ಹುಬ್ಬಳ್ಳಿ: ಮಂಡಿನೋವಿಗೆ ಶಸ್ತ್ರಚಿಕಿತ್ಸೆ ಇಲ್ಲದೇ ಅತ್ಯಾಧುನಿಕ ಪಿಆರ್‌ಪಿ'(ಪ್ಲೇಟ್‌ಲೆಟ್ ರಿಚ್ ಪ್ಲಾಸ್ಮಾ) ವಿಧಾನದಿಂದ ಚಿಕಿತ್ಸೆ ನೀಡುವ ವಿಧಾನವನ್ನು ಬೆಂಗಳೂರಿನ ಎಪಿಒನ್ ಆಸ್ಪತ್ರೆ ಅಳವಡಿಸಿಕೊಂಡಿದೆ ಎಂದು ಡಾ.ವಿದ್ಯಾ ಬಂಡಾರು ತಿಳಿಸಿದರು. ಆರೋಗ್ಯ ಹಬ್ಬದಲ್ಲಿ ಉಪನ್ಯಾಸ ನೀಡಿದ ಅವರು, ಇದೊಂದು ಸುರಕ್ಷಿತ ಮತ್ತು ಉಪಶಮನದ ಪ್ರಮಾಣ ಹೆಚ್ಚಿರುವ ಚಿಕಿತ್ಸೆಯಾಗಿದ್ದು ಜನತೆ ಪ್ರಯೋಜನ ಪಡೆದುಕೊಳ್ಳಬೇಕು. ಪಿಆರ್‌ಪಿ ಚಿಕಿತ್ಸೆಯಲ್ಲಿ ರೋಗಿಯ ದೇಹದ ಭಾಗವನ್ನು ಕೊಯ್ಯದೇ, ಇಂಜೆಕ್ಷನ್ ಮುಖಾಂತರ ವ್ಯಕ್ತಿಯ ದೇಹದಲ್ಲಿನ ರಕ್ತವನ್ನೇ ಬಳಸಿಕೊಂಡು ಸಣ್ಣ ರಂಧ್ರವೊಂದರ ಮೂಲಕ ಪ್ರಕ್ರಿಯೆ ನಡೆಸಲಾಗುತ್ತದೆ. ಇದು ನೋವುಕಾರಕ ಅಲ್ಲ ಎಂದು ಅವರು ಹೇಳಿದರು. ಎಪಿಒನ್ ಆಸ್ಪತ್ರೆಯು ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡ
ಪಿಆರ್‌ಪಿ’ ಚಿಕಿತ್ಸಾ ವಿಧಾನವನ್ನು ಅವಳವಡಿಸಿಕೊಂಡ ದೇಶದ ಮೊದಲ ಆಸ್ಪತ್ರೆಯಾಗಿದೆ.
ಬೆಂಗಳೂರು ಮತ್ತು ಹೈದರಾಬಾದ್ ಕೇಂದ್ರಗಳಲ್ಲಿ ಈಗಾಗಲೇ ೫೦ ಸಾವಿರಕ್ಕೂ ಹೆಚ್ಚು ರೋಗಿಗಳಿಗೆ ಈ ಚಿಕಿತ್ಸೆಯನ್ನು ಮಾಡಿದ್ದು, ಯಶಸ್ಸಿನ ಪ್ರಮಾಣ ಶೇ. ೮೫ರಷ್ಟಿದೆ ಎಂದು ಡಾ.ವಿದ್ಯಾ ಬಂಡಾರು ವಿವರಿಸಿದರು.
