ಹುಬ್ಬಳ್ಳಿ: ವಾಯುಭಾರ ಕುಸಿತದ ಪರಿಣಾಮ ಕಿತ್ತೂರು ಪ್ರಾಂತ್ಯದ ಎಲ್ಲೆಡೆ ಆವರಿಸಿದ್ದು, ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಮತ್ತು ಘಟ್ಟ ಪ್ರದೇಶದ ಮಲೆನಾಡು ತಾಲ್ಲೂಕುಗಳಲ್ಲಿ ಮಂಗಳವಾರ ಬೆಳಿಗ್ಗೆಯಿಂದ ಗುಡುಗು-ಸಿಡಿಲಿನಿಂದ ಮಳೆ ಭೋರ್ಗರೆಯುತ್ತಿದೆ. ಹಾವೇರಿ ಜಿಲ್ಲೆಯ ಹೊಸರಿತ್ತಿಯಲ್ಲಿ ಸೋಮವಾರ ರಾತ್ರಿ ಬಡಿದ ಸಿಡಿಲಿಗೆ ಹನಮಂತ ಗೌಡ ರಾಮನಗೌಡ (40) ಎಂಬ ಕುರಿಗಾಯಿ ಬಲಿಯಾಗಿದ್ದರು. ಮಂಗಳವಾರ ಮಧ್ಯಾಹ್ನ ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಹಿರೇನೆರ್ತಿ ಗ್ರಾಮದ ಹೊರ ವಲಯದಲ್ಲಿ ಮೈಲಾರೆಪ್ಪ ಉಣಕಲ್ (19) ಎಂಬ ಯುವಕ ಸಿಡಿಲಿಗೆ ಮೃತಪಟ್ಟಿದ್ದಾನೆ.
ಹವಾಮಾನ ಇಲಾಖೆ ಮೊದಲೇ ಮುನ್ಸೂಚನೆ ನೀಡಿದ್ದಂತೆ ಪ್ರಾಂತ್ಯದ ಕರಾವಳಿಯ ಎಲ್ಲೆಡೆ ಸೋಮವಾರವೇ ಚದುರಿದಂತೆ ಮಳೆ ಶುರುವಾಗಿತ್ತು. ಮಂಗಳವಾರ ಬೆಳಿಗ್ಗೆಯಿಂದ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಮತ್ತು ಭಟ್ಕಳ ತಾಲೂಕುಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯಲಾರಂಭಿಸಿದೆ. ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದ್ದು, ಅನೇಕ ಭಾಗಗಳು ನಡುಗಡ್ಡೆಗಳಾಗಿವೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ಧಾಪುರ, ಯಲ್ಲಾಪುರ, ದಾಂಡೇಲಿ, ಹಳಿಯಾಳ ಮೊದಲಾದ ಘಟ್ಟದ ಮೇಲಿನ ತಾಲ್ಲೂಕುಗಳಲ್ಲಿ ಸುರಿಯುತ್ತಿರುವ ರಭಸದ ಮಳೆಯಿಂದಾಗಿ ರಸ್ತೆ ಹಾಗೂ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಶಿರಸಿ ಮತ್ತು ಕುಮಟಾ ನಡುವೆ ವಾಲಗಳ್ಳಿ ಬಳಿ ರಾಜ್ಯ ಹೆದ್ದಾರಿ ಜಲಾವೃತವಾಗಿದ್ದು, ಸಣ್ಣ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.