ರಾಜ್ಯದ ಮೂರು ಕಡೆ ತೋಟಗಾರಿಕೆ ತರಬೇತಿ ಕೇಂದ್ರಗಳ ಸ್ಥಾಪನೆ

ದಾವಣಗೆರೆ: ರಾಜ್ಯದ ಹಾವೇರಿ, ಹಾಸನ ಸೇರಿದಂತೆ ೬ ಕಡೆ ೧೪ ಸಾವಿರ ಟನ್ ಸಾಮರ್ಥ್ಯದ ಶೀತಲ ಘಟಕ ನಿರ್ಮಾಣ ಮಾಡಲಾಗುವುದು ಎಂದು ತೋಟಗಾರಿಕೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಎಸ್.ಎಸ್. ಮಲ್ಲಿಕಾರ್ಜನ್ ತಿಳಿಸಿದ್ದಾರೆ.
ನಗರದ ಗೃಹ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಮಾಹಿತಿ ಹಂಚಿಕೊಂಡು, ಸಚಿವ ಸಂಪುಟದ ನಿರ್ಣಯಗಳ ಮೇಲೆ ತೋಟಗಾರಿಕಾ ವಲಯಗಳ ಅಭಿವೃದ್ಧಿಗೆ ಹಲವು ಕಾರ್ಯಕ್ರಮಗಳನ್ನು ರೂಪುಗೊಳಿಸಲಾಗಿದೆ. ಆರ್‌ಐಡಿಎಫ್ ೨೯ನೇ ಟ್ರಾಂಚೆ ಅಡಿ ಹಾವೇರಿ, ಕೋಲಾರ, ಮಂಡ್ಯ ಶಿವಮೊಗ್ಗ, ವಿಜಯಪುರ ಮತ್ತು ಹಾಸನ ಜಿಲ್ಲೆಗಳಲ್ಲಿ ತೋಟಗಾರಿಕೆ ಬೆಳೆಗಾರರಿಗೆ ಅನುಕೂಲವಾಗುವಂತೆ ೧೪ ಸಾವಿರ ಟನ್ ಸಾಮರ್ಥ್ಯದ ೬ ಶೀತಲ ಘಟಕಗಳ ನಿರ್ಮಾಣವನ್ನು ರೂ. ೬೫.೯೭ ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ ಎಂದರು.
ಆರ್‌ಐಡಿಎಫ್ ೨೯ನೇ ಟ್ರಾಂಚೆ ಅಡಿ ಚಿತ್ರದುರ್ಗ, ರಾಯಚೂರು ಮತ್ತು ಉತ್ತರಕನ್ನಡ ಜಿಲ್ಲೆಗಳಲ್ಲಿ ೩ ತೋಟಗಾರಿಕೆ ತರಬೇತಿ ಕೇಂದ್ರಗಳು ಮತ್ತು ಬೆಳಗಾವಿ ಜಿಲ್ಲೆಯ ಅರಬಾವಿಯಲ್ಲಿ ೧ ವಿದ್ಯಾರ್ಥಿನಿಯರ ನಿಲಯ ನಿರ್ಮಾಣಕ್ಕೆ ಒಟ್ಟು ರೂ. ೩೫.೧೪ ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದರು.
ವಿಜಯಪುರ ಜಿಲ್ಲೆಯ ಅಲಮೇಲದಲ್ಲಿ ತೋಟಗಾರಿಕೆ ಕಾಲೇಜು ನಿರ್ಮಾಣ ಮಾಡಲು ರೂ.೩೯.೯೫ ಕೋಟಿಗಳ ಕಾಮಗಾರಿಗೆ ಅನುಮೋದನೆ ನೀಡಲಾಗಿದ್ದು, ೨೫ ವಿದ್ಯಾರ್ಥಿಗಳಿಗೆ ಬಾಗಲಕೋಟಿ ಕ್ಯಾಂಪಸ್‌ನಲ್ಲಿ ಪ್ರವೇಶ ನೀಡಲಾಗಿದೆ. ತೋಟಗಾರಿಕೆ ಬೆಳೆಗಳಲ್ಲಿ ಹೆಚ್ಚು ಇಂಗಾಲವನ್ನು ಹಿಡಿದಿಟ್ಟುಕೊಳ್ಳುವ ಬೆಳೆಗಳನ್ನು ಗುರುತಿಸಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾರ್ಬನ್ ಕ್ರೆಡಿಟ್ ರೂಪದಲ್ಲಿ ಮಾರಾಟ ಮಾಡುವ ಮೂಲಕ ರೈತರು ಹೆಚ್ಚಿನ ಆದಾಯ ಗಳಿಸಲು ೩ ಕಾರ್ಬನ್ ಕ್ರೆಡಿಟ್ ಫ್ರೇಮ್‌ವರ್ಕ್ ಯೋಜನೆಯನ್ನು ತೋಟಗಾರಿಕೆ ಇಲಾಖೆಯಲ್ಲಿ ಪ್ರಥಮ ಬಾರಿಗೆ ರಾಜ್ಯದ ರೈತರಿಗೆ ಪರಿಚಯಿಸಲಾಗುತ್ತಿದೆ ಎಂದರು.
ಪುಷ್ಪ ಕೃಷಿಯನ್ನು ಪ್ರೋತ್ಸಾಹಿಸಲು ಅಂತಾರಾಷ್ಟ್ರೀಯ ಪುಷ್ಪ ಹರಾಜು ಬೆಂಗಳೂರು ಸಂಸ್ಥೆಗೆ ಹೆಬ್ಬಾಳದಲ್ಲಿ ಬಾಡಿಗೆ ರಹಿತ ಆಧಾರದ ಮೇಲೆ ಜಮೀನು ನೀಡಲಾಗಿದೆ. ಪ್ರವಾಸೋದ್ಯಮ ಇಲಾಖೆಯ ಸಹಯೋಗದೊಂದಿಗೆ ನಂದಿ ಬೆಟ್ಟದಲ್ಲಿ ರೋಪ್‌ವೇ ನಿರ್ಮಿಸುವ ಸಲುವಾಗಿ ತೋಟಗಾರಿಕೆ ಇಲಾಖೆಯ ಜಮೀನನ್ನು ಮಂಜೂರು ಮಾಡಲಾಗಿದೆ ಎಂದು ಮಾಹಿತಿಯನ್ನು ನೀಡಿದರು.