ಉಡುಪಿ: ಮಂತ್ರಾಲಯ ಶ್ರೀ ರಾಘವೇಂದ್ರ ಮಠದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದರಿಗೆ ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಭಾನುವಾರ ಕೃಷ್ಣ ಮಠ ರಾಜಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ `ಅಭಿನವ ಪರಿಮಳಾಚಾರ್ಯ’ ಉಪಾದಿ ನೀಡಿ ಗೌರವಿಸಿದರು.
ಮಾಧ್ವ ತತ್ವ ಪ್ರಚಾರದಲ್ಲಿ ರಾಘವೇಂದ್ರ ಮಠ ತನ್ನದೇ ಆದ ಛಾಪು ಮೂಡಿಸಿದೆ. ಧರ್ಮ ಜಾಗೃತಿ, ದೈವಿಕ ಪ್ರಜ್ಞೆ ಮೂಡಿಸುವಲ್ಲಿ ಶ್ರೀ ಸುಬುಧೇಂದ್ರತೀರ್ಥರ ಕೊಡುಗೆಯನ್ನು ಮನ್ನಿಸಿ ಈ ಉಪಾದಿ ನೀಡಲಾಗಿದೆ. ಇನ್ನು ಮುಂದಕ್ಕೆ ಎಲ್ಲರೂ ‘ಅಭಿನವ ಪರಿಮಳಾಚಾರ್ಯ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದರು’ ಎಂದೇ ಅವರನ್ನು ಸಂಬೋಧಿಸಬೇಕು ಎಂಬುದು ನಮ್ಮ ಅಪೇಕ್ಷೆ ಎಂದು ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ತಿಳಿಸಿದರು.
ಪ್ರಶಸ್ತಿ ಸ್ವೀಕರಿಸಿದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದರು, ಸೋದರನಂತಿರುವ ಪುತ್ತಿಗೆ ಶ್ರೀಗಳು ನೀಡಿದ ಪ್ರೀತಿಯ ಗೌರವ ಎಂಬುದಾಗಿ ಸ್ವೀಕರಿಸುವುದಾಗಿ ತಿಳಿಸಿದರು.
ಪುತ್ತಿಗೆ ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು. ಶಾಸಕರಾದ ಯಶಪಾಲ್ ಸುವರ್ಣ ಮತ್ತು ಗುರ್ಮೆ ಸುರೇಶ ಶೆಟ್ಟಿ, ಮಣಿಪಾಲ ಮಾಹೆ ಸಹಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್, ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ, ಸಮಾಜ ಸೇವಕರಾದ ಯೋಗೀಶ ಶೆಟ್ಟಿ ಕಾಪು, ಡಾ. ದೇವಿಪ್ರಸಾದ ಶೆಟ್ಟಿ ಬೆಳಪು ಮತ್ತು ತಂಕರಗುತ್ತು ಸಂತೋಷ ಶೆಟ್ಟಿ, ವಿದ್ವಾಂಸ ಗಯಾ ರಾಮಾಚಾರ್ಯ, ರಮ್ಯ ಶ್ರೀನಿಧಿ ಕೊಪ್ಪ ಇದ್ದರು.
ವಾದಿರಾಜ ಸಂಶೋಧನ ಕೇಂದ್ರದ ನಿರ್ದೇಶಕ ಡಾ. ಗೋಪಾಲಾಚಾರ್ ಸ್ವಾಗತಿಸಿ, ನಿರೂಪಿಸಿದರು. ವಿದ್ವಾನ್ ಷಣ್ಮುಖ ಹೆಬ್ಬಾರ್ ಸನ್ಮಾನ ಪತ್ರ ವಾಚಿಸಿದರು. ಪುತ್ತಿಗೆ ಮಠದ ದಿವಾನ ನಾಗರಾಜ ಆಚಾರ್ಯ, ಕಾರ್ಯದರ್ಶಿ ಪ್ರಸನ್ನಾಚಾರ್ಯ ಮೊದಲಾದವರಿದ್ದರು.
ಇದೇ ಸಂದರ್ಭದಲ್ಲಿ ಪುತ್ತಿಗೆ ಶ್ರೀಗಳು ಸಂಕಲ್ಪಿಸಿರುವ ಪಾರ್ಥಸಾರಥಿ ಸುವರ್ಣ ರಥ ನಿರ್ಮಾಣಕ್ಕೆ ಚಾಲನೆ ನೀಡಿದ ಮಂತ್ರಾಲಯ ಶ್ರೀಗಳು, ಮಠದ ವತಿಯಿಂದ 10 ಲಕ್ಷ ರೂ. ದೇಣಿಗೆ ನೀಡಿದರು.