ಮದುವೆಯ ದಿಬ್ಬಣದ ಮೇಲೆ ಜೇನ್ನೊಣಗಳ ದಾಳಿ

ಮಂಡ್ಯ: ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆ ಹೋಬಳಿಯ ಬಿ. ಬಾಚಹಳ್ಳಿ ಗ್ರಾಮದಲ್ಲಿ ಹರಿಸೇವೆ ಮಾಡುತ್ತಿದ್ದ ಮದುವೆಯ ದಿಬ್ಬಣದ ಮೇಲೆ ಜೇನ್ನೊಣಗಳು ದಾಳಿ ನಡೆಸಿದ ಪರಿಣಾಮವಾಗಿ ಮಕ್ಕಳು, ಯುವಕರು ಸೇರಿದಂತೆ ವಯೋವೃದ್ದರು ಅಸ್ವಸ್ತರಾದ ಘಟನೆ ನಡೆದಿದೆ.

ಬಿ.ಬಾಚಹಳ್ಳಿ ಗ್ರಾಮದ ರಾಮಚಂದ್ರ ಅವರ ಪುತ್ರಿಯ ವಿವಾಹವು ಕೆ.ಆರ್.ಪೇಟೆ ಪಟ್ಟಣದ ಜಯಮ್ಮ ಶಿವಲಿಂಗೇಗೌಡ ಕಲ್ಯಾಣ ಮಂಟಪದಲ್ಲಿ ಜೂನ್ 8ರಂದು ನಿಗಧಿಯಾಗಿದ್ದ ಹಿನ್ನೆಲೆಯಲ್ಲಿ ಇಂದು ಗ್ರಾಮದಲ್ಲಿ ಚಪ್ಪರ ಶಾಸ್ತ್ರ ನಡೆಸಿ ಗ್ರಾಮಸ್ಥರಿಗೆ ಚಪ್ಪರದ ಊಟ ನೀಡಲು ಹರಿಸೇವೆ ಪೂಜಾ ಕಾರ್ಯಕ್ರಮ ನಿಗಧಿಯಾಗಿತ್ತು.
ಹರಿಸೇವೆ ಪೂಜೆ ನಡೆಸಲು ಗ್ರಾಮಸ್ಥರು ವರನೊಂದಿಗೆ ಸಾಮೂಹಿಕ ಪೂಜೆ ನಡೆಸಲು ತೋಟಕ್ಕೆ ಹೋಗಿದ್ದಾಗ ವಾಧ್ಯದ ಸದ್ದು ಹಾಗೂ ಕರ್ಪೂರ, ಗಂಧದಕಡ್ಡಿ ಧೂಪದ ಹೊಗೆಗೆ ಹೆಜ್ಜೇನುಗಳು ಎದ್ದು ಒಮ್ಮೆಲೆ ಏಕಾ-ಏಕಿ ದಾಳಿ ಮಾಡಿದಾಗ ಗ್ರಾಮಸ್ಥರು ಚೆಲ್ಲಾ ಪಿಲ್ಲಿಯಾಗಿ ಓಡಿದರೂ ಬೆನ್ನು ಹತ್ತಿ ಕಡಿದ ಪರಿಣಾಮವಾಗಿ ಜೇನ್ನೋಣಗಳ ಕಡಿತಕ್ಕೆ ಒಳಗಾದ ಮಕ್ಕಳು, ಯುವಕರು ಹಾಗೂ ವಯೋ ವೃದ್ಧರು ತೀವ್ರವಾಗಿ ಅಸ್ವಸ್ತಗೊಂಡರು ಕೂಡಲೇ ಬೂಕನಕೆರೆ ಹೋಬಳಿ ಕೇಂದ್ರದಲ್ಲಿರುವ ಆರೋಗ್ಯ ಕೇಂದ್ರಕ್ಕೆ ಕರೆದೋಯ್ದದಾಗ ಅಲ್ಲಿ ವೈದ್ಯರಿಲ್ಲದೆ, ಸೂಕ್ತವಾದ ಔಷಧಗಳಿಲ್ಲದೇ ಕೂಡಲೇ ಕೆ. ಆರ್.ಪೇಟೆ ತಾಲೂಕು ಕೇಂದ್ರದಲ್ಲಿರುವ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ಸೂಕ್ತ ಚಿಕಿತ್ಸೆ ಕೊಡಿಸಲಾಯಿತು.

ಕೆ.ಆರ್.ಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ವೈದ್ಯಾಧಿಕಾರಿ ಡಾ.ಜ್ಞಾನೇಶ್ ಮಕ್ಕಳಿಗೆ ಹಾಗೂ ವಯೋವೃದ್ಧರಿಗೆ ಸೂಕ್ತ ಚಿಕಿತ್ಸೆ ನೀಡಲು ಸತಾಯಿಸಿ, ನಿಧಾನ ಮಾಡಿದಾಗ ಸ್ಥಳದಲ್ಲಿದ್ದ ಪುರಸಭೆ ಸದಸ್ಯ ಡಿ. ಪ್ರೇಮಕುಮಾರ್ ವೈದ್ಯರನ್ನು ತರಾಟೆಗೆ ತೆಗೆದುಕೊಂಡು ಡಿ. ಹೆಚ್.ಓ ಅವರ ಗಮನಕ್ಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ದೂರು ನೀಡುವುದಾಗಿ ಎಚ್ಚರಿಕೆ ನೀಡಿದ ನಂತರ ಜೇನು ನೊಣ ಗಳ ಕಡಿತಕ್ಕೊಳಗಾದವರಿಗೆ ಚಿಕಿತ್ಸೆ ನೀಡಿದರು, ಎಲ್ಲಾ ನಮ್ಮ ತಲೆ ತಿನ್ನಲು ಬರುತ್ತಾರೆ, ಮೈಸೂರು ಇಲ್ಲವೇ ಜಿಲ್ಲಾಸ್ಪತ್ರೆಗೆ ಹೋಗಲು ಏನು ದಾಡಿ ಎಂದು ಗೊಣಗಿಕೊಳ್ಳುತ್ತಿದ್ದುದು ಕೇಳಿ ಬಂತು.