ಮೂರು ಹೆಣ್ಣುಮಕ್ಕಳನ್ನು ತಳ್ಳಿ ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ

ಬಳ್ಳಾರಿ(ಎಮ್ಮಿಗನೂರು): ಪತಿ ದಿನನಿತ್ಯ ಶೀಲ ಶಂಕಿಸಿ ನೀಡುತ್ತಿದ್ದ ಹಿಂಸೆ ತಾಳದೆ ಮಹಿಳೆಯೊಬ್ಬಳು ತನ್ನ ಮೂವರು ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಮೀಪದ ದಮ್ಮೂರು ಗ್ರಾಮದ ಬರದಹಳ್ಳಿ ರಾಘವೇಂದ್ರ ಎಂಬುವವರ ಜಮೀನಿನಲ್ಲಿ ಜರುಗಿದೆ.
ಮೃತರನ್ನು ಸಿದ್ದವ್ವ ಲಕ್ಷ್ಮೀ (೨೯), ಮಕ್ಕಳಾದ ಅಭಿಜ್ಞಾ (೭), ಅವನಿ (೫), ಆರಾಧ್ಯ (೩) ಎಂದು ಗುರುತಿಸಲಾಗಿದೆ. ಮೃತಪಟ್ಟ ಮಹಿಳೆ ಮಹಾರಾಷ್ಟ್ರ ರಾಜ್ಯದ ಕೊಲ್ಲಾಪುರ ಜಿಲ್ಲೆಯ ಹಸೂರು ಗ್ರಾಮದ ನಿವಾಸಿ. ಕುರಿ ಕಾಯಲು ದಮ್ಮೂರು ಕಗ್ಗಲ್ ಗ್ರಾಮದಲ್ಲಿ ವಾಸವಾಗಿದ್ದರು. ಮೃತ ಮಹಿಳೆಯ ಗಂಡ ಸಂಜಯ್‌ಕುಮಾರ್ ನಿತ್ಯ ಮೂವರು ಹೆಣ್ಣುಮಕ್ಕಳು ಬೇರೆಯವರಿಗೆ ಹುಟ್ಟಿದ್ದು ಎಂದು ಜಗಳ ಮಾಡುತ್ತ, ಸಾಯಿ ಎಂದು ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಮಹಿಳೆ ಮನನೊಂದು ಮೂರು ಮಕ್ಕಳನ್ನು ಕರೆದುಕೊಂಡು ಹೋಗಿ ಬಾವಿಗೆ ನೂಕಿ ತಾನೂ ಹಾರಿ ಆತ್ಮಹತ್ಯೆಗೆ ಮಾಡಿಕೊಂಡಿದ್ದಾಳೆ.
ಸ್ಥಳಕ್ಕೆ ಪಿಎಸ್‌ಐ ಸುಪ್ರೀತ್ ವಿರೂಪಾಕ್ಷಪ್ಪ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.