ನಾಗಮಂಗಲ : ಸಂತೆ ಮತ್ತು ಜಾತ್ರೆಗಳಲ್ಲಿ ಮಕ್ಕಳ ಆಟದ ಸಾಮಗ್ರಿಗಳನ್ನು ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದ ಬೆಳ್ಳೂರ್ ಕ್ರಾಸ್ ಕೆಂಬಾರೆ ಗ್ರಾಮದ ಬಡ ಕುಟುಂಬ ಗೀತಾ ಮಹೇಶ್ ಅವರಿಗೆ ಸೇರಿದ ವಾಹನ ಹಾಗೂ ಅದರಲ್ಲಿ ಇದ್ದ 2 ಲಕ್ಷಕ್ಕೂ ಹೆಚ್ಚು ಮೌಲ್ಯದ ಸಾಮಗ್ರಿಗಳಿಗೆ ಕಿಡಿಗೇಡಿಗಳು ತಡರಾತ್ರಿ ಎರಡು ಮೂವತ್ತರ ಸಮಯದಲ್ಲಿ ಬೆಂಕಿ ಹಚ್ಚಿದ್ದರಿಂದ, ಎಲ್ಲ ವಸ್ತುಗಳು ಬೆಂಕಿಗಾಹುತಿಯಾಗಿದ್ದು, ಸುಮಾರು 7 ಲಕ್ಷ ರೂ. ಗೂ ಹೆಚ್ಚು ನಷ್ಟ ಉಂಟಾಗಿದೆ.
ಬೆಳ್ಳೂರು ಕ್ರಾಸ್ ಕೆಂಬಾರೆ ಗ್ರಾಮದ ಗೀತಾ ಮತ್ತು ಮಹೇಶ್ ಬೀದಿ ಬದಿ ವ್ಯಾಪಾರಿಗಳ ಕುಟುಂಬ ವ್ಯಾಪಾರಕ್ಕೆಂದು ಸಾಲ ಮಾಡಿಕೊಂಡು ನಾಗಮಂಗಲ ತಾಲೂಕಿನ ವ್ಯಾಪ್ತಿಯ ಸಂತೆ, ಜಾತ್ರೆ, ಹಬ್ಬ ಹರಿದಿನಗಳಲ್ಲಿ ಮಕ್ಕಳ ಆಟದ ಸಾಮಗ್ರಿಗಳನ್ನು ಮಾರಾಟ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಈ ದುರ್ಘಟನೆಯಿಂದ ಈ ಕುಟುಂಬ ಬೀದಿಗೆ ಬಿದ್ದಿದೆ.
ಬೀದಿಬದಿ ವ್ಯಾಪಾರಿಗಳಾದ ಗೀತಾ ಮತ್ತು ಮಹೇಶ್ ಮಾತನಾಡಿ, ಮಕ್ಕಳ ಆಟದ ಸಾಮಗ್ರಿಗಳನ್ನು ವ್ಯಾಪಾರ ಮಾಡಲು ಸಾಲ ಮಾಡಿ ಅಶೋಕ ಲೈಲ್ಯಾಂಡ್ ವಾಹನವನ್ನು ಕೊಂಡುಕೊಂಡು ನಾಗಮಂಗಲ ತಾಲೂಕಿನ ವ್ಯಾಪ್ತಿಯಲ್ಲಿ ವ್ಯಾಪಾರ ನಡೆಸುತ್ತಿದ್ದವು. ನಿನ್ನೆ ದಿವಸ ಹಬ್ಬದ ಪ್ರಯುಕ್ತ ವ್ಯಾಪಾರ ಮುಗಿಸಿಕೊಂಡು ಮನೆ ಮುಂದೆ ನಿಂತಿದ್ದ ವಾಹನಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ, ಈಗ ನಮ್ಮ ಕುಟುಂಬ ಬೀದಿಗೆ ಬಿದ್ದಿದೆ ನಮಗೆ ಸರ್ಕಾರ ಪರಿಹಾರ ನೀಡಬೇಕೆಂದು ಮನವಿ ಮಾಡಿದರು.
ಸ್ಥಳೀಯರಾದ ನರಸಿಂಹಮೂರ್ತಿ ಮತ್ತು ಮುನಿರಾಜು ತಿಳಿಸುವಂತೆ ಈ ತಿಂಗಳಲ್ಲಿ ಇದು ಎರಡನೇ ದುರಂತ ಪ್ರಕರಣವಾಗಿದ್ದು, ನಮ್ಮ ಗ್ರಾಮದ ಆನಂದ ಎಂಬ ವ್ಯಕ್ತಿಗೆ ಸೇರಿದ ಪಲ್ಸರ್ ದ್ವಿಚಕ್ರ ವಾಹನ ಬೆಂಕಿ ಹಚ್ಚಲಾಗಿತ್ತು. ಈ ದಿನ ಈ ಬಡ ಕುಟುಂಬ ವ್ಯಾಪಾರಸ್ಥರ ವಾಹನ ಮತ್ತು ಸಾಮಗ್ರಿಗಳಿಗೆ ಬೆಂಕಿ ಹಚ್ಚಿರುವುದರಿಂದ ಈ ಕುಟುಂಬ ಬೀದಿಗೆ ಬಿದ್ದಿದೆ, ಇವರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಮನವಿ ಮಾಡಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ಳೂರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.