ಮಾಲಿಯಲ್ಲಿ ಮೂವರು ಭಾರತೀಯರನ್ನು ಅಪಹರಿಸಿದ ಅಲ್​-ಖೈದಾ ಉಗ್ರರು

ಮಾಲಿಯ ಸಿಮೆಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಮೂವರು ಭಾರತೀಯ ಪ್ರಜೆಗಳನ್ನು ನಿಷೇಧಿತ ಭಯೋತ್ಪಾದಕ ಸಂಘಟನೆ, ಅಪಹರಿಸಿದೆ ಎಂದು ಸ್ಥಳೀಯ ಅಧಿಕಾರಿಗಳು ದೃಢಪಡಿಸಿದ್ದಾರೆ.
ಪಶ್ಚಿಮ ಮಾಲಿಯ ಕೇಯ್ಸ್ ಪ್ರದೇಶದಲ್ಲಿರುವ ಡೈಮಂಡ್ ಸಿಮೆಂಟ್ ಕಾರ್ಖಾನೆಯ ಮೇಲೆ, ಭಾರಿ ಶಸ್ತ್ರಸಜ್ಜಿತ ದಾಳಿಕೋರರು ಸಂಘಟಿತ ದಾಳಿ ನಡೆಸಿದಾಗ ಈ ಘಟನೆ ಸಂಭವಿಸಿದೆ. ದಾಳಿಯ ಸಮಯದಲ್ಲಿ ಬಂದೂಕುಧಾರಿಗಳು ಕಾರ್ಖಾನೆಗೆ ನುಗ್ಗಿ ಕಾರ್ಮಿಕರನ್ನು ಒತ್ತೆಯಾಳುಗಳಾಗಿ ಸೆರೆ ಹಿಡಿದಿದ್ದಾರೆ ಎಂದು ಸ್ಥಳೀಯ ವರದಿಗಳು ಉಲ್ಲೇಖಿಸಿವೆ. ಮಾಲಿಯಾದ್ಯಂತ ಅನೇಕ ದಾಳಿಗಳನ್ನು ನಡೆಸಿರುವ ಅಲ್-ಖೈದಾ ಸಂಬಂಧಿತ ಉಗ್ರ ಸಂಘಟನೆ ಈ ಅಪಹರಣದ ಹಿಂದಿದೆ ಎಂದು ಶಂಕಿಸಲಾಗಿದೆ. ಈ ಮಧ್ಯೆ ಭಾರತೀಯ ಪ್ರಜೆಗಳ ಅಪಹರಣಕ್ಕೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಸುರಕ್ಷಿತ ಬಿಡುಗಡೆಗೆ ಮನವಿ ಮಾಡಿದೆ. ಮಾಲಿಯ ರಾಜಧಾನಿ ಬಮಾಕೊದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಸ್ಥಳೀಯ ಆಡಳಿತ, ಕಾನೂನು ಜಾರಿ ಸಂಸ್ಥೆಗಳು ಮತ್ತು ಸಿಮೆಂಟ್ ಕಾರ್ಖಾನೆ ಆಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಅಲ್ಲದೆ, ಅಪಹರಣಕ್ಕೊಳಗಾದ ಭಾರತೀಯರ ಕುಟುಂಬಗಳಿಗೂ ಪರಿಸ್ಥಿತಿಯ ಬಗ್ಗೆ ತಿಳಿಸಲಾಗುತ್ತಿದೆ. ಈ ಘಟನೆಯನ್ನು ‘ಅತ್ಯಂತ ಖಂಡನೀಯ ಹಿಂಸಾಚಾರ’ ಎಂದು ಸರ್ಕಾರ ಕರೆದಿದೆ ಮತ್ತು ಭಾರತೀಯ ಪ್ರಜೆಗಳು ಬೇಗನೆ ಮತ್ತು ಸುರಕ್ಷಿತವಾಗಿ ಮರಳುವುದನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡುವಂತೆ ಮಾಲಿ ಸರ್ಕಾರಕ್ಕೆ ಮನವಿ ಮಾಡಿದೆ.