ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ರೈಲು ಪ್ರಯಾಣದ ದರ ಹೆಚ್ಚಿಸುವ ಮೂಲಕ ನರೇಂದ್ರ ಮೋದಿ ಸರ್ಕಾರ ಜನರ ಜೇಬು ಖಾಲಿ ಮಾಡಲು ಹೊರಟಿದೆ ಎಂದು ಆರೋಪಿಸಿದ್ದರು. ಈ ಹೇಳಿಕೆಗೆ ರಾಜ್ಯದ ಬಿಜೆಪಿ ನಾಯಕರು ತಿರುಗೇಟು ನೀಡಿದ್ದರು. ಈಗ ತುಮಕೂರು ಸಂಸದರು ಆಗಿರುವ ಕೇಂದ್ರ ಜಲ ಶಕ್ತಿ, ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ರೈಲು ದರ ಏರಿಕೆ ಕುರಿತು ಅಂಕಿ ಅಂಶಗಳ ಸಮೇತ ಸಿದ್ದರಾಮಯ್ಯಗೆ ವಿವರಣೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಸಚಿವ ವಿ.ಸೋಮಣ್ಣ, ‘ಕರ್ನಾಟಕದ ಮುಖ್ಯಮಂತ್ರಿಗಳೇ ಬುರುಡೆ ಬಿಡುವುದನ್ನು ಯಾವಾಗ ನಿಲ್ಲಿಸುತ್ತೀರಿ?’ ಎಂದು ಪ್ರಶ್ನೆ ಮಾಡಿದ್ದಾರೆ. ನಿಮ್ಮ ಆಡಳಿತದಲ್ಲಿ ಬೆಲೆ ಎಷ್ಟು ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.
‘ಬೆಲೆ ಹೆಚ್ಚಳದ ಬಗ್ಗೆ ನಿಮ್ಮ ಮಾತು ಕೇಳಿ ಭೂತದ ಬಾಯಲ್ಲಿ ಭಗವದ್ಗೀತೆ ಎನ್ನುವ ಗಾದೆ ನೆನಪಾಗುತ್ತಿದೆ. ತಾವು ರಾಜ್ಯದ ಸಿಎಂ ಆದ ಕ್ಷಣದಿಂದಲೇ ಕನ್ನಡಿಗರು ನಿಮ್ಮ ಬೆಲೆ ಏರಿಕೆಯ ಹೊಡೆತಕ್ಕೆ ಬಳಲಿ ಬೆಂಡಾಗಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ನಾನು ಸಿಎಂ ಆಗಿದ್ದರೆ ಪೆಟ್ರೋಲ್, ಡೀಸೆಲ್ ಬೆಲೆ 10 ರೂ. ಕಡಿಮೆ ಮಾಡುತ್ತೇನೆ ಎಂದು ಬೊಬ್ಬಿರಿದು, ನಿಮ್ಮ ಸರದಿ ಬಂದಾಗ ಪೆಟ್ರೋಲ್ ಮೇಲೆ ಒಟ್ಟು 3 ರೂ., ಡೀಸೆಲ್ ಮೇಲೆ ಒಟ್ಟು 5 ರೂ. ಬೆಲೆ ಹೆಚ್ಚಳ ಮಾಡಿದ್ದನ್ನು ಇಡೀ ರಾಜ್ಯವೇ ಕಂಡಿದೆ’ ಎಂದು ವಿ. ಸೋಮಣ್ಣ ನೆನೆಪು ಮಾಡಿಕೊಟ್ಟಿದ್ದಾರೆ.
‘ನಮ್ಮ ರೈಲ್ವೆ ಇಲಾಖೆಯ ಬೆಲೆ ಹೆಚ್ಚಳ ವಿಚಾರಕ್ಕೆ ಬಂದರೆ, 2012-13ರಲ್ಲಿ ನಿಮ್ಮದೇ ಯುಪಿಎ ಸರ್ಕಾರ ಒಂದೇ ಬಾರಿಗೆ ಪ್ರತಿ ಕಿ.ಮೀ.ಗೆ 10 ಪೈಸೆ (10 ಪಟ್ಟು ಹೆಚ್ಚು) ಬೆಲೆ ಹೆಚ್ಚಳ ಮಾಡಿತ್ತು. ಆದರೆ, ನಮ್ಮ ಸರ್ಕಾರ 11 ವರ್ಷಗಳ ನಂತರ ಕೇವಲ 1 ಪೈಸೆ (ಪ್ರತಿ ಕಿ.ಮೀ) ಬೆಲೆ ಹೆಚ್ಚಳ ಮಾಡಿದೆ’ ಎಂದು ಸೋಮಣ್ಣ ಹೇಳಿದ್ದಾರೆ.
‘ರೈಲ್ವೆಯ ಬೆಲೆ ಹೆಚ್ಚಳದ ವಿವರ (ಪ್ರತಿ ಕಿ.ಮೀ.ಗೆ). ಸಾಮಾನ್ಯ ರೈಲಿನ ಸೆಕೆಂಡ್ ಕ್ಲಾಸ್ ಪ್ರಯಾಣಕ್ಕೆ 1 ಪೈಸೆ ಹೆಚ್ಚಳ ಮಾಡಿದ್ದು, ಮೊದಲ 500 ಕಿ. ಮೀ. ಪ್ರಯಾಣಕ್ಕೆ ಇದು ಅನ್ವಯ ಆಗಲ್ಲ. ನಾನ್ ಎಸಿ ಎಕ್ಸ್‌ಪ್ರೆಸ್ ರೈಲುಗಳ ಪ್ರಯಾಣಕ್ಕೆ ಕೇವಲ 1 ಪೈಸೆ, ಎಸಿ ಕ್ಲಾಸ್ ಪ್ರಯಾಣಕ್ಕೆ ಕೇವಲ 2 ಪೈಸೆ ಹೆಚ್ಚಳ ಮಾಡಲಾಗಿದೆ. ಉಪನಗರ ರೈಲು ಪ್ರಯಾಣದಲ್ಲಿ ಯಾವುದೇ ದರ ವ್ಯತ್ಯಾಸವಾಗಿಲ್ಲ’ ಎಂದು ಸೋಮಣ್ಣ ವಿವರಿಸಿದ್ದಾರೆ.
‘ಅಲ್ಲದೇ, ಸನ್ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿಜೀಯವರ ನೇತೃತ್ವದಲ್ಲಿ ಕಳೆದ 11 ವರ್ಷಗಳಲ್ಲಿ ಭಾರತದ ರೈಲ್ವೆಯ ಮೂಲಸೌಕರ್ಯದ ಪ್ರಮಾಣ ಉತ್ತುಂಗಕ್ಕೇರಿದೆ. ಪ್ರಯಾಣಿಕರ ಸೌಕರ್ಯವನ್ನು ಹೆಚ್ಚಿಸಲು ಆಧುನೀಕರಣ, ಸುರಕ್ಷತೆ ಮತ್ತು ಅಭಿವೃದ್ಧಿಗೆ ನಮ್ಮ ಸರ್ಕಾರ ಆದ್ಯತೆ ನೀಡಿದೆ. ದೇಶದಾದ್ಯಂತ 136ಕ್ಕೂ ಹೆಚ್ಚು ಮಾರ್ಗಗಳಲ್ಲಿ ವಂದೇ ಭಾರತ್ ರೈಲುಗಳು ಸಂಚರಿಸುತ್ತಿವೆ. ರೈಲು ಅಪಘಾತಗಳನ್ನು ತಡೆಗಟ್ಟಲು ಕವಚ್ ಅನ್ನು ಕಾರ್ಯಗತಗೊಳಿಸಲಾಗುತ್ತಿದೆ’ ಎಂದು ತಿಳಿಸಿದ್ದಾರೆ.
‘ಸಾಮಾನ್ಯ ಪ್ರಯಾಣಿಕರ ಅನುಕೂಲಕ್ಕಾಗಿ 10,000 ಜನರಲ್ ಕೋಚ್‌ಗಳನ್ನು ತಯಾರಿಸಲಾಗುತ್ತಿದೆ. ಪ್ರಯಾಣಿಕರ ದೂರದ ಪ್ರಯಾಣವನ್ನು ಸುಗಮವಾಗಿಸಲು ಅಮೃತ್ ಭಾರತ್ ಎಕ್ಸ್ʼಪ್ರೆಸ್ ರೈಲುಗಳನ್ನು ಆರಂಭಿಸಲಾಗಿದೆ. ಅಲ್ಲದೇ, ರಾಜ್ಯದ 61 ರೈಲ್ವೆ ನಿಲ್ದಾಣಗಳನ್ನು ಅಮೃತ್ ಭಾರತ್ ರೈಲು ನಿಲ್ದಾಣ ಯೋಜನೆಯಡಿ ಅಭಿವೃದ್ಧಿಪಡಿಸಲಾಗುತ್ತಿದೆ. ಜನತೆ ಕೊಟ್ಟ ಅಧಿಕಾರವನ್ನು ಅವರ ಸೇವೆಗೆ, ಅವರ ಅಭಿವೃದ್ಧಿಗೆ ಮೀಸಲಿಡುವುದು ನಮ್ಮ ಸರ್ಕಾರದ ಬದ್ಧತೆಯೇ ಹೊರತು, ನಿಮ್ಮ ಹಾಗೆ ಬಡವರ, ಮಧ್ಯಮ ವರ್ಗದವರ ಕಿಸೆಗೆ ಕೈ ಹಾಕಿ ಆಡಳಿತ ನಡೆಸುವುದಲ್ಲ’ ಎಂದು ಖಡಕ್ ತಿರುಗೇಟು ಕೊಟ್ಟಿದ್ದಾರೆ.
ಜುಲೈ 1ರಿಂದ ಭಾರತೀಯ ರೈಲ್ವೆ ಪ್ರಯಾಣ ದರವನ್ನು ಏರಿಕೆ ಮಾಡಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಮಾನ್ಯ ಜನರ ಸಾರಿಗೆಯಾಗಿಯೇ ಜನಪ್ರಿಯವಾಗಿರುವ ರೈಲುಗಳ ಪ್ರಯಾಣ ದರವನ್ನು ಹೆಚ್ಚಿಸುವ ಮೂಲಕ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ದೇಶದ ಕೋಟ್ಯಂತರ ಮಧ್ಯಮ ಮತ್ತು ಬಡವರ್ಗದ ಬದುಕಿನ ಮೇಲೆ ಬರೆ ಎಳೆದಿದೆ. ಈ ಬೆಲೆ ಏರಿಕೆಯನ್ನು ತಕ್ಷಣ ಹಿಂದೆಗೆದುಕೊಳ್ಳಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಒತ್ತಾಯಿಸುತ್ತೇನೆ ಎಂದು ಪೋಸ್ಟ್ ಹಾಕಿದ್ದರು.