ಮಂಕಿ ಆಗಲು ಡಂಕಿ ಮಾರ್ಗ ತಪ್ಪು ಶಿವ

ವಿಶಾಲು ತುಂಬಾ ಬೇಸರದಲ್ಲಿದ್ದಳು. ಶಿವನ ಪೂಜೆ ಮುಗಿಸಿ ರಸಾಯನವನ್ನು ತಂದು ಮುಂದಿಟ್ಟ,
“ದೊಡ್ಡಣ್ಣನಿಗೆ ಧಿಕ್ಕಾರ” ಎಂದಳು.
“ಧಿಕ್ಕಾರ ಓಕೆ, ರಸಾಯನ ಯಾಕೆ? ತಿಂಡಿ ಮಾಡಬರ‍್ದಿತ್ತಾ ವಿಶಾಲು?” ಎಂದು ವಿಶ್ವ ಪ್ರಶ್ನಿಸಿದಾಗ ವಿಶಾಲುಗೆ ರೇಗಿತು,
“ರೀ, ೧೦ ದಿನ ಉಪವಾಸ ಕೆಡವಿದ ದೊಡ್ಡಣ್ಣ ಭಾರತದ ಅಕ್ರಮ ವಲಸಿಗರಿಗೆ ಎಷ್ಟು ಕಷ್ಟ ಕೊಟ್ಟಿದ್ದಾರೆ ಗೊತ್ತಾ?” ಎಂದಳು.
“ಯಾರು ಯಾರನ್ನ ೧೦ ದಿನ ಉಪವಾಸ ಕೆಡವಿದ್ದು?” ಎಂದು ನಾನು ಕೇಳಿದೆ.
“ನಮ್ಮ ರಂಗಮ್ಮನ ಮಗ ಮನೀಶ ಅಮೇರಿಕಾಗೆ ವೀಸಾ ಇಲ್ಲದೆ ಹೋದ, ಅವನನ್ನು ವಾಪಸ್ ಕಳಿಸೋವಾಗ ಎಷ್ಟು ತೊಂದರೆ ಕೊಟ್ಟಿದ್ದಾರೆ ಗೊತ್ತಾ ನಿಮ್ಮ ದೊಡ್ಡಣ್ಣ?” ಎಂದು ವಿಶಾಲು ಬೇಸರಿಸಿದಳು.
“ಇಷ್ಟಕ್ಕೂ ಅವ್ನ ಯಾರ್ ಕಳಿಸಿದ್ದು ಅಮೇರಿಕಾಗೆ?” ಎಂದಾಗ ವಿವರ ಆಚೆ ಬಂತು
ಅಮೇರಿಕಾಗೆ ಹೋಗೋದಕ್ಕೆ ಅವ್ನಿಗೆ ಬೇರೆ ದಾರಿ ಇರಲಿಲ್ಲ, ಯಾರೋ ಏಜೆಂಟ್ ಹೇಳಿದ್ರು ನೀವು ೫೦ ಲಕ್ಷ ಕೊಟ್ರೆ ನಾನು ಹೆಂಗಾದ್ರೂ ರ‍್ಕೊಂಡ್ ಹೋಗ್ತೀನಿ, ಅಮೇರಿಕಾದ ವೈಟ್ ಹೌಸ್ ಮುಂದೆ ಬಿಡ್ತೀನಿ ಅಂತ ಹಣ ಕಿತ್ತಿದ್ದ.
“ವೀಸಾ ಸಿಗದೆ ಯಾವುದೇ ದೇಶಕ್ಕೆ ಎಂಟ್ರಿ ಇರೊಲ್ಲ ಗೊತ್ತಾ?” ಎಂದೆ.
