ರಾಜ್ಯಕ್ಕೆ ಸುರ್ಜೇವಾಲ ಸುಮ್ನೆ ಬರಲ್ಲ

ಶಿವಮೊಗ್ಗ: ರಾಜ್ಯಕ್ಕೆ ಸುರ್ಜೇವಾಲ ಸುಮ್ನೆ ಬರಲ್ಲ, ಏನೋ ಅಜೆಂಡಾ ಇಟ್ಟುಕೊಂಡೆ ಬರುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಆಡಳಿತ ಸಂಪೂರ್ಣ ಕುಸಿದಿದೆ. ಇದಕ್ಕೆ ತಾಜಾ ಉದಾಹರಣೆ ಹಾಸನದಲ್ಲಿ ಸರಣಿ ಸಾವು ನಡೆಯುತ್ತಿದೆ. ಯುವಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅಲ್ಲಿನ ಉಸ್ತುವಾರಿ ಸಚಿವರು ಕಳೆದ ಮೂರು ತಿಂಗಳಿನಿಂದ ಅಲ್ಲಿಗೆ ಭೇಟಿ ನೀಡಿಲ್ಲ. ಕಳೆದ ಮೂರು ತಿಂಗಳಿನಿಂದ ಸಚಿವರು ಭೇಟಿ ನೀಡದೇ ಬೇಜವಾಬ್ದಾರಿತನ ತೋರುತ್ತಿದ್ದಾರೆ ಎಂದು ದೂರಿದರು.
ರಾಜ್ಯದಲ್ಲಿ ಸರ್ಕಾರದ ಬಗ್ಗೆ ಜನರು ಬೇಸತ್ತಿದ್ದಾರೆ. ಇಂತಹ ಸರ್ಕಾರ ಅಧಿಕಾರಕ್ಕೆ ತಂದಿದ್ದೆವಲ್ಲ ಎಂದು ಜನರು ಪಶ್ಚಾತ್ತಾಪ ಪಡುತ್ತಿದ್ದಾರೆ. ಮುಖ್ಯಮಂತ್ರಿ ಸ್ಥಾನದ ಬಗ್ಗೆಯೂ ಅನಿಶ್ಚಿತತೆ ಕಾಡುತ್ತಿದೆ. ಸುರ್ಜೇವಾಲ ಪದೇ ಪದೇ ಬಂದು ಶಾಸಕರ ಅಭಿಪ್ರಾಯ ಪಡೆದುಕೊಳ್ಳುತ್ತಿದ್ದಾರೆ ಎಂದರು.
ಮೂರು ದಿನಗಳವರೆಗೆ ಸುರ್ಜೇವಾಲ ಇರುವ ಹಿನ್ನೆಲೆ ಏನು ಎಂಬುದು ಮುಖ್ಯ. ಡಿ.ಕೆ. ಶಿವಕುಮಾರ್ ಜೊತೆಗೆ ನೂರು ಜನ ಶಾಸಕರು ಇದ್ದಾರೆ ಎಂಬುದು ಸಹ ಮುಖ್ಯ. ಬಿ.ಆರ್. ಪಾಟೀಲ್, ರಾಜು ಕಾಗೆ ಹೇಳಿಕೆ ಗಮನಿಸಿ, ಆಡಳಿತದ ಪಕ್ಷದ ಶಾಸಕರು ಮುಖ್ಯಮಂತ್ರಿಗಳ ಬಗ್ಗೆ ಸಂಪೂರ್ಣ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ತಿಳಿಸಿದರು.
ಬಂಗಾರಪ್ಪ ಬಡಾವಣೆಯಲ್ಲಿ ವಿಗ್ರಹ ಕೆಡವಿದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, ರಾಜ್ಯದಲ್ಲಿ ಧರ್ಮಗಳ ವಿಚಾರದಲ್ಲಿ ಸಂಘರ್ಷ ನಡೆಯುತ್ತಿರಬೇಕು ಎಂಬುದು ಇವರ ಉದ್ದೇಶ. ಮೈಸೂರಿನಲ್ಲಿ ಪೊಲೀಸ್ ಠಾಣೆಗೆ ನುಗ್ಗಿ ಬೆದರಿಕೆ ಹಾಕೋ ಕೆಲಸ ಆಯ್ತು. ಮಂಗಳೂರಿನಲ್ಲಿ ಸುಹಾ ಸ್‌ಶೆಟ್ಟಿ ಹತ್ಯೆ ಆಯ್ತು. ವ್ಯವಸ್ಥಿತ ಷಡ್ಯಂತ್ರದ ವಿರುದ್ಧ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾಗಿ ದೇಶದ್ರೋಹಿಗಳಿಗೆ ಧೈರ್ಯ ಬರುತ್ತಿದೆ ಎಂದರು.