ಮದುವೆಗೆ ಸಿಗದ ಕನ್ಯೆ : ಮನನೊಂದು ಯುವಕ ಆತ್ಮಹತ್ಯೆ

ಹಾವೇರಿ: ಡ್ರೈವರ್ ಕೆಲಸ ಮಾಡಿಕೊಂಡಿದ್ದ ಯುವಕನೋರ್ವ ಕನ್ಯೆ ಸಿಗದ ಹಿನ್ನೆಲೆ ಮನನೊಂದು ಮದ್ಯ ಸೇವನೆ ಮಾಡಿದ ನಶೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ರಾಣೇಬೆನ್ನೂರ ತಾಲೂಕು ಸಣ್ಣಸಂಗಾಪುರ ಗ್ರಾಮದಲ್ಲಿ ನಡೆದಿದೆ.
ಸಣ್ಣಸಂಗಾಪುರ ಗ್ರಾಮದ ಅವಿನಾಶ ಮಂಜಪ್ಪ ಚಾವಡಿ (೨೯) ಎಂಬಾತನೇ ಮೃತಪಟ್ಟ ಯುವಕ.
ಈತ ವೃತ್ತಿಯಲ್ಲಿ ಡ್ರೈವರ್ ಕೆಲಸ ಮಾಡಿಕೊಂಡಿದ್ದ. ನಾನು ಇಷ್ಟು ದುಡಿಯುತ್ತೇನೆ, ನನಗೆ ಮದುವೆಯಾಗಲು ಇನ್ನೂ ಯಾವ ಹೆಣ್ಣು ಸಿಗುತ್ತಿಲ್ಲö. ನಮ್ಮೂರಿನಲ್ಲಿ ನನ್ನ ವಯಸ್ಸಿನ ಎಲ್ಲಾ ಹುಡುಗರಿಗೆ ಹೆಣ್ಣು ಸಿಕ್ಕು ಮದುವೆ ಆಗಿದ್ದಾರೆ ಎಂದು ಮನಸ್ಸಿಗೆ ಹಚ್ಚಿಕೊಂಡು ಬೇಜಾರ ಮಾಡಿಕೊಂಡಿದ್ದ. ಇದೇ ಬೇಸರದಲ್ಲಿ ಮದ್ಯ ಕುಡಿದ ನಶೆಯಲ್ಲಿ ತನ್ನ ವಾಸದ ಮನೆಯಲ್ಲಿನ ಮೇಲ್ಛಾವಣಿಗೆ ಹಾಕಿದ ಕಟ್ಟಿಗೆ ಪೋಲ್ಸ್ಗೆ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾನೆ ಎಂದು ಮೃತನ ತಾಯಿ ಗೀತಮ್ಮ ಚಾವಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.