ಮೆಟ್ಟಿಲುಗಳನ್ನು ಹತ್ತುವಾಗ ಮೊಣಕಾಲಿನಲ್ಲಿ ನೋವು ಕಾಣಿಸಿಕೊಂಡರೆ ಅದು ದೀರ್ಘ ಕಾಲೀನ ಮಂಡಿನೋವು ಆರಂಭವಾಗಿರುವುದರ ಸೂಚನೆ. ಇದಕ್ಕೆ ಅನೇಕರು ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿರುತ್ತಾರೆ. ಮುಂದೆ ಇದುವೇ ಮಂಡಿನೋವಿನ ಹಣೆಪಟ್ಟಿ ಪಡೆದುಕೊಂಡಾಗಲೂ ನೋವು ನಿವಾರಕ ಮಾತ್ರೆಗಳ ಮೇಲೆ ಅವಲಂಬನೆಯನ್ನು ಮುಂದುವರಿಸಿರುತ್ತಾರೆ. ಇದು ಅಪಾಯಕಾರಿ. ನೋವು ನಿವಾರಕಗಳು ಮೂತ್ರಪಿಂಡದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ ಎಂದು ಅವರು ಎಚ್ಚರಿಸಿದರು.
ಮಂಡಿನೋವು ಕಾಯಿಲೆಯಲ್ಲ, ಆದರೆ ನಿರ್ಲಕ್ಷ್ಯ ಮಾಡಿದರೆ ನಿರ್ವಹಿಸಲು ಕಷ್ಟಕರವಾದ ದೊಡ್ಡ ಸಮಸ್ಯೆ. ಮಂಡಿ ಸವೆತ ಸಾಮಾನ್ಯವಾಗಿ ೫೦ರಿಂದ ೬೦ ವರ್ಷಗಳ ನಡುವೆ ಸಂಭವಿಸುತ್ತದೆ. ಆದರೆ ಈಗಿನ ಸನ್ನಿವೇಶದಲ್ಲಿ ಇದಕ್ಕೆ ವಯೋಮಿತಿಯ ನಿರ್ಬಂಧ ಕಾಣದಾಗಿದೆ. ಆದ್ದರಿಂದ ಅತ್ಯಂತ ಎಚ್ಚರಿಕೆಯಿಂದ ಜೀವನ ನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು.
ಮಂಡಿನೋವಿಗೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳದೇ ಹೋದರೆ ಕ್ರಮೇಣ ಇದು ಮಿತಿ ಮೀರಿ ಕೊನೆಯಲ್ಲಿ ಕಾಲುಗಳು ಬಿಲ್ಲಿನಂತೆ ಬಾಗುವುದರಲ್ಲಿ ಪರ್ಯವಸಾನ ಆಗುತ್ತದೆ. ಹೀಗಾದ ನಂತರ ಫಿಜಿಯೋಥೆರಪಿ, ಆಯುರ್ವೇದ ಚಿಕಿತ್ಸೆ, ತೈಲ ಲೇಪದಂತಹ ಉಪಕ್ರಮಗಳು ಪ್ರಯೋಜನಕ್ಕೆ ಬರುವುದಿಲ್ಲ ಎಂದೂ ಎಚ್ಚರಿಸಿದರು.
ಮೊಣಕಾಲಿನಲ್ಲಿ ಕಾಣಿಸಿಕೊಳ್ಳುವ ನೋವಿಗೆ ತೆಗೆದುಕೊಳ್ಳುವ ಮಾತ್ರೆಗಳು ಅಥವಾ ಇನ್ನಿತರ ಕ್ರಮಗಳು ಮೂರು ವಾರದಲ್ಲಿ ಪ್ರಯೋಜನಕ್ಕೆ ಬಾರದಿದ್ದರೆ ತಜ್ಞರನ್ನು ಸಂಪರ್ಕಿಸಬೇಕು ಎಂದು ಸಲಹೆ ಮಾಡಿದರು. ನೋವು ನಿವಾರಕಗಳು ಕೆಲಸ ಮಾಡಲಿಲ್ಲ ಎಂದುಕೊಂಡು ಸ್ಟಿರಾಯ್ಡ್ ತೆಗೆದುಕೊಳ್ಳುವ ದುಸ್ಸಾಹಸಕ್ಕೆ ಕೈ ಹಾಕಬಾರದು. ಇದು ಇನ್ನಷ್ಟು ಅಪಾಯಕಾರಿ ಎಂದರು.