ವಾಸುದೇವ ಹೆರಕಲ್ಲ
ವಿಜಯಪುರ: ಸಿಂದಗಿ ತಾಲೂಕಿನ ಬ್ಯಾಡಗಿಹಾಳ(ಈಗ ಆಲಮೇಲ ತಾಲೂಕು) ಗ್ರಾಮದ ಬಳಿ ಭೀಮಾ ನದಿ ತೀರದಲ್ಲಿ ಉಸುಕು ತುಂಬುವ ಕೆಲಸ ಮಾಡುತ್ತಿದ್ದ ಭಾಗಪ್ಪ ಹರಿಜನ ಅದೇ ಭೀಮೆಯ ಒಡಲಿನಲ್ಲಿ ರಕ್ತಹರಿಸಿ ಆ ದ್ವೇಷಾಗ್ನಿಯಲ್ಲಿಯೇ ಹತ್ಯೆಗೀಡಾಗಿದ್ದು ದುರಂತ.
೧೯೯೩-೯೪ ರಲ್ಲಿ ಭಾಗಪ್ಪ ಹರಿಜನ ಭೀಮಾ ನದಿ ತೀರದಲ್ಲಿ ಟ್ರ್ಯಾಕ್ಟರ್‌ಗಳಿಗೆ ಉಸುಕು ತುಂಬುವ ಕೂಲಿಯಾಗಿ ಕೆಲಸ ಮಾಡುತ್ತಿದ್ದುದನ್ನು ಬ್ಯಾಡಗಿಹಾಳ, ಆಲಮೇಲ ಭಾಗದ ಜನರು ನೋಡಿದ್ದಾರೆ. ಅದೇನಾಯಿತೋ ಏನೋ ಗ್ರಾಮದಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಭಾಗಪ್ಪನ ಹೆಸರು ಕೇಳಿಬಂದಿತು. ಕೆಲವೇ ದಿನಗಳಲ್ಲಿ ಮತ್ತೊಂದು ಕೊಲೆ ಪ್ರಕರಣದಲ್ಲೂ ಆತ ಆರೋಪಿಯಾದ. ಆ ನಂತರದಲ್ಲಿ ಆತ ಹೋಗಿ ಸೇರಿಕೊಂಡಿದ್ದು ದೂರದ ಸಂಬಂದಿಕಯಾಗಿದ್ದ ನಟೋರಿಯಸ್ ಹಂತಕ ಚಂದಪ್ಪ ಹರಿಜನನ ಗ್ಯಾಂಗ್‌ನಲ್ಲಿ.
ಚಂದಪ್ಪ ಹರಿಜನ ಗ್ಯಾಂಗಿನ ಅತ್ಯಂತ ಕಿರಿಯ ಸದಸ್ಯನಾಗಿದ್ದ ಭಾಗಪ್ಪ ಶಾರ್ಪ ಶೂಟರ್. ಸಮಯ ಹಾಗೂ ಗುಂಡುಗಳು ದೊರಕಿದಾಗಲೆಲ್ಲ ಬಂದೂಕಿನಿಂದ ಗುರಿ ಇಟ್ಟು ಹೊಡೆಯುವುದನ್ನು ಪ್ರಾಕ್ಟೀಸ್ ಮಾಡಿದ. ಚಂದಪ್ಪನ ನೆರಳಿನಂತೆ ಆತನೊಂದಿಗೆ ಓಡಾಡಿಕೊಂಡಿದ್ದ. ಆತನ ಎಲ್ಲ ರಹತ್ಯ ಕಾರ್ಯಾಚರಣೆಗಳೂ ಭಾಗಪ್ಪನಿಗೆ ಗೊತ್ತಿರುತ್ತಿದ್ದವು.
