ಮಕ್ಕಳೇ ಪರೀಕ್ಷೆಗೆ “ಆಲ್ ದ ಬೆಸ್ಟ್’

ಧಾರವಾಡ: ಮಾರ್ಚ್, ಏಪ್ರಿಲ್ ಬಂತೆಂದರೆ ಸಾಕು ಎಲ್ಲೆಲ್ಲೂ ಪರೀಕ್ಷೆ ಬಗ್ಗೆ ಚರ್ಚೆ ಮತ್ತು ಸಿದ್ಧತೆ ಶುರುವಾಗುತ್ತದೆ. ಬದಲಾದ ಸನ್ನಿವೇಶದಲ್ಲಿ ಇಂದು ಉತ್ತೀರ್ಣರಾಗುವುದು ದೊಡ್ಡ ವಿಷಯವೇ ಅಲ್ಲ. ಶೇ. ೯೦ರ ಮೇಲ್ಪಟ್ಟಿನ ಫಲಿತಾಂಶದ ಗುರಿ. ಈ ಗುರಿ ಬೆನ್ನತ್ತಿದ್ದ ಅನೇಕರು ಇಂದು ಅನವಶ್ಯಕ ಒತ್ತಡಕ್ಕೆ ಸಿಲುಕಿ ಮನೋರೋಗಕ್ಕೆ ತುತ್ತಾಗುತ್ತಿದ್ದಾರೆ. ಗುರಿ ತಪ್ಪಲ್ಲ. ಆದರೆ, ಅದನ್ನು ತಲುಪಲು ಪಡುವ ಪ್ರಯಾಸದ ಮಾರ್ಗ ತಪ್ಪು.
ಆಧುನಿಕ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉತ್ತಮ ಫಲಿತಾಂಶ ಅಗತ್ಯ ಒಪ್ಪುವ ಮಾತು. ಹಾಗಂತ ಅದಕ್ಕಾಗಿ ಮಾನಸಿಕ ಆರೋಗ್ಯ ಕಳೆದುಕೊಳ್ಳುವುದು ತಪ್ಪು. ನಿರೀಕ್ಷಿತ ಫಲಿತಾಂಶ ಬರದಿದ್ದಾಗ ಸಮಾಜ ಎಲ್ಲಿ ತನ್ನನ್ನು ಧಿಕ್ಕರಿಸುವುದೋ ಎಂಬ ಆತಂಕವೂ ವಿದ್ಯಾರ್ಥಿಗಳನ್ನು ಕಾಡಲಾರಂಭಿಸುತ್ತದೆ. ಇದಕ್ಕೊಂದು ಉತ್ತಮ ಉದಾಹರಣೆ ಇಲ್ಲಿದೆ.
ಅದು ಒಂದು ಮಧ್ಯಮ ವರ್ಗದ ಕುಟುಂಬ. ಆರ್ಥಿಕವಾಗಿಯೂ ಓಕೆ. ತಂದೆ ಖಾಸಗಿ ಉದ್ಯೋಗಿ ತಾಯಿ ಗೃಹಿಣಿ. ಇಬ್ಬರು ಮಕ್ಕಳು. ಹಿರಿಯ ಮಗ ಪಿಯುಸಿ ಸೈನ್ಸ್ ಓದುತ್ತಿದ್ದಾನೆ. ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಫಲಿತಾಂಶ ಪಡೆದಿದ್ದಾನೆ. ಪಾಲಕರಿಗೆ ಮಗನನ್ನು ಡಾಕ್ಟರ್ ಓದಿಸಬೇಕೆನ್ನುವ ಉತ್ಕಟ ಇಚ್ಛೆ. ಮಗನಿಗೂ ಆಸೆ. ಆ ನಿಟ್ಟಿನಲ್ಲಿ ಪಿಯುಸಿ ಮೊದಲ ವರ್ಷದಿಂದಲೇ ಅಭ್ಯಾಸ ಮಾಡುತ್ತ ಬಂದಿದ್ದಾನೆ. ಸಮಾಜದಲ್ಲಿ ಪರಿಚಯದವರು ಅಥವಾ ಇನ್ನ್ಯಾರೋ ಉನ್ನತ ಸಾಧನೆ ಮಾಡಿದ ವಿಷಯ ಕೇಳ್ತಾನೆ ಅಥವಾ ಅವನ ಗಮನಕ್ಕೆ ಬರುತ್ತದೆ. ಪಾಲಕರು ಇವನೆದುರು ನೋಡು ಆತನ ಸಾಧನೆ, ಅಲ್ಲಿ ಸೀಟ್ ಸಿಕ್ತಂತೆ. ದೊಡ್ಡ ಕಾಲೇಜಿಗೆ ಹೊರಟನಂತೆ. ನೀನು ಹಾಗಾಗಬೇಕು ಎಂಬ ಮಾತು ಆಡ್ತಾರೆ. ಆಗ ಈ ವಿದ್ಯಾರ್ಥಿಗೆ ಎಲ್ಲೋ ಒಂದೆಡೆ ಒತ್ತಡ ಶುರುವಾಗಿದೆ. ಒಂದು ಫಿಕ್ಸ್ ರೋಲ್ ಮಾಡೆಲ್ ತೋರಿಸಿದಾಗ ಅದನ್ನು ಸಾಕಾರಗೊಳಿಸುವಲ್ಲಿ ಎಡವಿದರೆ ಎಲ್ಲಿ ಸಮಾಜ ಮತ್ತು ಮನೆ ಜನ ನನ್ನನ್ನು ತಿರಸ್ಕರಿಸುತ್ತಾರೋ ಇಲ್ಲವೇ ಎಷ್ಟು ಬೈಯ್ಯುತ್ತಾರೋ ಎಂಬ ಅಳಕು ಆತನಲ್ಲಿ ಮನೆ ಮಾಡಿತು. ಪರಿಣಾಮ ಆತ ಖಿನ್ನತೆಗೆ ಒಳಗಾದ. ಆತನ ನಡವಳಿಕೆಯಲ್ಲಿ ಬದಲಾವಣೆ ಕಂಡು ಬಂದಿತು. ಊಟ, ನಿದ್ರೆ ಅಷ್ಟಕ್ಕಷ್ಟೇ. ಮನೆ ಮಂದಿ ಜತೆ ಮಾತೂ ಕಡಿಮೆಯಾಗಿತ್ತು. ಉತ್ತಮ ಫಲಿತಾಂಶದ ಟಾರ್ಗೆಟ್ ಆತನ ಕಾನ್ಫಿಡೆನ್ಸ್ ಲೆವೆಲ್‌ಗೆ ಸವಾಲು ಹಾಕಿತ್ತು. ಈ ವಿಷಯ ಪಾಲಕರ ಗಮನಕ್ಕೆ ಸ್ವಲ್ಪ ತಡವಾಗಿ ಬಂದಿತು. ಅವರು ಕೂಡಲೇ ನನ್ನ ಬಳಿ ಕರೆದುಕೊಂಡು ಬಂದರು. ನಾನು ಅದಕ್ಕೆ ಆಪ್ತ ಸಮಾಲೋಚನೆ ನಡೆಸಿ ಪರಿಹಾರ ಸೂಚಿಸಿದೆ ಮುಂದೆ ಆತ ಸರಿ ಹೋದ. ಮತ್ತೆ ಎಂದಿನಂತೆ ನಿರಾತಂಕವಾಗಿ ಓದುತ್ತಿದ್ದಾನೆ.
ಏನು ಮಾಡಬೇಕು?
