ಆರು ಜನರನ್ನೊಳಗೊಂಡ ತಂಡ ಓಡಾಡುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ
ಚಳ್ಳಕೆರೆ: ಮಾರಕಾಸ್ತಗಳನ್ನು ಹಿಡಿದು ಆರು ಜನರ ತಂಡವೊಂದು ಮನೆಗಳಿಗೆ ನುಗ್ಗಿ ದರೋಡೆ ಮಾಡಲು ಯತ್ನಿಸಿದ್ದು, ನಾಗರಿಕರನ್ನು ಬೆಚ್ಚಿ ಬೀಳಿಸಿದೆ.
ಪಟ್ಟಣದ ತಿಪ್ಪೇಸ್ವಾಮಿ ಲೇಔಟ್‌ನಲ್ಲಿರುವ ವಕೀಲ ಜಯಶೀಲರೆಡ್ಡಿ ಎಂಬುವರ ಮನೆಯಲ್ಲಿ ಶನಿವಾರ ತಡರಾತ್ರಿ ಈ ತಂಡ ದರೋಡೆ ಮಾಡುವ ಯತ್ನ ನಡೆಸಿದೆ. ಅವರ ಮನೆಯ ಬಾಗಿಲು ಮುರಿದು ಕಳ್ಳರು ಒಳನುಗ್ಗಲು ಯತ್ನಿಸಿದ್ದಾರೆ.
ಮನೆಯ ಬಾಗಿಲು ತೆರೆದಿರುವುದನ್ನು ಗಮನಿಸಿದ ಅಕ್ಕಪಕ್ಕದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಚಳ್ಳಕೆರೆ ಡಿವೈಎಸ್ಪಿ ಟಿ.ಬಿ.ರಾಜಣ್ಣ, ಇನ್ಸ್‌ಪೆಕ್ಟರ್ ಕೆ.ಕುಮಾರ್, ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ದರೋಡೆಕೋರರು ಮನೆಯ ಮುಂಭಾಗದ ಇಂಟರ್‌ಲಾಕ್ ಮುರಿದು ಒಳನುಗ್ಗಲು ಯತ್ನಿಸಿದ್ದು, ಮನೆಯಲ್ಲಿದ್ದ ವಸ್ತುಗಳನ್ನು ಜಾಲಾಡಿದ್ದಾರೆ. ಅದೃಷ್ಟವಶಾತ್, ಯಾವುದೇ ನಗದು ಅಥವಾ ಬೆಲೆಬಾಳುವ ವಸ್ತುಗಳು ಕಳ್ಳತನವಾಗಿಲ್ಲ ಎಂದು ದೃಢಪಟ್ಟಿದೆ.
ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ, ಆರು ಜನರ ತಂಡವೊಂದು ಕೆಲವು ಆಯುಧಗಳನ್ನು ಹಿಡಿದು ಮನೆಯೊಳಗೆ ಪ್ರವೇಶಿಸುವ ದೃಶ್ಯ ಸೆರೆಯಾಗಿದೆ. ಈ ತಂಡದ ಸದಸ್ಯರು ಚಡ್ಡಿಗಳನ್ನು ಧರಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ದೃಶ್ಯಗಳ ಆಧಾರದ ಮೇಲೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು, ದರೋಡೆಕೋರರನ್ನು ಪತ್ತೆ ಹಚ್ಚಲು ಬಲೆ ಬೀಸಿದ್ದಾರೆ.