ಭಾರೀ ಮಳೆಯಿಂದ ಕಾರವಾರದ ಬಳಿ ಗುಡ್ಡಕುಸಿತ: ಕೊಡಸಳ್ಳಿ ಡ್ಯಾಂ ಸಿಬ್ಬಂದಿಗೆ ಸಂಕಷ್ಟ

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಮಳೆ ಆರ್ಭಟ ಜೋರಾದ ಬೆನ್ನಲ್ಲೆ ಮತ್ತೆ ಗುಡ್ಡಕುಸಿತ ಸಂಭವಿಸಿದೆ. ಕದ್ರಾದಿಂದ ಕೊಡಸಳ್ಳಿಗೆ ತೆರಳುವ ಮಾರ್ಗ ಮಧ್ಯೆ, ನಿರ್ದಿಷ್ಟವಾಗಿ ಕದ್ರಾದಿಂದ ಬಾಳೆಮನಿ, ಸುಳಗೇರಿ ಮಾರ್ಗವಾಗಿ ಕೊಡಸಳ್ಳಿ ಡ್ಯಾಂನತ್ತ ಸಾಗುವ ರಸ್ತೆಯಲ್ಲಿ ಮೇಲೆ ಭಾರೀ ಪ್ರಮಾಣದ ಗುಡ್ಡ ಕುಸಿತವಾಗಿದೆ.

ಅದೃಷ್ಟವಶಾತ್, ಈ ಪ್ರದೇಶವು ಕಾಡಿನಿಂದ ಆವೃತ್ತವಾಗಿರುವುದರಿಂದ ಯಾವುದೇ ಪ್ರಾಣಹಾನಿ ಅಥವಾ ಗಾಯಗಳು ಸಂಭವಿಸಿಲ್ಲ ಎನ್ನಲಾಗಿದೆ. ಆದಾಗ್ಯೂ, ಕದ್ರಾ ಮತ್ತು ಕೊಡಸಳ್ಳಿ ನಡುವಿನ ಈ ಘಟನೆಯು ಕೊಡಸಳ್ಳಿ ಡ್ಯಾಂ ಸಿಬ್ಬಂದಿಗೆ ತೀವ್ರ ತಲೆನೋವನ್ನುಂಟು ಮಾಡಿದೆ. ಡ್ಯಾಂನತ್ತ ಸಾಗುವ ರಸ್ತೆಯಲ್ಲಿ ಗುಡ್ಡ ಕುಸಿದಿರುವುದರಿಂದ, ಮಣ್ಣು ತೆಗೆಯದೆ ಸಿಬ್ಬಂದಿಯ ಶಿಫ್ಟಿಂಗ್ ಕೆಲಸ ಕಷ್ಟಕರವಾಗಿದೆ.
ಪ್ರಸ್ತುತ, ಭಾರೀ ಮಳೆ ಸುರಿಯುತ್ತಿರುವುದರಿಂದ ಕುಸಿದ ಮಣ್ಣನ್ನು ತೆರವುಗೊಳಿಸುವುದು ಸವಾಲಾಗಿದೆ. ಆದರೂ, ಜಿಲ್ಲಾಡಳಿತವು ಮಧ್ಯಾಹ್ನದೊಳಗೆ ಜೆಸಿಬಿ ಮೂಲಕ ಮಣ್ಣು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲು ನಿರ್ಧರಿಸಿರುವ ಮಾಹಿತಿ ಲಭ್ಯವಾಗಿದೆ.
ಇನ್ನು ಬಾಳೆಮನೆ ಕೊಡಸಳ್ಳಿ ಗ್ರಾಮದ ವ್ಯಾಪ್ತಿಯ ಜಿಲ್ಲಾ ಮುಖ್ಯ ರಸ್ತೆಯ ಪಕ್ಕದ ಗುಡ್ಡದಲ್ಲಿ ಭೂಕುಸಿತ ಸಂಭವಿಸಿದ್ದು (ಕದ್ರಾದಿಂದ ಬಾಳೆಮನೆ ಸುಳಗೇರಿ ಮಾರ್ಗವಾಗಿ ಕೊಡಸಳ್ಳಿ ಆಣೆಕಟ್ಟಿಗೆ ಹೋಗುವ ರಸ್ತೆಯಲ್ಲಿ) ಸದ್ರಿ ರಸ್ತೆಯು ತಾತ್ಕಾಲಿಕವಾಗಿ ಬಂದಾಗಿರುವ ಕಾರಣ ಈ ರಸ್ತೆಯಲ್ಲಿ ಸಂಚಾರ ನಿರ್ಭಂದಿಸಲಾಗಿದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ವರದಿ ತರುವಾಯ ಸೂಕ್ತ ಕ್ರಮ ಜರುಗಿಸಲಾಗುವುದು. ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಸದರಿ ಮಾರ್ಗದ ಮೂಲಕ ಸಂಚರಿಸಬಾರದಾಗಿ ವಿನಂತಿಸಲಾಗಿದೆ. ಆದ್ದರಿಂದ, ಈ ರಸ್ತೆಯು ನಿರ್ವಹಣೆಯೊಡನೆ ಸಮಸ್ಯೆಗಳನ್ನು ಪೂರ್ಣವಾಗಿ ಪರಿಹರಿಸಿ, ಸಾರ್ವಜನಿಕರಿಗೆ ಸುರಕ್ಷಿತ ಸಂಚಾರಕ್ಕೆ ಅನುಕೂಲವಾಗುವವರೆಗೆ ಈ ರಸ್ತೆಯಲ್ಲಿ ವಾಹನ ಹಾಗೂ ಸಾರ್ವಜನಿಕ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.