ಮುತ್ತಿಗೆ ಹಾಕಲು ಬಂದವರ ಬಂಧನ

ಮದ್ರಾಮಣ್ಣೋರು ಈ ಸಲ ನಮಗೆ ಭಾರೀ ಭಾರೀ ಕೊಟ್ಟಿದ್ದಾರೆ. ಅದಕ್ಕೆ ಅಲ್ಲಿಗೆ ಹೋಗುತ್ತೇನೆ ಎಂದು ಹೋಟೆಲ್ ಶೇಷಮ್ಮ, ಜ್ಞಾನಿ ಗ್ಯಾನಮ್ಮ, ಕ್ವಾಟಿಗ್ವಾಡಿ ಸುಂದ್ರವ್ವ ಎಲ್ಲರೂ ಹೊರಡಲು ಅನುವಾಗಿದ್ದಾರೆ. ಏನು ಕೊಟ್ಟಿದ್ದಾರೋ, ಏನು ಬಿಟ್ಟಿದ್ದಾರೋ ಒಟ್ಟಿನಲ್ಲಿ ಕೊಟ್ಟಿದ್ದು ಮಾತ್ರ ನಿಜ ಅವೆಲ್ಲ ಹಾಗೆ ತರಲು ಆಗುವುದಿಲ್ಲ ಎಂದು ಅವರೆಲ್ಲ ಟ್ರ್ಯಾಕ್ಟರ್, ಚಕ್ಕಡಿ ರೆಡಿ ಮಾಡಿದ್ದಾರಂತೆ. ಅವತ್ತು ಚಹ ಕುಡಿಯಲು ಹೋಟೆಲ್‌ಗೆ ಹೋಗಿದ್ದ ತಿಗಡೇಸಿಗೆ, ಇಂಗಿಂಗೆ ತಿಗಡ್ಯಾ… ಮದ್ರಾಮಣ್ಣೋರು ಈ ಬಜೆಟ್‌ನಲ್ಲಿ ಏನೇನೋ ಕೊಟ್ಟಿದ್ದಾರಂತೆ, ಕೊಟ್ಟಿದ್ದನ್ನು ತರಲು ಟ್ರ್ಯಾಕ್ಟರ್, ಚಕ್ಕಡಿ ತೆಗೆದುಕೊಂಡು ಹೋಗುತ್ತೇವೆ. ನೀನೂ ಬರುತ್ತಿದ್ದರೆ ಬಾ ಅಂದಳು. ಅದಕ್ಕೆ ತಿಗಡೇಸಿ, ನಮಗೇನೂ ಕೊಟ್ಟಿಲ್ಲ, ನಾನು ಅಲ್ಲಿಗೆ ಬಂದರೆ ಆತನನ್ನು ನೋಡಿ ಸಿಟ್ಟಿಗೆದ್ದು ನಾ ಒಂದು ಅನಬೇಕು ಯಾಕೆ ಬೇಕು ನೀವು ಹೋಗಿಬಂದು ಬಿಡಿ ಎಂದು ಹೇಳಿದ. ಸುತ್ತ ಹತ್ತೂರು ಜನ ಆಕೆಯ ಹೋಟೆಲ್‌ಗೆ ಬರುತ್ತಿದ್ದರಿಂದ ಎಲ್ಲರ ಮುಂದೆ ಹಿಂಗಿಂಗೆ ಎಂದು ಹೇಳುತ್ತಿದ್ದಳು. ಅವರು ಹೀಗೂ ಕೊಡುತ್ತಾರಾ? ಶೇಷಮ್ಮ ಅಲ್ವ ಕೊಟ್ಟರೂ ಕೊಟ್ಟಿರಬಹುದು ಎಂದು ಮಾತನಾಡಿಕೊಂಡರು. ಕಂಟ್ರಂಗಮ್ಮತ್ತಿ, ನೋಡ್ರವಾ ಹಂಗಲ್ಲ ಅದು ಆತ ಕೊಟ್ಟಾನೋ ಬಿಟ್ಟಾನೋ ಯಾರಿಗೂ ಗೊತ್ತಿಲ್ಲ. ಆ ಕುಂಟ್ ಸತ್ಯಪ್ಪನ ಮಾತು ಕೇಳುತ್ತೀರಲ್ಲ ನಿಮಗೇನು ಹೇಳಬೇಕೋ ಗೊತ್ತಿಲ್ಲ. ನನ್ನಷ್ಟು ಅನುಭವ ನಿಮಗಿಲ್ಲ ನೋಡಿ ಎಂದು ಹೇಳಿದರೂ ಅವರು ಯಾರೂ ಕೇಳಲಿಲ್ಲ. ಎರಡು ದಿನ ಮುಂಚೆ ಚಕ್ಕಡಿ, ಟ್ರ್ಯಾಕ್ಟರ್ ಕಳುಹಿಸಿ ನೀವು ಮದ್ರಾಮಣ್ಣನ ಮನೆಮುಂದೆ ನಿಂತಿರಿ ನಾವು ಅಲ್ಲೇ ಬರುತ್ತೇವೆ ಎಂದು ಕೆಂಪುಬಸ್ಸು ಹತ್ತಿ ಹೋದರು. ಅಲ್ಲಿ ಮದ್ರಾಮಣ್ಣನವರ ಮನೆ ಮುಂದೆ ಯಾವುದೇ ಟ್ರ್ಯಾಕ್ಟರ್ ನಿಂತಿರಲಿಲ್ಲ. ಇಲ್ಲೇನಾದರೂ ಟ್ರ್ಯಾಕ್ಟರ್, ಚಕ್ಕಡಿ ಬಂದಿದ್ದವೇ ಸೆಕ್ಯುರಿಟಿ ಗಾರ್ಡ್ಗೆ ಕೇಳಿದರು. ಅವನು ಅವೆಲ್ಲ ನಿಮ್ಮವೇ ಎಂದು ಕೇಳಿದಾಗ ಹೌದು ಅಂದಳು. ನಿಂತಿರಿ ಇಲ್ಲೇ ಎಂದು ಹೇಳಿದ ಸೆಕ್ಯುರಿಟಿ ಗಾರ್ಡ್ ಆ ಕಡೆ ಹೋಗಿ ಯಾರಿಗೋ ಫೋನ್ ಮಾಡಿದ. ಕೂಡಲೇ ಪೊಲೀಸ್ ವ್ಯಾನ್ ಬಂದು ಅವರನ್ನು ಹತ್ತಿಸಿಕೊಂಡು ಹೋದರು. ಚಕ್ಕಡಿ, ಟ್ರ್ಯಾಕ್ಟರ್ ತೆಗೆದುಕೊಂಡು ಬಂದು ಮದ್ರಾಮಣ್ಣನವರ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದವರ ಬಂಧನ ಎಂಬ ಸುದ್ದಿ ಆಯಿತು.