ಪರೀಕ್ಷೆ ಸಮೀಪಿಸುತ್ತಿದ್ದಂತೆ ಹಗಲು ರಾತಿ ನಿದ್ದೆಗಟ್ಟು ಓದಲು ಹೋಗಬಾರದು. ನಕಾರಾತ್ಮಕ ಆಲೋಚನೆಗಳು ಬರದಂತೆ ಕೈಗೆ ನೀಗುವ ಗುರಿ ಹೊಂದಿ. ಪ್ರಾಮಾಣಿಕ ಪ್ರಯತ್ನಕ್ಕೆ ಫಲ ಇದ್ದೇ ಇರುತ್ತದೆ. ಪಾಲಕರು, ಪೋಷಕರು ಗಮನಿಸಬೇಕಾದ ಮತ್ತು ಪಾಲಿಸಬೇಕಾದ ವಿಚಾರವೆಂದರೆ ಮಕ್ಕಳ ಮೇಲೆ ನಿರೀಕ್ಷೆಯ ಭಾರ ಸಲ್ಲದು. ಇಂತಿಷ್ಟೇ ಪರ್ಸಂಟೇಜ್ ಪಡೆಯಲೇಬೇಕು ಎನ್ನುವ ಟಾರ್ಗೆಟ್, ಇಂತಹ ಕಾಲೇಜಿನಲ್ಲಿ ಸೀಟು ಪಡೆಯಬೇಕು ಎನ್ನುವ ಹಟ, ಬೇರೊಬ್ಬರಿಗಿಂತ ಇಷ್ಟು ಹೆಚ್ಚು ಸಾಧನೆ ಮಾಡಬೇಕು ಎನ್ನುವ ಒತ್ತಡ ತಪ್ಪು. ಪ್ರತಿ ವಿದ್ಯಾರ್ಥಿಯ ಕೌಶಲ ಮತ್ತು ಬುದ್ಧಿಮಟ್ಟ ಭಿನ್ನವಾಗಿರುತ್ತದೆ. ಇದರ ಅರಿವು ನಮಗಿರಬೇಕು. ಎಲ್ಲರೂ ಎಲ್ಲವನ್ನೂ ಸಾಧಿಸಲು ಆಗುವುದಿಲ್ಲ. ಮತ್ತೆ ಮೇಲಾಗಿ ಮಗ ಅಥವಾ ಮಗಳ ಆಸಕ್ತಿ, ಐಚ್ಛಿಕ ಕ್ಷೇತ್ರ ಯಾವುದು? ಅವರ ಮನಸ್ಸಿನಲ್ಲಿ ಏನಿದೆ? ಅವರು ಕಂಡ ಕನಸುಗಳು ಏನು? ಎಂಬುದರ ಸ್ಪಷ್ಟ ಚಿತ್ರಣ ಪಾಲಕರಿಗೆ ಅತ್ಯಗತ್ಯ. ಸಾಮಾಜಿಕ ಪ್ರತಿಷ್ಠೆಗಾಗಿ ಮಕ್ಕಳ ಮೇಲೆ ನಿರೀಕ್ಷೆಯ ಭಾರ ಹಾಕಿದರೆ ಅದರ ಪರಿಣಾಮ ಅಪಾಯಕಾರಿಯಾಗುತ್ತದೆ. ಇನ್ನು ವಿದ್ಯಾರ್ಥಿಗಳೂ ಅಷ್ಟೇ. ಯಾರನ್ನೋ ಹೋಲಿಸಿಕೊಂಡು ತಾವು ಅವರಿಗಿಂತ ಹಿಂದೆ ಬಿದ್ದಿದ್ದೇವೆ ಎನ್ನುವ ಕೀಳರಿಮೆ ಬೆಳೆಸಿಕೊಳ್ಳಬಾರದು. ಬೇರೆ ಬೇರೆ ಪ್ರಕಣ ನೋಡಿ ಪದೇ ಪದೆ ಗುರಿ ಬದಲಾಯಿಸಬಾರದು. ವರ್ಷದ ಆರಂಭದಿಂದಲೂ ಒಂದ ನಿಗದಿತ ವೇಳಾಪಟ್ಟಿ ಹಾಕಿಕೊಂಡು ಸ್ಟ್ರೆಸ್ ಇಲ್ಲದಂತೆ ನೋಡಿಕೊಳ್ಳಬೇಕು. ಇಷ್ಟಾಗಿಯೂ ಪರಿಹಾರ ತೋಚದಿದ್ದರೆ ಮನೋವೈದ್ಯರನ್ನು ಸಂಪರ್ಕಿಸಿ. ಸಾಧನೆಯ ಶಿಖರ ಏರುವ ಕನಸು ನಿಮ್ಮದಾಗಲಿ. ಆಲ್ ದಿ ಬೆಸ್ಟ್.

ಡಾ. ಆದಿತ್ಯ ಪಾಂಡುರಂಗಿ, ಮನೋವೈದ್ಯರು