ಸೂರ್ಯನಾರಾಯಣ ನರಗುಂದಕರ
ಗದಗ: ಈ ಗ್ರಾಮದಲ್ಲಿ ಎಷ್ಟೇ ಶ್ರೀಮಂತರಿದ್ದರೂ ಮಹಡಿ ಮನೆ ಕಟ್ಟುವಂತಿಲ್ಲ. ಒಂದು ವೇಳೆ ಉದ್ಧಟತನದಿಂದ ಮಹಡಿ ಮನೆ ಕಟ್ಟಿದಲ್ಲಿ ಒಂದು ವರ್ಷದಲ್ಲಿ ಆ ವ್ಯಕ್ತಿಯ ಕುಟುಂಬ ಸರ್ವನಾಶ…
ಇದು, ಗದಗ ತಾಲೂಕಿನ ಹಾತಲಗೇರಿ ಗ್ರಾಮದಲ್ಲಿ ಕಳೆದೊಂದು ಶತಮಾನಕ್ಕಿಂತ ಹೆಚ್ಚಿನ ಅವಧಿಯಿಂದ ನಡೆದು ಬಂದಿರುವ ಅಲಿಖಿತ ದೈವ ನಿರ್ಣಯ.
ಹಾತಲಗೇರಿ ಗ್ರಾಮದಲ್ಲಿ ಒಂದೇ ಒಂದೂ ಮಹಡಿ ಮನೆಯಿಲ್ಲ. ಗ್ರಾಮದಲ್ಲಿರುವ ಎಲ್ಲ ಮನೆಗಳು ನೆಲಮಹಡಿಗಷ್ಟೇ ಸೀಮಿತ. ಗ್ರಾಮದಲ್ಲಿನ ಶ್ರೀಮಂತರೂ ದೈವ ಭೀತಿಯಿಂದ ಮಹಡಿ ಮನೆ ಕಟ್ಟಿಸುವ ಗೋಜಿಗೆ ಹೋಗಿಲ್ಲ.
ಗ್ರಾಮಸ್ಥರ ಬಲವಾದ ನಂಬಿಕೆ….
ನಾಲ್ಕು ಸಾವಿರ ಜನಸಂಖ್ಯೆಯುಳ್ಳ ಪುಟ್ಟ ಗ್ರಾಮ ಹಾತಲಗೇರಿ. ಗ್ರಾಮದಲ್ಲಿನ ಬಹುತೇಕರು ಕೃಷಿಕರು. ಗ್ರಾಮದ ಆರಾಧ್ಯದೇವತೆ ಬೇವಿನಮರದ ಸತ್ಯಮ್ಮದೇವಿ. ಸತ್ಯಮ್ಮ ದೇವಿಯ ದೇವಸ್ಥಾನಕ್ಕಿಂತ, ಎತ್ತರಕ್ಕೆ ಮನೆ ನಿರ್ಮಾಣ ಮಾಡಿದಲ್ಲಿ ಕುಟುಂಬ ಸರ್ವನಾಶವಾಗುತ್ತದೆ ಎಂಬುದು ಗ್ರಾಮಸ್ಥರ ಅಚಲ ನಂಬಿಕೆ.
ಕಳೆದ ಐವತ್ತು ಅರವತ್ತು ವರ್ಷಗಳ ಹಿಂದೆ ಗ್ರಾಮಸ್ಥರೊಬ್ಬರು ಸತ್ಯಮ್ಮದೇವಿ ದೇವಸ್ಥಾನಕ್ಕಿಂತ ಎತ್ತರದ ಮಹಡಿ ಮನೆ ನಿರ್ಮಿಸಿದ್ದರಂತೆ. ನಂತರ ಕುಟುಂಬ ಆರ್ಥಿಕ ಸಂಕಷ್ಟಕ್ಕೀಡಾಗಿತ್ತು. ಮಹಡಿ ಮನೆ ಕೆಡವಿ ನೆಲಮಹಡಿಗೆ ಸೀಮಿತಗೊಳಿಸಿದ ನಂತರ ಸಂಕಷ್ಟ ಕಡಿಮೆಯಾಯಿತು. ನೂರಾರು ವರ್ಷಗಳಿಂದ ಗ್ರಾಮದಲ್ಲಿ ಮಹಡಿ ಮನೆ ನಿರ್ಮಾಣವಾಗಿಲ್ಲ.
ದೇವಿಯ ಹೆಸರು ನಾಮಕರಣ
ಹಾತಲಗೇರಿ ಗ್ರಾಮದ ಪ್ರತಿ ಮನೆಯಲ್ಲಿ ಸತ್ಯಮ್ಮ, ಸತ್ಯಪ್ಪ, ದೊಡ್ಡಸತ್ಯವ್ವ, ಸಣ್ಣಸತ್ಯವ್ವ ಹೆಸರು ಸಾಮಾನ್ಯ. ನವವಿವಾಹಿತೆಯರು ತಮ್ಮ ನವಜಾತ ಶಿಶುಗಳಿಗೆ ಸತೀಶ್, ಸತ್ಯಮ್ಮ ದೇವಿಯ ಹೆಸರಿರುವಂತೆ ನಾಮಕರಣ ಮಾಡುತ್ತಿರುವದು ಗ್ರಾಮಸ್ಥರು ಸತ್ಯಮ್ಮ ದೇವಿ ಬಗ್ಗೆ ಇಟ್ಟುಕೊಂಡಿರುವ ಶ್ರದ್ಧೆ ತೋರಿಸುತ್ತದೆ.
ಬೇವಿನ ಮರಕ್ಕೆ ನಿತ್ಯ ಪೂಜೆ
ಹಾತಲಗೇರಿಯಲ್ಲಿ ಯಾರೂ ಬೇವಿನ ಮರ ಕಡಿಯುವುದಿಲ್ಲ. ಸತ್ಯಮ್ಮದೇವಿ ಬೇವಿನ ಮರದಲ್ಲಿ ನೆಲೆಸಿದ್ದಾಳೆಯೆಂಬ ಪ್ರತೀತಿಯಿದೆ. ಬೇವಿನ ಮರಕ್ಕೆ ನಿತ್ಯ ಪೂಜೆ ಪುನಸ್ಕಾರ ಮಾಡಲಾಗುತ್ತದೆ.