ಮಂತ್ರಿಗಾಗಿ ಕೆಳಗೆ ಬಿದ್ದು ಬೇಡುವವನಲ್ಲ

ಸಂ.ಕ.ಸಮಾಚಾರ ಕಲಬುರಗಿ : ಸಚಿವ ಸಂಪುಟ ಪುನರಚನೆ ವೇಳೆ ಹಿರಿಯ ಶಾಸಕರಿಗೆ ಮಂತ್ರಿ ಸ್ಥಾನ ನೀಡುವುದು ಪಕ್ಷದ ಹೈಕಮಾಂಡ್ ಮತ್ತು ಸಿಎಂ ವಿವೇಚನೆಗೆ ಬಿಟ್ಟ ವಿಚಾರ. ೨೨೪ ಶಾಸಕರೂ ಮಂತ್ರಿಗಳಾಗಲು ಆಕಾಂಕ್ಷಿಗಳಿದ್ದಾರೆ. ನಾನೇನು ಮಂತ್ರಿ ಮಾಡಬೇಕೆಂದು ಕೆಳಗೆ ಬಿದ್ದು ಬೇಡುವುದಿಲ್ಲ ಎಂದು ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಮತ್ತು ಆಳಂದ ಶಾಸಕ ಬಿ.ಆರ್.ಪಾಟೀಲ್ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಯೋಗ್ಯತೆ, ಹಿರಿತನ, ಕ್ಷಮತೆ ನೋಡಿ ಕೊಡುವುದಾದರೆ ಕೊಡಲಿ ಇಲ್ಲದಿದ್ದರೆ ಇಲ್ಲ, ನನ್ನದು ಹೋರಾಟದ ಬದುಕು ಎಂದರು.
ನಮಗೆ ಪಕ್ಷದಲ್ಲಿ ಇನ್ನೂ ಗ್ರೀನ್ ಕಾರ್ಡ್ ಸಿಕ್ಕಿಲ್ಲ. ನಾವು ಈಗಲೂ ಅನಿವಾಸಿ ಆಗಿರುವೆ. ಆದಾಗ್ಯೂ ಮಂತ್ರಿ ಮಾಡುವಂತೆ ನಾನು ಯಾರ ಬಳಿಯೂ ಬೇಡಿಕೊಳ್ಳುವುದಿಲ್ಲ. ಸಾಮರ್ಥ್ಯ ಇದ್ದರೆ ಸಿಎಂ ಅವರು ನನಗೆ ಮಂತ್ರಿ ಸ್ಥಾನ ಕೊಡುತ್ತಾರೆ ಎಂದರು.
ಬೆಳೆ ವಿಮೆ ಹಣ ಇನ್ನೂ ಆಳಂದ ತಾಲೂಕಿನ ರೈತರಿಗೆ ತಲುಪದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಪಾಟೀಲರು ನಮ್ಮ ಜಿಲ್ಲೆಯಲ್ಲಿ ಕೆಲವು ಚಮತ್ಕಾರಗಳು ನಡೆಯುತ್ತಿವೆ. ಜಯದೇವ, ಜಿಮ್ಸ್ ಆಸ್ಪತ್ರೆಗಳಲ್ಲಿ ಹೋಗಿ ನೋಡಿ. ಯಾವ ತಾಲೂಕಿನವರು ಹೆಚ್ಚು ನೌಕರರಿದ್ದಾರೆ ಗೊತ್ತಾಗುತ್ತೆ ಎಂದರು.