೨೦೦೦ ಇಸ್ವಿಯಲ್ಲಿ ಚಂದಪ್ಪ ಹರಿಜನ ಪೊಲೀಸ್ ಎನ್‌ಕೌಂಟರ್‌ನಲ್ಲಿ ಹತ್ಯೆಯಾದ ನಂತರದಲ್ಲಿ ತಲೆಮರೆಸಿಕೊಂಡಿದ್ದ ಭಾಗಪ್ಪ ತನ್ನದೇ ಆದ ಗ್ಯಾಂಗ್ ಕಟ್ಟಿಕೊಂಡು ಓಡಾಡುತ್ತಿದ್ದ. ಕೆಲವು ರಾಜಕಾರಣಿಗಳ ಶ್ರೀರಕ್ಷೆಯೂ ಆತನಿಗಿತ್ತು. ಹತ್ತು ಹಲವು ಪ್ರಕರಣಗಳಲ್ಲಿ ಆರೋಪಿಯಾದರೂ ಜಾಮೀನು ಪಡೆದು ಹೊರಬರುತ್ತಿದ್ದ. ಕೊಲೆ, ಕೊಲೆಯತ್ನ, ಸುಲಿಗೆ, ಬೆದರಿಕೆಯೊಡ್ಡುವುದು ಸೇರಿದಂತೆ ಹಲವಾರು ಪ್ರಕರಣಗಳು ಆತನ ವಿರುದ್ಧ ವಿಜಯಪುರ ಹಾಗೂ ಕಲಬುರ್ಗಿ ಜಿಲ್ಲೆಯಲ್ಲಿ ದಾಖಲಾಗಿದ್ದವು.
ಬಹುತೇಕ ಪ್ರಕರಣಗಳಲ್ಲಿ ಖುಲಾಸೆಯಾಗಿದ್ದ ಭಾಗಪ್ಪ ಇನ್ನೊಂದಿಷ್ಟು ಪ್ರಕರಣಗಳಿಂದ ಹೊರಬಂದು ಸಮಾಜದ ಮುಖ್ಯವಾಹಹಿನಿಗೆ ಬರುವುದಾಗಿ ಹೇಳಿಕೊಳ್ಳುತ್ತಿದ್ದ. ೨೦೧೮ ರಲ್ಲಿ ವಿಜಯಪುರ ನ್ಯಾಯಾಲಯದ ಅಂಗಳದಲ್ಲಿಯೇ ಆತನ ಮೇಲೆ ಗುಂಡಿನ ದಾಳಿ ನಡೆದಿತ್ತು. ನಾಲ್ಕು ಗುಂಡುಗಳು ದೇಹವನ್ನು ಹೊಕ್ಕಿದ್ದರೂ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದ. ಬಿಎಲ್‌ಡಿಇ ಆಸ್ಪತ್ರೆಯಲ್ಲಿ ದಾಖಲಾಗಿದ್ದಾಗಲೇ ಮಾಧ್ಯಮಗಳಿಗೆ ಹೇಳಿಕೆ ನೀಡಿ ನಾನು ಈ ಮಾರ್ಗವನ್ನು ಬಿಟ್ಟಿದ್ದೇನೆ. ನಾನು ಯಾರ ತಂಟೆಗೂ ಹೋಗುವುದಿಲ್ಲ ಎಂದು ಹೇಳಿಕೊಂಡಿದ್ದ.
ಮೈ ಮರೆತನಾ ಭಾಗಪ್ಪ
ಭೀಮಾತೀರದ ಹಂತಕರ ನಿಗೂಢ ನಡೆಗಳನ್ನೆಲ್ಲ ಭಾಗಪ್ಪ ಮೈಗೂಡಿಸಿಕೊಂಡಿದ್ದ. ತಾನು ಮಲಗುವ ಜಾಗವನ್ನು ತನ್ನ ಸಹಚರರಿಗೂ ಹೇಳುತ್ತಿರಲಿಲ್ಲ. ರಾತ್ರಿ ಮೈಯಲ್ಲ ಕಣ್ಣಾಗಿರುತ್ತಿದ್ದ. ತನ್ನ ಸುತ್ತಮುತ್ತ ಹತ್ತಾರು ವಿಶ್ವಾಸಿಕ ಹುಡುಗರನ್ನು ಇಟ್ಟುಕೊಂಡಿರುತ್ತಿದ್ದ. ಆತ ಯಾವಾಗ ಎಲ್ಲಿಗೆ ಬರುತ್ತಾನೆ. ಮುಂದೆ ಎಲ್ಲಿಗೆ ಹೋಗುತ್ತಾನೆ ಎಂಬ ಸಣ್ಣ ಸುಳಿವು ಸಹ ಯಾರಿಗೂ ಗೊತ್ತಾಗುತ್ತಿರಲಿಲ್ಲ.