“ಎಲ್ಲಾ ಡಾಕ್ಯೂಮೆಂಟ್ಸ್ ನಾನು ಮಾಡಿಸಿ ಕೊಡ್ತೀನಿ ಯೂ ಡೋಂಟ್ ವರಿ ಅಂತ ಟ್ರಾವೆಲ್ ಏಜೆಂಟ್ ಹೇಳಿದ್ದನಂತೆ, ನೇರವಾಗಿ ಅಮೇರಿಕ ಪ್ಲೇನ್ ತಾನೇ ಹತ್ತಿಸಬೇಕು?”
“ಮುಂದೆ ಹೇಳಿ ವಿಶಾಲು” ಎಂದೆ.
“ರಂಗಮ್ಮನ ಮಗನ್ನ ಜರ್ಮನಿಗೆ ಕಳಿಸಿದ, ಜರ್ಮನೀಲಿ ಒಂದೆರಡ ದಿನ ಇಟ್ಕೊಂಡು, ಅಲ್ಲಿಂದ ದಕ್ಷಿಣ ಅಮೇರಿಕಾಗೆ ಸಾಗಿಸಿದ. ಉತ್ತರ, ದಕ್ಷಿಣ ಅಮೆರಿಕಾಗೆ ಜಾಯಿಂಟ್ ಕೊಂಡಿಯಾದ ಪನಾಮ ಅನ್ನೋ ಕಾಡು ಪ್ರದೇಶಕ್ಕೆ ರ‍್ಕೊಂಡ್ ಹೋದ. ಅಲ್ಲಿಂದ ಮುಂದೆ ಮೆಕ್ಸಿಕೋಗೇ ಕಳ್ಳದಾರಿ ಇದೆ ಅಂದ. ಅಮೇರಿಕಾ ಇಷ್ಟೊಂದೆಲ್ಲ ಮುಂದುವರೆದಿದೆ ಅಂತ ಜಂಬ ಪಡ್ತೀರಲ್ಲ ಪನಾಮ ಕಾಡಲ್ಲಿ ದಕ್ಷಿಣ ಅಮೇರಿಕಾದಿಂದ ನೀಟಾಗಿ ರೋಡ್ ಮಾಡೋಕ್ ಏನಂತೆ?” ಎಂದಳು ವಿಶಾಲು.
“ರಸ್ತೆ ಇಲ್ಲದೇನೇ ಅಕ್ರಮ ವಲಸಿಗರು ನುಸುಳಿ ಹೋಗ್ತಾ ಇದ್ದಾರೆ, ಇನ್ನು ಹೈವೇ ಮಾಡಿಬಿಟ್ರೆ ಶಿವನೇ ಗತಿ!” ಎಂದ ವಿಶ್ವ.
“ದಕ್ಷಿಣ ಅಮೇರಿಕಾದಿಂದ ಯಾರೂ ನುಸುಳಿ ಬರಬರ‍್ದು ಅಂತಾನೇ ಭಯಂಕರ ಘೊಂಡಾರಣ್ಯವನ್ನು ಹಾಗೇ ಬಿಟ್ಟಿರೋದು, ಸುಮಾರು ೪೦ ಕೀ.ಮೀ. ಕಾಡಲ್ಲಿ ನಡ್ಕೊಂಡ್ ಹೋಗಬೇಕು, ಅಲ್ಲಲ್ಲಿ ನೀರಲ್ಲಿ ನಡ್ಕೊಂಡ್ ಹೋಗಬೇಕು, ಮಧ್ಯದಲ್ಲಿ ಎಷ್ಟೋ ಜನ ಸಾಯ್ತಾರೆ, ಕಾಡಲ್ಲಿ ವಿಷದ ಹಾವುಗಳಿವೆ, ವನ್ಯ ಮೃಗಗಳು ಹಿಡಿದು ತಿನ್ನುತ್ತೆ. ನೂರು ಜನ ಹೋದ್ರೆ ಅವರಲ್ಲಿ ೨೦ ಜನ ಸತ್ತೇ ಹೋಗರ‍್ತಾರೆ, ಬಚಾವ್ ಆದವರು ಕಳ್ಳರಂತೆ ಅಮೇರಿಕಾದ ಗಡೀನ ಡಂಕಿ ಮಾರ್ಗದಿಂದ ತಲುಪುತ್ತಾರೆ” ಎಂದೆ.
