180 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕ್ರೀಡಾ ಸಂಕೀರ್ಣ ಕಾಮಗಾರಿಯ ಪರಿಶೀಲನೆ
ಹುಬ್ಬಳ್ಳಿ: ಮುಂಬರುವ ವರ್ಷಗಳಲ್ಲಿ ಕ್ರೀಡಾ ಗ್ರಾಮವನ್ನೇ ರೂಪಿಸುವ ಕನಸಿನೊಂದಿಗೆ ಮೊದಲ ಹಂತವಾಗಿ ಹುಬ್ಬಳ್ಳಿಯ ಲೋಹಿಯಾ ನಗರದಲ್ಲಿ 180 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಹುಬ್ಬಳ್ಳಿಯ ಲೋಹಿಯಾ ನಗರದಲ್ಲಿ 180 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಕ್ರೀಡಾ ಸಂಕೀರ್ಣದ ಕಾಮಗಾರಿಯ ಪರಿಶೀಲನೆ ಮಾಡಲಾಯಿತು ಖೇಲೋ ಇಂಡಿಯಾ ಮತ್ತು ಸ್ಮಾರ್ಟ ಸಿಟಿಯ ಅನುದಾನಗಳಲ್ಲಿ ಈ ಕ್ರೀಡಾ ಸಂಕೀರ್ಣ ನಿರ್ಮಾಣವಾಗುತ್ತಿದ್ದು. ಮುಂಬರುವ ವರ್ಷಗಳಲ್ಲಿ ಕ್ರೀಡಾ ಗ್ರಾಮವನ್ನೇ ರೂಪಿಸುವ ಕನಸಿನೊಂದಿಗೆ ಮೊದಲ ಹಂತವಾಗಿ ಈ ಕ್ರೀಡಾ ಸಂಕೀರ್ಣದ ನಿರ್ಮಾಣ ಕೈಗೆತ್ತಿಕೊಳ್ಳಲಾಗಿದೆ. ಈ ಸಂಕೀರ್ಣದ ಬಹುತೇಕ ಕಾಮಗಾರಿ ಮುಕ್ತಾಯಗೊಂಡಿದ್ದು ಇದೇ ಮೇ ಅಂತ್ಯದ ವೇಳೆಗೆ ಹೊರಾಂಗಣ ಆಟದ ಸೌಲಭ್ಯಗಳು ಲಭ್ಯವಾಗಲಿವೆ ಹಾಗೂ ಒಳಾಂಗಣ ಆಟದ ಸೌಲಭ್ಯಗಳು ಜೂನ್ ವೇಳೆಗೆ ಸಿದ್ಧವಾಗಲಿವೆ.
6.75 ಎಕರೆ ಜಾಗೆಯಲ್ಲಿ ಹೊರಾಂಗಣ ಕ್ರೀಡೆಗಳ ಸೌಲಭ್ಯಗಳು ಹಾಗೂ 2.75 ಜಾಗೆಯಲ್ಲಿ ಒಳಾಂಗಣ ಕಟ್ಟಡಗಳು ನಿರ್ಮಾಣವಾಗಿದ್ದು ಒಟ್ಟು 15 ಎಕರೆ ಜಮೀನು ಈ ಸಂಕೀರ್ಣದ ನಿರ್ಮಾಣಕ್ಕಾಗಿ ಬಳಸಲಾಗುತ್ತಿದೆ. ಕುಸ್ತಿ, ವಾಲಿಬಾಲ್, ಹಾಕಿ ಸೇರಿದಂತೆ 19 ಬಗೆಯ ಕ್ರೀಡೆಗಳಿಗೆ ಅವಶ್ಯವಿರುವ ಸೌಲಭ್ಯಗಳು ಈ ಕ್ರೀಡಾಂಗಣದಲ್ಲಿ ಸಿದ್ಧವಾಗುತ್ತಿವೆ. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರಕಾರ ಹಾಗೂ ಖೇಲೋ ಇಂಡಿಯಾ ಅಭಿಯಾನ ಅತ್ಯಂತ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಪ್ರೇರಣೆಯಿಂದ ಧಾರವಾಡ ಲೋಕಸಭಾ ಕ್ಷೇತ್ರದ ಕ್ರೀಡಾಪಟುಗಳ ಸರ್ವಾಂಗೀಣ ಅಭಿವೃದ್ಧಿಯ ದೃಷ್ಟಿಯಿಂದ ಈ ಕ್ರೀಡಾ ಸಂಕೀರ್ಣ ಸ್ಥಾಪಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದಿದ್ದಾರೆ.
ಇನ್ನು ಕಾಮಗಾರಿಯ ಪರಿಶೀಲನೆ ಸಂದರ್ಭದಲ್ಲಿ ಶಾಸಕ ಅರವಿಂದ ಬೆಲ್ಲದ, ಹು-ಧಾ ಮಹಾನಗರ ಪಾಲಿಕೆಯ ಮಹಾಪೌರರಾದ ರಾಮಣ್ಣ ಬಡಿಗೇರ, ಉಪಮಹಾಪೌರರು, ಪಾಲಿಕೆಯ ಸದಸ್ಯರಾದ ರೂಪಾ ಶೆಟ್ಟಿ, ಸತೀಶ ಹಾನಗಲ್ ಹಾಗೂ ಸ್ಮಾರ್ಟ್ಸ್ ಸಿಟಿ ಅಧಿಕಾರಿಗಳು ಉಪಸ್ಥಿತರಿದ್ದರು.