ಮಹಾದಿಂದ 59,965 ಕ್ಯೂಸೆಕ್ ನೀರು ಬಿಡುಗಡೆ

ಬೆಳಗಾವಿ(ಯಕ್ಸಂಬಾ): ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆ ಮತ್ತು ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನಲ್ಲಿನ ಮಳೆಯಿಂದಾಗಿ ಪಂಚನದಿಗಳಿಗೆ ನದಿಗಳ ನೀರಿನ ಮಟ್ಟ ಸುಮಾರು 5 ರಿಂದ 6 ಅಡಿ ಏರಿಕೆಯಾಗಿದೆ. 7 ಬ್ಯಾರೇಜಗಳು ಜಲಾವೃತಗೊಂಡು ಸಂಚಾರ ಸ್ಥಗಿತಗೊಂಡಿದೆ.
ವೇದಗಂಗಾ ನದಿಯ ಬಾರವಾಡ-ಕುನ್ನುರ, ಅಕ್ಕೋಳ-ಸಿದ್ನಾಳ ಮತ್ತು ಭೋಜ-ಶಿವಾಪುರವಾಡಿ, ದೂಧಗಂಗಾ ನದಿಯ ಕಾರದಗಾ-ಭೋಜ ಮತ್ತು ಮಲಿಕವಾಡ-ದತವಾಡ ಮತ್ತು ಕೃಷ್ಣಾ ನದಿಯ ಕಲ್ಲೋಳ-ಯಡೂರ ಮತ್ತು ಮಾಂಜರಿ-ಸವದತ್ತಿ ಬ್ಯಾರೇಜಗಳು ಜಲಾವೃತಗೊಂಡು ಸಂಚಾರ ಸ್ಥಗಿತಗೊಂಡಿದೆ. ಜತ್ರಾಟ-ಭಿವಸಿ ಮುಳುಗುವ ಹಂತ ತಲುಪಿದೆ. ಇದರಿಂದ ಸುತ್ತುವರೆದು ಪ್ರಯಾಣ ಬೆಳೆಸುವ ಪ್ರಸಂಗ ಬಂದೂದಗಿದೆ.
ಸುಳಕುಡ ಬ್ಯಾರೇಜ್ ಮೂಲಕ ೧೫,೪೮೦ ಮತ್ತು ರಾಜಾಪುರ ಬ್ಯಾರೇಜ್ ಮೂಲಕ ೪೪,೧೨೫ ಕ್ಯೂಸೆಕ್ ಸೇರಿ ಒಟ್ಟು ೫೯,೯೬೫ ಕ್ಯೂಸೆಕ್ ನೀರು ರಾಜ್ಯಕ್ಕೆ ಹರಿದು ಬರುತ್ತಿವೆ. ಮಹಾರಾಷ್ಟ್ರ ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಮಳೆ ಸುರಿಯುತ್ತಿರುವುದರಿಂದ ಕೃಷ್ಣಾ ಮತ್ತು ದೂಧಗಂಗಾ ಸೇರಿದಂತೆ ನದಿಗೆ ನೀರು ಕಳೆದೆರಡು ದಿನಗಳಿಂದ ಹರಿದು ಬರುತ್ತಿದ್ದು ಇಂದು ನದಿಗಳ ನೀರಿನ ಮಟ್ಟ ಮತ್ತಷ್ಟು ಎರಿಕೆಯಾಗಿದ್ದರಿಂದ ಕೆಳಹಂತದ ಬ್ಯಾರೇಜ್‌ಗಳು ಜಲಾವೃತಗೊಂಡಿದೆ.
ಮಹಾರಾಷ್ಟ್ರದ ಕೊಯ್ನಾದಲ್ಲಿ ೧೩೭ ಮಿಮೀ, ವಾರಣಾ-೧೧೩, ಕಾಳಮ್ಮಾವಾಡಿ-೬೯, ಮಹಾಬಳೇಶ್ವರ-೧೨೫, ನವಜಾಜಾ-೧೨೮, ರಾಧಾನಗರ-೧೨೮, ಸಾಮಗಲಿ-೧೮, ಮತ್ತು ಕೋಲ್ಲಾಪುರ ಪರಿಸರದಲ್ಲಿ ೧೬ ಮಿಮೀ ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಗಡಿಭಾಗದ ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನಲ್ಲಿ ಮಳೆಯ ಅಲ್ಲಲ್ಲಿ ಜಿಟಿ-ಜಿಟಿ ಮಳೆ ಸುರಿದಿರುವ ಬಗ್ಗೆ ವರದಿಯಾಗಿದೆ.