರೆಡಿಟ್ ಪಾಠ ಹೇಳಿದವರಿಗೆ ನೀಡಬಾರದು. ನಾವು ಶಾಲೆ ನಡೆಸದೇ ಇದ್ದಿದ್ರೆ ನಿಮಗೆ ಏನು ಸಿಕ್ತಿತ್ತು ಸಾರಪ್ಪನ ಜುಟ್ಟು” ಎಂದು ಅಧ್ಯಕ್ಷರು ಗುಡುಗಿದರು.
ಮಾರಿ ಹಳ್ಳಿಯ ಶಾಲೆಗೆ ರ‍್ಯಾಂಕ್ ಬಂದಿದೆ ನಿಜ. ರ‍್ಯಾಂಕ್ ಪಡೆದ ಮಾತ್ರಕ್ಕೆ ಅದರ ಕ್ರೆಡಿಟ್ ಶಾಲೆಗೂ ಹೋಗಬಾರದು. ಮಾಸ್ತರಿಗೂ ಹೋಗಬಾರದು. ವಿದ್ಯಾರ್ಥಿಗಳಿಗೂ ಹೋಗಬಾರದು. ನಾವು ಅನುದಾನ ಕೊಟ್ಟಿದ್ದರಿಂದ ನಮಗೇ ಕ್ರೆಡಿಟ್ ಬರಬೇಕು ಎಂದು ಅಧ್ಯಕ್ಷರು ಮರ್ಯಾದೆ ಬಿಟ್ಟು ನುಡಿದಾಗ ಚೇಲಾಗಳಿಗೆ ಆನಂದ ಆಯ್ತು.
“ಕಡೆಗೆ?”
“ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷರನ್ನು ಕರೆದು ರ‍್ಯಾಂಕ್ ಬಂದ ಹುಡುಗನ ಬಗ್ಗೆ ವಶೀಲಿ ಮಾಡಿ ಒಂದು ಪ್ರಶಸ್ತಿ ಪತ್ರಕ್ಕಾದರೂ ಸಹಿ ಮಾಡಿ ಸಾರ್” ಎಂದರು ಮಂದಿ.
“ಸಹಿ ಇಲ್ಲ, ನಾನು ಹೆಬ್ಬೆಟ್ಟು. ತಗೊಳ್ಳಿ ಎಲ್ಲಿಗೆ ಬೇಕಾದ್ರೂ ಒತ್ಕೊಳ್ಳಿ” ಎಂದು ಅಧ್ಯಕ್ಷರು ಎಡಗೈ ಮುಂದೆ ಮಾಡಿದರು.