“ಡಂಕಿ ಮಾರ್ಗನಾ?” ವಿಶಾಲುಗೆ ಆಶ್ಚರ್ಯ.
“ಹೌದು, ಇದರ ಬಗ್ಗೆ ಶಾರುಖ್ ಖಾನ್ ಒಂದು ಸಿನೆಮಾ ತೆಗೆದ್ರಲ್ಲ ‘ಡಂಕಿ’ ಅಂತ”.
“ಡಂಕಿ ಅಂತ ಯಾಕ್ ಹೆಸರು ಬಂತು?”
“ಅದು ಡಾಂಕಿ ಅನ್ನೋದರ ಅಪಭ್ರಂಶ. ಕಡಿದಾದ ಬೆಟ್ಟಗಳಲ್ಲಿ ಕತ್ತೆ ಮಾತ್ರ ಹೋಗುತ್ತೆ, ಪಂಜಾಬಿ ಭಾಷೇಲಿ ಅದನ್ನ ಡಂಕಿ ಎನ್ನುತ್ತಾರೆ, ಡಂಕಿ ಮಾರ್ಗ ಯಾವತ್ತಿದ್ರೂ ಡೇಂಜರಸ್, ಕದ್ದು ಮುಚ್ಚಿ ಹೋಗಿ ಅಮೇರಿಕ ಸರ‍್ಕೋಬೇಕು, ಮಧ್ಯ ರಾತ್ರಿ ಮೆಕ್ಸಿಕೋದಿಂದ ಕಳ್ಳ ಮಾರ್ಗದಲ್ಲಿ ಯು.ಎಸ್.ಗೆ ಹೋಗುವಾಗ ಸಿಗುವ ಭಯಂಕರ ಮುಳ್ಳು ತಂತಿ ಬೇಲಿ ದಾಟಿದರೆ ಅಲ್ಲಿಂದಾಚೆಗೆ ತೊಂದ್ರೆ ಇರೊಲ್ಲ” ಎಂದೆ.
“ಆಮೇಲೆ ಏನ್ ಆಗುತ್ತೆ?” ಕೇಳಿದಳು ವಿಶಾಲು.
“ಯಾವ್ದೋ ಒಂದು ಕೆಲಸ ಕಡಿಮೆ ಸಂಬಳದಲ್ಲೇ ಹಿಡೀತಾರೆ, ವಿವಿಧ ದೇಶಗಳ ಲಕ್ಷಾಂತರ ಅಕ್ರಮ ವಲಸಿಗರು ಅಮೇರಿಕಾದಲ್ಲಿ ನೆಲೆಸಿದ್ದಾರೆ” ಎಂದೆ.
“ಹೊಟ್ಟೆ ಪಾಡು, ಪಾಪ ಹೋಗರ‍್ತಾರೆ ಅವರು ಸಿಕ್ಕಿಬಿದ್ದಾಗ ಗೌರವದಿಂದ ತಾನೇ ವಾಪಸ್ ಕಳಿಸಿಕೊಡಬೇಕು? ಯಾವ್ದೋ ಮಿಲಿಟ್ರಿ ಫ್ಲೈಟ್‌ ಅಂತೆ, ಒಂದೇ ಒಂದು ಟಾಯ್ಲೆಟ್ ಅಂತೆ, ೧೧೦ ಜನಾನ ತುಂಬಿ ಕಳಿಸಿದ್ದಾರೆ, ಕೂತ್ಕೊಳೋಕೆ ಸೀಟುಗಳಿಲ್ಲವಂತೆ, ಏರೋಸ್ಪೆಸ್ ಮೊದ್ಲೇ ಇಲ್ಲವಂತೆ, ಕಾಫಿ ಇಲ್ಲ, ತಿಂಡಿ ಇಲ್ಲ, ಏನೂ ಇಲ್ಲ, ಬರೀ ಬ್ರೆಡ್ಡು ಬಿಸ್ಕೆಟ್ಟು, ಜ್ಯೂಸು ಕೊಟ್ಟು ವಾಪಸ್ ಕಳಿಸಿರೋದು ಸರಿನಾ?” ವಿಶಾಲು ದಬಾಯಿಸಿದಳು.
