ಶಿವಮೊಗ್ಗ: ಮದುವೆಗೂ ಮುನ್ನವೇ ಮಗಳು ಗರ್ಭಿಣಿಯಾಗಿದ್ದಾಳೆ ಎಂಬ ವಿಷಯದಲ್ಲಿ ಮರ್ಯಾದೆಗೆ ಅಂಜಿ 21 ವರ್ಷ ವಯಸ್ಸಿನ ಮಗಳನ್ನು ತಂದೆಯೇ ಕೊಲೆ ಮಾಡಲು ಯತ್ನಿಸಿದ ಘಟನೆ ಸೊರಬ ತಾಲೂಕಿನ ಉಳವಿ ಗ್ರಾಮದಲ್ಲಿ ಶನಿವಾರ ನಡೆದಿದೆ.
ಪುತ್ರಿ ಗರ್ಭಿಣಿಯಾದ ವಿಷಯ ತಿಳಿದ ತಂದೆ ಧರ್ಮಾನಾಯ್ಕ ಎಂಬಾತ ಸಿಟ್ಟಾಗಿದ್ದರು. ಆಸ್ಪತ್ರೆಗೆ ಹೋಗೋಣವೆಂದು ಹೇಳಿ ಪತ್ನಿ ಹಾಗೂ ಮಗಳನ್ನು ಉಳವಿ ಸಮೀಪದ ಕಾನಹಳ್ಳಿ ಬಳಿಯ ಕಣ್ಣೂರು ಅರಣ್ಯ ಪ್ರದೇಶಕ್ಕೆ ಕರೆದೊಯ್ದಿದ್ದರು.
ಅರಣ್ಯ ಪ್ರದೇಶದಲ್ಲಿ ಮಗಳ ಕುತ್ತಿಗೆಗೆ ಹಗ್ಗ ಬಿಗಿದು ಉಸಿರುಗಟ್ಟಿಸಿ ಹತ್ಯೆ ಮಾಡಲು ಯತ್ನಿಸುತ್ತಿದ್ದಾಗ ಪತ್ನಿ ಮಗಳನ್ನು ಸಾಯಿಸಬೇಡಿ ಎಂದು ಪತಿ ಧರ್ಮನಾಯ್ಕರ ಕಾಲಿಗೆ ಬಿದ್ದಿದ್ದಾರೆ. ಆದರೂ ಪತಿ ಒಪ್ಪಿಕೊಳ್ಳಲಿಲ್ಲ. ಈ ವೇಳೆ ಮಗಳು ಪ್ರಜ್ಞೆತಪ್ಪಿ ಬಿದ್ದಿದ್ದಾಳೆ. ಪ್ರಜ್ಞೆ ತಪ್ಪಿದ ಮಗಳನ್ನು ಸತ್ತಿದ್ದಾಳೆ ಎಂದು ಭಾವಿಸಿ ತಂದೆ ತಾಯಿ ಊರ ಕಡೆ ಹೊರಟಿದ್ದಾರೆ.
ನಂತರ ಪ್ರಜ್ಞೆ ಬಂದ ಯುವತಿ ಕಾಡಿನಿಂದ ರಸ್ತೆಯವರೆಗೆ ನಡೆದುಕೊಂಡು ಬಂದು ಸ್ಥಳೀಯರ ಸಹಾಯದಿಂದ ಉಳವಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಾಗಿದ್ದಳು. ಅಷ್ಟೊತ್ತಿಗಾಗಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಅಲ್ಲಿಂದ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ.
ಆದರೆ, ಈ ಕುರಿತು ಆಸ್ಪತ್ರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಗರ್ಭಿಣಿ ಯುವತಿಯ ತಾಯಿ, ತನ್ನ ಮಗಳಿಗೆ ಸ್ವಲ್ಪ ಬುದ್ದಿ ಭ್ರಮಣೆಯಾಗಿದೆ. ಅವಳು ಯಾವಾಗಲೂ ಮನೆಯಲ್ಲಿ ಇರುತ್ತಿರಲಿಲ್ಲ. ನಾವಾಗಲೀ ನಮ್ಮ ಮನೆಯವರಾಗಲೀ ಯಾರೂ ಅವಳನ್ನು ಹೊರಗೆ ಕರೆದುಕೊಂಡು ಹೋಗಲಿಲ್ಲ. ಅವಳು ಎಲ್ಲ ಸುಳ್ಳು ಹೇಳುತ್ತಿದ್ದಾಳೆ ಎಂಬ ಸಮಜಾಯಿಷಿ ನೀಡಿದ್ದಾರೆ.