ಸಂ. ಕ. ಸಮಾಚಾರ, ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ನಗರ ಪ್ರದೇಶಗಳಲ್ಲಿ ಮಳೆ ಕಡಿಮೆಯಾದರೂ ಗ್ರಾಮಾಂತರ ಪ್ರದೇಶಗಳಲ್ಲಿ ಮಳೆ ಬಿರುಸುಗೊಡಿದೆ. ಸುಳ್ಯ ತಾಲೂಕು ಹಾಗೂ ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಧಾರಾಕಾರ ಮಳೆ ಮುಂದುವರಿದಿದ್ದು, ಬುಧವಾರ ರಾತ್ರಿ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ಸ್ನಾನಘಟ್ಟ ಮುಳುಗಡೆಯಾಗಿದೆ.
ಕುಮಾರಧಾರಾ ನದಿ ತುಂಬಿ ಹರಿಯುತ್ತಿದ್ದು, ರಾತ್ರಿ ವೇಳೆ ನದಿಯಲ್ಲಿ ನೀರಿನಮಟ್ಟ ಹೆಚ್ಚಳಗೊಂಡಿದೆ. ಸ್ನಾನಟ್ಟ ಮುಳುಗಡೆಯಾಗಿ ಲಗೇಜ್ ಕೊಠಡಿವರೆಗೆ ನದಿ ನೀರು ಆವರಿಸಿದೆ. ನದಿ ಕಿನಾರೆಗೆ ಭಕ್ತರು ತೆರಳದಂತೆ ಸೂಚಿಸಲಾಗಿದೆ. ನದಿ ದಡದಲ್ಲಿ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ. ನದಿ ನೀರಿಗೆ ಇಳಿದು ತೀರ್ಥಸ್ನಾನ ನೆರವೇರಿಸುವುದನ್ನೂ ನಿರ್ಬಂಧಿಸಲಾಗಿದೆ.
ರಜೆ: ಮಳೆ ಹಿನ್ನೆಲೆಯಲ್ಲಿ ಕಡಬ ಮತ್ತು ಸುಳ್ಯ ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ, ಪ್ರಾಥಮಿಕ ಮತ್ತು ಪ್ರೌಢಶಾಲೆ ಸರ್ಕಾರಿ ಅನುದಾನಿತ ಮತ್ತು ಖಾಸಗಿ ವಿದ್ಯಾ ಸಂಸ್ಥೆಗಳಿಗೆ ಹಾಗೂ ಪದವಿಪೂರ್ವ ಕಾಲೇಜುಗಳಿಗೆ ರಜೆ ನೀಡಿ ತಹಶೀಲ್ದಾರರು ಆದೇಶ ಹೊರಡಿಸಿದ್ದಾರೆ. ಸುಳ್ಯ ಮತ್ತು ಕಡಬ ತಾಲೂಕು ಕೇಂದ್ರಗಳಲ್ಲಿ ಕಂಟ್ರೋಲ್ ರೂಂ ಸೇವೆಗಳನ್ನು ಆರಂಭಿಸಲಾಗಿದೆ.