ಚಿರತೆಯಷ್ಟೇ ಚುರುಕಾಗಿದ್ದ ಭಾಗಪ್ಪ ಮದೀನಾ ನಗರದ ಮನೆಯಿಂದ ವಾಕಿಂಗ್‌ಗಾಗಿ ಹೊರಬಂದಾಗ ಮೈ ಮರೆತನೇ? ಆತನೊಂದಿಗೆ ಸದಾಕಾಲ ಇರುತ್ತಿದ್ದ ಹುಡುಗರು, ಗನ್ ಬಿಟ್ಟು ಹೊರಗೆ ಬಂದನೇ ಎಂಬುದು ಆತನ ಮನೆ ಮಂದಿಗೂ ಉತ್ತರಿಸಲಾಗದ ಪ್ರಶ್ನೆಯಾಗಿದೆ.
ಕರೆಂಟ್ ತಗೆದು ಹೊಡೆದರೆ?
ಕೆಲವು ವರ್ಷಗಳ ಹಿಂದೆ ಆಲಮೇಲದಲ್ಲಿ ಕರೆಂಟ್ ಹೋದರೆ ಸಾಕು ಜನ ಭಯಭೀತರಾಗುತ್ತಿದ್ದರು. ಕರೆಂಟ್ ಹೋದರೆ ಹೆಣ ಬಿತ್ತು ಎಂತಲೇ ಲೆಕ್ಕ. ಆಲಮೇಲದಲ್ಲಿ ನಡೆದ ಎರಡು ಕೊಲೆ, ಹಾಗೂ ಒಂದು ಗುಂಡಿನ ದಾಳಿ ಸಂದರ್ಭದಲ್ಲೂ ಕರೆಂಟ್ ಇರಲಿಲ್ಲ. ಕಾಕತಾಳೀಯವೋ ಎಂಬಂತೆ ಭಾಗಪ್ಪ ಹರಿಜನ ಕೊಲೆಯಾದ ಸಂದರ್ಭದಲ್ಲೂ ಮದೀನಾ ನಗರದಲ್ಲಿ ಕರೆಂಟ್ ಇರಲಿಲ್ಲ. ಊಟ ಮಾಡಿ ಮನೆ ಮುಂಭಾಗದಲ್ಲಿಯೇ ವಾಕಿಂಗ್ ಮಾಡುತ್ತಿದ್ದಾಗ ಆಟೋದಲ್ಲಿ ಬಂದಿದ್ದರು ಎನ್ನನಲಾದ ದುಷ್ಕರ್ಮಿಗಳು ಹತ್ಯೆ ಮಾಡಿ ಅದೇ ಆಟೋದಲ್ಲಿ ಪರಾರಿಯಾಗಿ ಹೋಗಿದ್ದಾರೆ.
ಲಕ್ಷ್ಮೀದೇವಿ ಭಕ್ತ
ಭಾಗಪ್ಪ ಹರಿಜನ ಹಂತಕ ಚರಿತ್ರೆ ಒಂದಾದರೂ ಆತನ ಭಕ್ತಿಯ ಚರಿತ್ರೆಯ ಮಜಲು ಮತ್ತೊಂದು. ಹೆಗಡಿಹಾಳ ಗ್ರಾಮದ ಲಕ್ಷ್ಮೀದೇವಿಯ ಬಗ್ಗೆ ಆತನಿಗೆ ಅಪಾರ ಭಕ್ತಿ. ಸುಮಾರು ಒಂದು ಎಕರೆ ೧೫ ಗುಂಟೆಯಷ್ಟು ಜಾಗವನ್ನು ಹೊಸ ದೇವಸ್ಥಾನದ ನಿರ್ಮಾಣಕ್ಕೆ ದಾನ ಮಾಡಿದ್ದ ಭಾಗಪ್ಪ ತಾಯಿ ತನ್ನನ್ನು ಸದಾಕಾಲ ಕಾಪಾಡುತ್ತಾಳೆ ಎಂದು ನಂಬಿದ್ದ. ಹೊಸ ದೇವಸ್ಥಾನದ ನಿರ್ಮಾಣ ಕಾರ್ಯ ಕೊನೆ ಹಂತದಲ್ಲಿದ್ದು ಕೆಲವೇ ದಿನಗಳಲ್ಲಿ ದೇವಸ್ಥಾನದ ಕಳಸಾರೋಹಣಕ್ಕೆ ಪ್ಲಾನ್ ಮಾಡಿಕೊಂಡಿದ್ದ. ಅಷ್ಟರೊಳಗಾಗಿ ಲಕ್ಷ್ಮೀಯ ಪಾದ ಸೇರಿದ್ದಾನೆ.