ಮೋದಿ ಪ್ರಧಾನಿಯಾದ ಬಳಿಕ ವರ್ಷದಲ್ಲಿ ರಾಜ್ಯದಲ್ಲಿ ರೈತಪರ ಸರ್ಕಾರ

Advertisement

ಹಾವೇರಿ(ರಾಣೆಬೆನ್ನೂರು): ಕೇಂದ್ರದಲ್ಲಿ ಮೋದಿ ಪ್ರಧಾನಿಯಾದರೆ ಒಂದೇ ವರ್ಷದಲ್ಲಿ ರಾಜ್ಯದಲ್ಲಿ ರೈತಪರ ಸರ್ಕಾರ ಬರಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಭವಿಷ್ಯ ನುಡಿದಿದ್ದಾರೆ.
ರಾಣೆಬೆನ್ನೂರು ತಾಲೂಕಿನ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದರು. ಹೆಗಲ ಮೇಲೆ ಕಂಬಳಿ ಹಾಕಿಕೊಂಡ ಮೇಲೆ ಪ್ರಾಮಾಣಿಕರಾಗಿ ಇರಬೇಕು. ನಾನು ಸಿಎಂ ಇದ್ದಾಗ ಕುರಿಗಾರರ ಸಂಘಗಳ ಮೂಲಕ ಕುರಿ ಖರೀದಿಗೆ ಎಂಟು ಲಕ್ಷ‌ ರೂ. ಕೊಡುವ 260 ಕೋಟಿ ರೂ. ಯೋಜನೆ ಮಾಡಿದ್ದೆ ಈ ಸರ್ಕಾರ ಬಂದು ಅದನ್ನು ನಿಲ್ಲಿಸಿದೆ ಎಂದು ಆರೋಪಿಸಿದರು.
ನಮ್ಮ ಸರ್ಕಾರದ ಅವಧಿಯಲ್ಲಿ ಕುರಿಗಾರರ ಅನುಕೂಲಕ್ಕಾಗಿ ಮಾಡಿದ ಯೋಜನೆಯನ್ನು ಈ ಸರ್ಕಾರ ನಿಲ್ಲಿಸಿದೆ. ಆ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸದಿದ್ದರೆ ನಾನು ಕೇಂದ್ರ ಸರ್ಕಾರದಿಂದ ಯೋಜನೆ ಜಾರಿ ಮಾಡಿ ಹಾಲುಮತ ಸಮುದಾಯಕ್ಕೆ ಅನುಕೂಲ ಮಾಡಿಕೊಡುತ್ತೇನೆ ಎಂದು ಹೇಳಿದರು.
ರಾಜ್ಯ ಮತ್ತು ಕೇಂದ್ರದಲ್ಲಿ ರೈತರ ಪರ ಸರ್ಕಾರ ಬರಬೇಕು. ಕೇಂದ್ರದಲ್ಲಿ ಮೋದಿ ಪ್ರಧಾನಿಯಾದರೆ ಒಂದೇ ವರ್ಷದಲ್ಲಿ ರಾಜ್ಯದಲ್ಲಿ ರೈತಪರ ಸರ್ಕಾರ ಬರಲಿದೆ. ರಾಣೆಬೆನ್ನೂರಿನಲ್ಲಿ ಎರಡು ಏತ ನೀರಾವರಿ ಯೋಜನೆಗಳನ್ನು ಮಾಡಿದ್ದೇವೆ. ರಾಣೆಬೆನ್ನೂರಿಗೆ ಮೆಗಾ ಮಾರ್ಕೆಟ್ ಮಾಡಿದ್ದೇವೆ. ಅಮೃತ ಯೋಜನೆ ಅಡಿಯಲ್ಲಿ ದಿನದ ಇಪ್ಪತ್ತು ನಾಲ್ಕು ಗಂಟೆ ನೀರು ನೀಡುವ ಯೋಜನೆ ಮಾಡಿದ್ದೇವೆ ಎಂದರು.