ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ

Advertisement

ಮಂಗಳೂರು: ನಗರದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸ್ಪೋಟಕ ಸಾಮಾಗ್ರಿಯಿಟ್ಟು ಸ್ಪೋಟಿಸುತ್ತೇವೆ ಎಂಬ ಬೆದರಿಕೆ ಇಮೇಲ್ ರವಾನೆಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಎಪ್ರಿಲ್ ೨೯ ರಂದು ಬೆಳಗ್ಗೆ ೯.೩೭ಕ್ಕೆ ಈ ಇ-ಮೇಲ್ ಸಂದೇಶ ಬಂದಿದೆ. ವಿಮಾನ ನಿಲ್ದಾಣದಲ್ಲಿ ಹಾಗೂ ವಿಮಾನದ ಒಳಗಡೆ ಸ್ಫೋಟಕಗಳನ್ನು ಇರಿಸಲಾಗಿದ್ದು, ಈ ಸ್ಫೋಟಕಗಳನ್ನು ಸ್ಪೋಟಿಸಿ ಜೀವಹಾನಿ ಮಾಡಲಾಗುತ್ತದೆ ಎಂದು ಇಮೇಲ್ ಬಂದಿತ್ತು. ಉಗ್ರರ ಹೆಸರಿನಲ್ಲಿ ಬಂದಿರುವ ಇಮೇಲ್ ಹಿನ್ನೆಲೆಯಲ್ಲಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ಮಂಗಳೂರಿನ ಬಜ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬಾಂಬ್ ಬೆದರಿಕೆ ಇಮೇಲ್ ಹಿನ್ನೆಲೆಯಲ್ಲಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಜೊತೆಗೆ ಸಂಪೂರ್ಣ ತಪಾಸಣೆ ಮಾಡಲಾಗಿದೆ. ಇದೇ ರೀತಿಯ ಬೆದರಿಕೆ ಇಮೇಲ್ ಸಂದೇಶ ಮಂಗಳೂರು ವಿಮಾನ ನಿಲ್ದಾಣ ಸೇರಿದಂತೆ ದೇಶದ ೨೫ಕ್ಕೂ ಅಧಿಕ ವಿಮಾನ ನಿಲ್ದಾಣಕ್ಕೆ ರವಾನೆಯಾಗಿದೆ ಎಂದು ತಿಳಿದು ಬಂದಿದೆ.