ಭೀಕರ ಅಪಘಾತ: ಮೂವರ ಸಾವು

ಬೆಳಗಾವಿ(ಅಥಣಿ): ಕೆಎಸ್‌ಆರ್‌ಟಿಸಿ ಬಸ್ ಹಾಗೂ ಕಾರು ನಡುವೆ ಭೀಕರ ಅಪಘಾತ ಸಂಭವಿಸಿದ್ದು ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಅಥಣಿ ತಾಲೂಕಿನ ಮುರಗುಂಡಿ ಗ್ರಾಮದ ಹೊರವಲಯದಲ್ಲಿ ಈ ಘಟನೆ ನಡೆದಿದ್ದು. ಕಾರ್ ಹಾಗೂ ಬಸ್ ಮುಖಾ-ಮುಖಿ ಡಿಕ್ಕಿಯಾದ ಪರಿಣಾಮ ಕಾರ್ ಸಂಪೂರ್ಣ ನುಜ್ಜು ಗುಜ್ಜಾಗಿದೆ.
ಕರ್ನಾಟಕ ಸಾರಿಗೆ ಸಂಸ್ಥೆಯ ವಿಜಯಪುರ ಬಸ್ ಡಿಪೋಗೆ ಸಂಬಂಧಿಸಿದ ಬಸ್ ಹಾಗೂ ಕಲಬುರಗಿ ಮೂಲದ ವ್ಯಕ್ತಿಯ ಕಾರ್ ಮಧ್ಯ ಅಪಘಾತ ಸಂಭವಿಸಿದೆ. ಮೃತರೆಲ್ಲರೂ ಕಲಬುರಗಿ ಜಿಲ್ಲೆಯ ಅಫ್ಜಲಪುರ ಮೂಲದವರು ಎಂದು ತಿಳಿದುಬಂದಿದೆ. ಗಿರೀಶ ಬಳ್ಳೋರಗಿ, ರಾಹುಲ್ ಮ್ಯಾಲೇಶಿ, ಸಂಗು ಅಮರಗೊಂಡ ಮೃತ ದುರ್ದೈವಿಗಳಾಗಿದ್ದಾರೆ. ರಾಧಿಕಾ ಮ್ಯಾಲೇಶಿ ಎಂಬ ಮಹಿಳೆಗೆ ಗಂಭೀರ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದಾರೆ.
ಕಾರ್‌ನಲ್ಲಿದ್ದವರು ಕೊಲ್ಲಾಪುರದ ಮಹಾಲಕ್ಷ್ಮೀ ದೇವಿ ದರ್ಶನ ಪಡೆದು ವಾಪಾಸ್ ಹೊರಟ್ಟಿದ್ದರು ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.