“ಅಕ್ರಮ ವಲಸಿಗರಿಂದ ದೇಶದ ಭದ್ರತೆಗೆ ತೊಂದರೆ ಆಗುತ್ತೆ ಅಂತಾರಲ್ಲ?” ಎಂಬ ನನ್ನ ಪ್ರಶ್ನೆಗೆ ವಿಶ್ವ ಉತ್ತರಿಸಿದ.
“ಎಂಥದ್ದೂ ಇಲ್ಲ, ಭಾರತದಲ್ಲಿ ಅಕ್ರಮ ವಲಸಿಗರು ಕೋಟಿಗಳಲ್ಲಿ ಇದ್ದಾರೆ.
ನಮ್ಮ ನಾಯಕರು ಅವರಿಗೆ ಟ್ರಂಪ್ ಥರ ಎಂದೂ ತೊಂದರೆ ಕೊಟ್ಟಿಲ್ಲ. ಆಧಾರ್ ಕಾರ್ಡ್, ಓಟರ್ ಐಡಿ, ರೇಷನ್ ಕಾರ್ಡ್ ಸಿಗೋ ಸೌಲಭ್ಯವನ್ನು ನಮ್ಮ ರಾಜಕಾರಣಿಗಳು ಮಾಡಿಕೊಡ್ತಾರೆ, ಮಾನವೀಯತೆ ಮುಖ್ಯ” ಎಂದ ವಿಶ್ವ, ವಿಶಾಲು ಒಪ್ಪಲಿಲ್ಲ.
“ಒಂದು ಪ್ರಶ್ನೆ ವಿಶಾಲು, ನಿಮ್ಮ ಮನೆಗೆ ಮಧ್ಯರಾತ್ರೀಲಿ ಬಾಂಬೇಯಿಂದ ಒಬ್ಬ ಕಳ್ಳ ಬಂದು ಕನ್ನ ಹಾಕ್ತಾನೆ ಅಂತ ಇಟ್ಕೊಳ್ಳಿ, ರಾತ್ರಿ ಗೋಡೆ ಒಡೆದು ಒಳಗೆ ನುಗ್ತಾನೆ, ಆಗ ನೀವೇನು ಮಾಡ್ತೀರಾ?”
“ನಾನು ಒನಕೆ ಓಬ್ಬವ್ವ ಆಗ್ತೀನಿ” ಎಂದ ವಿಶಾಲು ಕನಲಿದಳು.
“ಕಳ್ಳ ನಿಮ್ಮ ಕೈಲಿ ಸಿಕ್ಕಿ ಬಿದ್ದ ಮೇಲೆ ಅವನಿಗೆ ಮೃಷ್ಟಾನ್ನ ಭೋಜನ ಮಾಡಿಸಿ ಫ್ಲೈಟಲ್ಲಿ ವಾಪಸ್ ಮುಂಬಯಿಗೆ ಕಳಿಸಿಕೊಡ್ತೀರ?”
“ಫ್ಲೈಟಲ್ಲಿ ವಾಪಸ್ ಕಳಿಸೋಕೆ ನನಗೇನು ಹುಚ್ಚು ನಾಯಿ ಕಡಿದಿದೆಯಾ?”.
