ಶಿವಮೊಗ್ಗ: ಪಹಲ್ಗಾಮ್ ದಾಳಿಗೆ ಪ್ರತ್ಯುತ್ತರ ನೀಡಿದ ಭಾರತ ಸರ್ಕಾರದ ಆಪರೇಷನ್ ಸಿಂಧೂರ ದಾಳಿಯನ್ನು ಪಹಲ್ಗಾಮ್ನಲ್ಲಿ ಉಗ್ರರ ದಾಳಿಯಲ್ಲಿ ಮೃತಪಟ್ಟ ನಗರದ ಉದ್ಯಮಿ ಮಂಜುನಾಥ್ ರಾವ್ ತಾಯಿ ಸುಮತಿ ಅವರು ಸ್ವಾಗತಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, “ಸರಿಯಾದ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ರೀತಿ ಸುಮ್ಮನೆ ಒಂದು ದೇಶಕ್ಕೆ ನುಗ್ಗಿ, ನಮ್ಮ ವ್ಯವಸ್ಥೆಯನ್ನೆಲ್ಲ ಹಾಳು ಮಾಡುವುದು ತಪ್ಪು. ಅದಕ್ಕೆ ಸೇನೆಯು ಸರಿಯಾದ ಪಾಠ ಕಲಿಸುತ್ತದೆ, ಕಲಿಸಿದ್ದಾರೆ. ಮೋದಿ ಅವರು ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ. ಅನ್ಯಾಯವಾಗಿ 26 ಜನ ಅಮಾಯಕರ ಜೀವ ಹೋಯಿತು. ಇದಕ್ಕೆ ಸರಿಯಾಗಿ ನ್ಯಾಯ ಸಿಗಬೇಕು. ಯುದ್ಧ ಅಲ್ಲದಿದ್ದರೂ, ಏನಾದರೂ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ನಮಗೆ ಅನ್ನಿಸುತ್ತಿತ್ತು” ಎಂದಿದ್ದಾರೆ.
‘ನಮ್ಮವರನ್ನು ಕೊಂದವರಿಗೆ ಶಿಕ್ಷೆ ಆಗಬೇಕಿತ್ತು ಎಂಬುದು ನಮ್ಮ ಅಭಿಪ್ರಾಯ. ಅಮಾಯಕರಿಗೆ ಏನೂ ತೊಂದರೆ ಆಗಬಾರದು, ಎಲ್ಲರೂ ಚೆನ್ನಾಗಿರಬೇಕು ಎಂಬುದೇ ನಮ್ಮ ಇಚ್ಛೆ. ನಾವು ಬೇಡಿಕೊಳ್ಳುವುದು, ಪ್ರಾರ್ಥನೆ ಮಾಡಿಕೊಳ್ಳುವುದು ಅದನ್ನೇ. ಸರ್ವೇ ಜನ ಸುಖಿನೋ ಭವಂತು ಅಂತ ನಾವು ಕೇಳಿಕೊಳ್ಳುತ್ತೇವೆ” ಎಂದು ಸುಮತಿ ಪ್ರತಿಕ್ರಿಯಿಸಿದ್ದಾರೆ.