ಜಗತ್ತಿನ ದಾರ್ಶನಿಕರಲ್ಲಿ ಅಗ್ರಗಣ್ಯರಾದ ಜಗದ್ಗುರು ಶ್ರೀ ಆದಿಶಂಕರಾಚಾರ್ಯರ ಜಯಂತಿ (ಈ ಬಾರಿ ಮೇ ೨, ಶುಕ್ರವಾರ) ಹತ್ತಿರ ಬರುತ್ತಿದೆ. ಅವರು ವೈದಿಕ ವಾಙ್ಮಯಕ್ಕೆ ಅಂದಿನ ಕಾಲಕ್ಕೆ ಹೊಸತೆನ್ನಬಹುದಾದ ವಿಶಿಷ್ಟ ವ್ಯಾಖ್ಯಾನವನ್ನು ನೀಡಿದರು. ಉಪನಿಷತ್ ಭಾಷ್ಯ, ಬ್ರಹ್ಮಸೂತ್ರ ಭಾಷ್ಯ ಮತ್ತು ಗೀತಾಭಾಷ್ಯಗಳಲ್ಲಿ ಅವರ ಈ ವ್ಯಾಖ್ಯಾನ ಕೌಶಲವನ್ನು ನಾವು ಕಾಣುತ್ತೇವೆ. ಭಾರತದ ಸಮಗ್ರತೆಗೆ ಆದಿಶಂಕರಾಚಾರ್ಯರ ಕೊಡುಗೆ ವಿಶಿಷ್ಟವಾದದ್ದು.
ಶಂಕರ ಭಗವತ್ಪಾದರು ಉಪನಿಷತ್ತು, ಬ್ರಹ್ಮಸೂತ್ರ ಮತ್ತು ಭಗವದ್ಗೀತೆಗಳಿಗೆ ಬರೆದ ಭಾಷ್ಯಗಳು ಮುಂದಿನ ಎಲ್ಲ ಭಾಷ್ಯಕಾರರಿಗೆ ಪೀಠಿಕೆಯಂತಾಗಿವೆ. ಮುಂದೆ ಬಂದ ಬಹುತೇಕ ಭಾಷ್ಯಕಾರರು ಒಂದಲ್ಲ ಒಂದು ರೀತಿಯಲ್ಲಿ ಅವರ ಭಾಷ್ಯಗಳನ್ನು ಅವಲಂಬಿಸುತ್ತಾರೆ. ವೇದಗಳಿಗೆ ಭಾಷ್ಯಗಳನ್ನು ಬರೆದ ಕರ್ನಾಟಕದವರೇ ಆದ ಸಾಯಣರು ವೇದ ವಾಕ್ಯಗಳಿಗೆ ಅರ್ಥ ಬರೆಯುವಾಗ ಅಲ್ಲಲ್ಲಿ ಶಂಕರಾಚಾರ್ಯರ ಅರ್ಥವಿವರಣೆಯನ್ನು ಉಲ್ಲೇಖಿಸಿದ್ದಾರೆ. ವೇದಗಳಲ್ಲಿಯೇ ಉಪನಿಷತ್ತುಗಳು ಬರುವುದರಿಂದ ಉಪನಿಷತ್ತುಗಳಿಗೂ ಸಾಯಣಭಾಷ್ಯವಿದೆ. ಉಪನಿಷತ್ತುಗಳಿಗೆ ಅರ್ಥವಿವರಣೆ ನೀಡುವಾಗ ಶಂಕರರ ಚಿಂತನಾ ಶೈಲಿಯನ್ನೇ ಸಾಯಣರು ಇಟ್ಟುಕೊಂಡಿರುವುದು ಕಂಡುಬರುತ್ತದೆ. ಹೀಗೆ ವೇದಗಳನ್ನು ಅರ್ಥೈಸುವ ವಿಶಿಷ್ಟ ಕ್ರಮದ ಮೊದಲ ಆವಿಷ್ಕಾರವಾದದ್ದು ಶಂಕರರಿಂದ. ಇಂದಿಗೂ ಅದೇ ಕ್ರಮ ಮುಂದುವರೆದಿದೆ.
ಅವರು ಪ್ರತಿಪಾದಿಸಿದ ಅದ್ವೈತ ಸಿದ್ಧಾಂತವು ಮೊದಲೇ ಇತ್ತು. ಭಗವಾನ್ ವೇದವ್ಯಾಸರು, ಶುಕ ಮಹರ್ಷಿಗಳು, ಗೌಡಪಾದಾಚಾರ್ಯರು ಮುಂತಾದವರ ಹೆಸರುಗಳು ಶಂಕರಾಚಾರ್ಯರಿಗಿಂತ ಮೊದಲೇ ಬರುತ್ತವೆ. ಅದೇ ಅದ್ವೈತ ಸಿದ್ಧಾಂತಕ್ಕೆ ಹೊಸ ರೂಪವನ್ನು ಕೊಟ್ಟವರು ಶಂಕರರು. ಉಳಿದ ದಾರ್ಶನಿಕರ ಪ್ರಬಲ ಪ್ರಶ್ನೆಗಳಿಗೆ ಅದಕ್ಕಿಂತ ಪ್ರಬಲವಾದ ಉತ್ತರಗಳನ್ನು ಕೊಟ್ಟು ವಾದಸರಣಿಯಲ್ಲಿ ಗಟ್ಟಿಯಾಗಿ ನಿಲ್ಲುವಂತಹ ಶೈಲಿಯಲ್ಲಿ ಅವರು ಅದ್ವೈತ ಸಿದ್ಧಾಂತವನ್ನು ನಿರೂಪಿಸಿದರು.
ಆ ಕಾಲದಲ್ಲಿ ಸಮಗ್ರ ಭಾರತವನ್ನು ಕಾಲ್ನಡಿಗೆಯಲ್ಲೇ ಸಂಚರಿಸುವ ಮೂಲಕ ಭಾರತ ದೇಶದ ವ್ಯಾಪ್ತಿಯನ್ನು ಸ್ಪಷ್ಟವಾಗಿಸಿದರು. ಇಂದಿನ ಕಾಶ್ಮೀರ, ಪಾಕ್ ಆಕ್ರಮಿತ ಕಾಶ್ಮೀರ, ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶಗಳನ್ನು ಒಳಗೊಂಡ ವಿಸ್ತಾರವಾದ ದೇಶವನ್ನು ಅವರು ಸಂಚರಿಸಿದ್ದರಿಂದ ಇವೆಲ್ಲವೂ ಭಾರತ ದೇಶವಾಗಿತ್ತು ಎಂಬುದು ಸ್ಪಷ್ಟವಾಗುತ್ತದೆ. ಇವತ್ತಿನ ಪರಿಸ್ಥಿತಿಯಲ್ಲಿ ಕಾಶ್ಮೀರದಲ್ಲಿ ಯಾವ ಕ್ಷಣದಲ್ಲೂ ಯುದ್ಧವಾಗಬಹುದಾದ ವಾತಾವರಣವಿದೆ. ಯಾವುದೇ ಪರಿಸ್ಥಿತಿ ಬಂದರೂ ಶಂಕರರು ಕಾಶ್ಮೀರದಲ್ಲಿ ನಿರ್ಮಿಸಿದ ಪವಿತ್ರ ಸ್ಥಾನಗಳು ರಕ್ಷಿತವಾಗಲಿ, ಮತ್ತೆ ಊರ್ಜಿತಾವಸ್ಥೆಗೆ ಬರಲಿ.