ಮೂರುದಿನ ಅವರಿಗೆ ಫ್ರೀ ಮೂರುದಿನ ನಮಗೆ ಪುಗಸಟ್ಟೆ

ಇಷ್ಟುದಿನ ಹೆಣ್ಣುಮಕ್ಕಳಿಗೆ ಫ್ರೀ ಬಸ್… ಪುಗಸೆಟ್ಟೆ ಎರಡು ಸಾವಿರ ರೂ ಎಲ್ಲವೂ ಕೊಟ್ಟಿದ್ದಾರೆ. ಈ ಬಾರಿ ನಮಗೆ ಗ್ಯಾರಂಟಿ ಎಂದು ತಳವಾರ್ಕಂಟಿ ನೇತೃತ್ವದ ಜಾಲಿಕಟ್ಟೆ ಪತಿ ಸಂಘದ ಸದಸ್ಯರು ಬಹಳ ಖುಷಿಯಿಂದ ಇದ್ದಾರೆ. ಅವರು ಫ್ರೀ ಮಾಡಿದಾಗಿನಿಂದ ನಾವು ಸರಿಯಾಗಿ ಊಟ ಮಾಡಿಲ್ಲ-ಇವರೆಲ್ಲ ಪಾಂಡ್ಸ್ ಪೌಡರ್ ಹಚ್ಚಿಕೊಂಡು ಊರೂರು ತಿರುಗಾಡಿಕೊಂಡು ಬರುತ್ತಿದ್ದಾರೆ. ಬರುವ ಎರಡು ಸಾವಿರ ರೂಗಳಲ್ಲಿ ಅದೇನು ಚೈನಿ ಹೊಡೆದಿದ್ದಾರೆ, ಏನ್ಕತೆ ಅಬ್ಬಬ್ಬ..! ನಾವೆಲ್ಲ ಆಸತ್ತು ಬ್ಯಾಸತ್ತು ಕೊನೆಗೆ ಮದ್ರಾಮಣ್ಣನ ಕಡೆ ಹೋಗಿ ನೋಡ್ರಿ ಹಿಂಗಿಂಗೆ ಆಗ್ತಾ ಇದೆ ಇದಕ್ಕೆ ಪರಿಹಾರ ಅಂದರೆ ನಮಗೂ ಫ್ರೀ ಬಸ್ಸು ಬೇಕು.. ನಮಗೂ ಎರಡು ಇಲ್ಲದಿದ್ದರೂ ಒಂದೂವರೆ ಸಾವಿರ ಆದರೂ ಬೇಕು ಎಂದು ಒಂದಲ್ಲ ಎರಡಲ್ಲ ಅನೇಕ ಬಾರಿ ಮನವಿ ಮಾಡಿದಾಗ… ಅವರು ಆಯ್ತಪ್ಪ ಈ ಬಾರಿ ಬಜೆಟ್‌ನಲ್ಲಿ ನೋಡನ ಅಂತ ಹೇಳಿದ್ದಾರೆ. ಮದ್ರಾಮಣ್ಣೋರು ನೋಡನ ಅಂದರೆ ಮುಗಿಯಿತು ಅಲ್ಲಿಗೆ ಕೆಲಸ ಆಯಿತು ಎಂದೇ ಅರ್ಥ ಎಂದು ಸದಸ್ಯರು ಲೆಕ್ಕ ಹಾಕಿ ಹಾಕಿ ಮಾತನಾಡುತ್ತಿದ್ದಾರೆ. ಇದಕ್ಕೆ ರಂಗೂಬಾಯಿ, ಹೊಟೆಲ್ ಶೇಷಮ್ಮ, ಕಂಟ್ರಂಗಮ್ಮತ್ತಿ ಮುಂತಾದವರು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ ಎಂಬ ಗುಸುಗುಸು ಹಬ್ಬಿದೆ. ಈ ಹೆಣ್ಣುಮಕ್ಕಳು ಏನು ಬೇಕಾದ್ದು ಅನ್ನಲಿ, ಈಗಾಗಲೇ ಸೂಟ್‌ಕೇಸ್‌ನಲ್ಲಿ ನಮ್ಮ ಲಿಸ್ಟ್ ಭದ್ರವಾಗಿ ಕುಂತಿದೆ. ಒಂದು ವೇಳೆ ಮದ್ರಾಮಣ್ಣೋರು ನಮಗೆ ಫ್ರೀ ಬಸ್ಸು-ಒಂದೂವರೆ ಸಾವಿರ ಕೊಡಲು ಬಜೆಟ್‌ನಲ್ಲಿ ಘೋಷಿಸಿದ್ದೇ ಆದರೆ ನಾವು ಋಣ ಇಟ್ಟುಕೊಳ್ಳುವುದಿಲ್ಲ. ನಾವೇನೂ ಹೆಣ್ಣುಮಕ್ಕಳಿಗೆ ಕೊಡಬೇಡ ಅನ್ನುವುದಿಲ್ಲ. ವಾರದಲ್ಲಿ ಮೂರುದಿನ ಅವರಿಗೆ ಫ್ರೀ ಬಸ್ಸು-ಇನ್ನೂ ಮೂರುದಿನ ನಮಗೆ ಫ್ರೀ… ಇನ್ನು ಎರಡು ಸಾವಿರ ರೂಗಳಲ್ಲಿ ಒಂದು ನಮಗೆ, ಒಂದು ಅವರಿಗೆ, ಮದ್ರಾಮಣ್ಣೋರು ತಿಳಿಯಬೇಕು-ನಾವು ಉಳಿಯಬೇಕು. ಅವರು ನಮ್ಮ ಪರವಾಗಿ ಇದ್ದಾರೆ ಎಂಬ ವಿಶ್ವಾಸ ನಮಗಿದೆ. ಈ ಬ ಬಜೆಟ್‌ನಲ್ಲಿ ಈ ಸಲ ನಮಗೇ ಗ್ಯಾರಂಟಿ ಎಂದು ಅಲ್ಲಲ್ಲಿ ಪೋಸ್ಟರ್ ಅಂಟಿಸುತ್ತಿದ್ದಾರೆ.