“ನೀವೇ ಸಹಿಸೊಲ್ಲ, ಇನ್ನು ಅಕ್ರಮ ವಲಸಿಗರನ್ನು ಟ್ರಂಪ್ ಸಹಿಸ್ತಾರಾ?” ಎಂದೆ. “ಪ್ಯಾಸೆಂಜರ್ ಫ್ಲೈಟ್‌ನಲ್ಲಿ ಕಳಿಸ್ಲಿ ಆದರೆ ಕೈಕಾಲುಗಳಿಗೆ ಬೇಡಿ ಯಾಕೆ?”
“ಅದಕ್ಕೆ ಬಲವಾದ ಕಾರಣ ಇದೆ, ಪ್ಯಾಸೆಂಜರ್ ಫ್ಲೈಟ್‌ ಆದ್ರೆ ರಿಸ್ಕ್ ಜಾಸ್ತಿ. ಬೇರೆ ಪ್ರಯಾಣಿಕರನ್ನು ಅಕ್ರಮ ವಲಸಿಗರನು ಹೋಸ್ಟೇಜ್ ಥರ ಹಿಡ್ಕೋಬಹುದು, ಪೈಲೆಟ್‌ಗೆ ಚೂರಿ ತೋರಿಸಿ ಏರೋಪ್ಲೇನ್ ಹೈಜಾಕ್ ಮಾಡಬಹುದು. ದುಃಖ ತಡೆಯಲಾರದವ ಏರೋಪ್ಲೇನ್ ಬಾಗಿಲು ತೆಗೆದು ಕೆಳಕ್ಕೆ ಹಾರಿದರೆ ಇಡೀ ಫ್ಲೈಟ್‌ ಶಿವ ಶಿವಾ !” ಎಂದಾಗ ವಿಶಾಲುಗೆ ಪರಿಸ್ಥಿತಿ ಅರ್ಥವಾಯಿತು.
“ಹಾಗಿದ್ರೆ ನಮ್ಮ ರಾಜಕಾರಣಿಗಳೇಕೆ ಟ್ರಂಪ್‌ನ ಬೈತಿದ್ದಾರೆ?”.
“ಭಾರತದಲ್ಲಿ ರಾಜಕಾರಣಿಗಳಿಗೆ ಕಳ್ಳತನ, ಕೊಲೆ ಹೊಸದಲ್ಲ, ಅಕ್ರಮ ಹಣ ಸಂಪಾದನೆ, ಭೂ ಹಗರಣ, ಮಹಿಳಾ ರಾಂಗ್ ಕನೆಕ್ಷನ್‌ಗಳಿಂದ ನಾಯಕ ಜೈಲ್ ಸರ‍್ತಾನೆ, ಆಗ ಉಳಿದ ನಾಯಕರು ಸಹಕರಿಸಿ ಬೇಲ್ ಕೊಡಿಸ್ತಾರೆ.
ಜೈಲಿಂದ ಬಿಡುಗಡೆ ಆದ ಆರೋಪಿಗೆ ಸೇಬಿನ ಹಾರ ಹಾಕಿ, ಹೂವಿನ ಮಂಟಪದಲ್ಲಿ ಕೂರಿಸಿ ಜೈಕಾರ ಹಾಕ್ತಾ ಮೆರವಣಿಗೆ ಮಾಡ್ತಾರೆ, ಪಟಾಕಿ ಹೊಡೆದು ಸಂಭ್ರಮಿಸ್ತಾರೆ, ಟ್ರಂಪ್‌ಗೆ ಇದು ಗೊತ್ತಿಲ್ಲ” ಎಂದೆ.“ಹಬ್ಬದ ದಿನ ಕೆಟ್ಟ
ವಿಚಾರ ಯಾಕೆ? ನಡೀರಿ ಶಿವನ ಗುಡಿಗೆ ಹೋಗೋಣ” ಎಂದ ವಿಶಾಲು ಟಾಪಿಕ್ ಬದಲಿಸಿದಳು.