ಮಂತ್ರ ಅನ್ನುತ್ತ ಮುಳುಗು ಹಾಕಿದರೆ ಕ್ರೇಜಿ ಮಟಾಷ್…

ಈ ಬಾರಿ ಡೆಲ್ಲಿ ಕುರ್ಚಿಗೆ ಯಾರು? ಕೆಮ್ಮುವ ಕ್ರೇಜಿ ಮತ್ತೆ ಬರ್ತಾನಾ? ಇಲ್ಲ ಮನೆ ದಾರಿ ಹಿಡೀತಾನಾ? ಎಂದು ಬಹಳಷ್ಟು ಮಂದಿ ಕುತೂಹಲದಿಂದ ಕಾಯುತ್ತಿದ್ದಾರೆ. ಆರ್ಟಿಸ್ಟ್ ದ್ಯಾಮನೂ ಸಹ ತನಗೆ ಏನೂ ಗೊತ್ತಿಲ್ಲದಿದ್ದರೂ ಭಯಂಕರ ಡಿಸ್‌ಕಸ್ ಮಾಡುತ್ತಿದ್ದಾನೆ. ಕ್ರೇಜಿಗೆ ಸೋದಿ ಮಾಮಾ ಭಯಂಕರ ಕಾಟ ಕೊಟ್ಟಿದ್ದಾರೆ. ಆತನನ್ನು ಜೈಲಿಗಟ್ಟಿ ಹ್ಹ…ಹ್ಹ…ಹ್ಹಾ ಎಂದು ನಕ್ಕಿದ್ದಾರೆ. ಕೆಮ್ಮಿಕೊಂಡೇ ಓಣಿ ಓಣಿ ತಿರುಗಾಡಿದ ಕ್ರೇಜಿಬಾಬಾ ನೋಡ್ರವ… ನೋಡ್ರಪ ನನಗೆ ಹೀಗೆ ಮಾಡಿದ್ದಾರೆ…ನೀವೇ ಕಣ್ಣಾರೆ ನೋಡಿದ್ದೀರಿ…ನನಗೆ ಓಟು ಹಾಕಿ…ಅವರನ್ನೆಲ್ಲ ಹೇಗೆ ಮಾಡುತ್ತೇನೆ ನೋಡಿ ಎಂದು ಹೇಳಿಕೊಂಡು ಕಣ್ಣಲ್ಲೇ ನೀರು ತೆಗೆಯುತ್ತಿದ್ದಾನೆ. ನೀನು ಕಣ್ಣಲ್ಲೇ ನೀರು ತೆಗಿಯಬೇಡಿ..ಅವತ್ತು ಹಾಕೇ ಹಾಕುತ್ತೇವೆ ಬುಡಿ ಎಂದು ಕ್ರೇಜಿಯನ್ನು ರಮಿಸಿ ಕಳುಹಿಸುತ್ತಿದ್ದಾರೆ. ಕ್ರೇಜಿ ಕೆಮ್ಮಿಕೊಂಡು ಅಡ್ಡಾಡಿದರೇನು ಪ್ರಯೋಜನ? ಆ ಬಂಡಿ ವಸಿಕುಮಾರ ಡೆಲ್ಲಿಯಲ್ಲೂ ಗ್ಯಾರಂಟಿ ಶುರು ಎಂದು ಹೇಳಿದ್ದಾರೆ. ಹೀಗಾಗಿ ಜನರು ಅವರ ಕೈಗೇ ಹಾಕಿದ್ದಾರೆ ಎಂದು ಮ್ಯಾಗಳೋಣಿಯವರು ಕಣಿ ಹೇಳುತ್ತಿದ್ದಾರೆ… ಅದ್ಹೇಗೆ ಆಗುತ್ತದೆ… ಸುಮ್ಮನೇ ಅಲ್ಲ. ಚುನಾವಣೆ ದಿನವೇ ಸೋದಿ ಮಾಮಾ ಕುಂಭದಲ್ಲಿ ಸ್ನಾನ ಮಾಡಿದ್ದಾರೆ. ಅವರೆಂದರೆ ಏನಂತ ತಿಳಿದಿದ್ದೀರಿ? ಸ್ನಾನ ಮಾಡುವಾಗ ಅವರು ಅಂದ ಒಂದೊಂದು ಮಂತ್ರವೂ ಕಮಲದೆಡೆಗೆ ವಾಲುವಂತೆ ಮಾಡಿದೆ. ಅವರು ಸ್ನಾನಕ್ಕೆ ಹೋಗುವ ಮುನ್ನವೇ ಎಲ್ಲ ಬಾಲಕರನ್ನು ಕರೆದು ನೀವು ಚಿಂತೆ ಬಿಡಿ…ಜನರು ಬೇರೆಯವರಿಗೆ ಓಟು ಹಾಕಿದ್ದರೂ ಅದು ಕಮಲದ ಗುರುತಿಗೆ ಜಾರಿ ಬಿಡುತ್ತದೆ. ನಾನು ಮುಳುಗು ಹಾಕಿ ಮಂತ್ರ ಹೇಳಿದರೆ ಕ್ರೇಜಿ ಮಟಾಷ್…! ಬೇಕಾದರೆ ಪರೀಕ್ಷೆ ಮಾಡಿ ನೋಡಿ ಎಂದು ಹೇಳಿದ್ದಾರೆ. ಆದರೆ ಕ್ರೇಜಿಯ ಲೆಕ್ಕವೇ ಬೇರೆ. ಅವರು ಮಂತ್ರ ಹೇಳಿ ಮುಳುಗು ಹಾಕುವ ಮುನ್ನವೇ ನಾನು ಹೋಗಿ ಮುಳುಗಿ ಬಂದಿದ್ದೇನೆ. ಅವರಿಗೆ ಮುನ್ನವೇ ಅವರನ್ನು ಮಟಾಷ್ ಮಾಡು ಎಂದು ಕೇಳಿಕೊಂಡು ಬಂದಿದ್ದೇನೆ ಎಂದು ಹೇಳುತ್ತ ಖೊಳ್..ಖೊಳ್ ಅಂತ ಕೆಮ್ಮಿದ್ದಾರೆ. ಇವರೆಡೂ ಸ್ಟೇಟ್‌ಮೆಂಟ್ ಕೇಳಿ ಹೌಹಾರಿದ ಕೈ ಮಂದಿಯೆಲ್ಲ…ಅಯ್ಯೋ ಇವರಷ್ಟೇ ಜಾಣರೇ? ನಾವೆಲ್ಲ ಹೋದವರ್ಷವೇ ಸಾಮೂಹಿಕವಾಗಿ ಮುಳುಗು ಹಾಕಿ ಎರಡನ್ನೂ ಮಟಾಷ್ ಮಾಡಿ ಎಂದು ಹೇಳಿಬಂದಿದ್ದೇವೆ ನೋಡಿ ಬೇಕಾದರೆ ಎಂದು ಅನ್ನುತ್ತಿದ್ದಾರೆ. ತಡೀ..ತಡೀ ಇನ್ನೂ ಮೂರೇ ದಿನ ಎಂದು ಓಟು ಹಾಕಿದವರು ಕಿವಿಕಿವಿಯಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ.