ಭವಿಷ್ಯ ಹೇಳುವುದನ್ನು ಬಿಟ್ಟೆ

ಇನ್ನು ಮುಂದೆ ಭವಿಷ್ಯ ಹೇಳುವುದಿಲ್ಲ ಎಂದು ಕರಿಲಕ್ಷಂಪತಿ ಶಪಥ ಮಾಡಿರುವ ಸುದ್ದಿ ಎಲ್ಲರಿಗೂ ಗೊತ್ತಾಯಿತು. ತಳವಾರ್ಕಂಟಿ ಮುಂತಾದವರು ಕರಿಲಕ್ಷಂಪತಿ ಭವಿಷ್ಯ ಹೇಳುವುದು ನಿಲ್ಲಿಸಿರುವುದು ದೇಶಕ್ಕೆ ಬಲು ನಷ್ಟ ಎಂದು ಭಾಷಣ ಮಾಡಿದರು. ಇನ್ನೂ ಹಲವರು ಮನೆವರೆಗೆ ಹೋಗಿ ಕರಿಲಕ್ಷಂಪತ್ಯಣ್ಣ ನೀ ಬಿಡಬೇಡ..ನಿರೂಪಕಿ ಕಿವುಡನುಮಿ ಕರಿಲಕ್ಷಂಪತಿಯನ್ನು ಸಂದರ್ಶನ ಮಾಡಲೇಬೇಕು ಎಂದು ಪಣತೊಟ್ಟಳು. ಕಟಗಿ ಕರಬಸು ಅವರಿವರಿಂದ ಹೇಳಿಸಿ ಸಂದರ್ಶನಕ್ಕೆ ಒಪ್ಪಿಸಿದಳು. ಆದರೂ ಕರಿಲಕ್ಷಂಪತಿ ನಮಗೆ ಇವೆಲ್ಲ ಬೇಡ ಎಂದು ಹೇಳಿದರೂ ಆಕೆ ಬಿಡಲಿಲ್ಲ. ನೀವು ಬರಲೇಬೇಕು ಎಂದು ಹಠ ಹಿಡಿದಳು. ಕೊನೆ ಅಸ್ತ್ರ ಎಂಬಂತೆ ಕ.ಲ ಪತ್ನಿಗೆ ವಸೂಲಿ ಹಚ್ಚಿದಳು. ಹೆಂಡತಿ ಸಿಟ್ಟಿನಿಂದ ಹೇಳಿದಾಗ ಸಂದರ್ಶನಕ್ಕೆ ಒಪ್ಪಿಗೆ ಕೊಟ್ಟಳು. ಕರಿಲಕ್ಷಂಪತಿಯನ್ನು ಸಂದರ್ಶನ ಮಾಡಿದರೆ ನಮ್ಮ ಟಿವಿಗೆ ಸಕತ್ ಡಿಮ್ಯಾಂಡ್ ಬರುತ್ತದೆ ಎಂದು ಅಂದುಕೊಂಡ ಕಿವುಡನುಮಿ ಸಂದರ್ಶನ ದಿನ ಢಾಳ್ ಢಾಳ್ ಆಗಿ ರೆಡಿಯಾದಳು. ಕರಿಲಕ್ಷಂಪತಿ ಹೇಳಿದ ಸಮಯಕ್ಕೆ ಸರಿಯಾಗಿ ಸ್ಟುಡಿಯೋಗೆ ಬಂದರು. ಮೈಕ್ ಹಾಕಿಕೊಂಡು ರೆಡಿಯಾದರು.
ಕಿವುಡನುಮಿ: ನಮಸ್ತೆ ಕ.ಲ. ಅವರೆ
ಕರಿಲಕ್ಷಂಪತಿ: ನಮಸ್ತೆ ಹೇಳಿ
ಕಿವುಡನುಮಿ: ನೀವು ಭವಿಷ್ಯ ಹೇಳುವುದನ್ನು ಬಿಟ್ಟಿರಂತೆ?
ಕರಿಲಕ್ಷಂಪತಿ: ಹೌದು ಶಪಥ ಕೂಡ ಮಾಡಿದ್ದೇನೆ.
ಕಿವುಡನುಮಿ: ಕಾರಣ ಕೇಳಬಹುದೇ
ಕರಿಲಕ್ಷಂಪತಿ: ಯಾರ ಮುಂದೆಯೂ ಹೇಳಿರಲಿಲ್ಲ. ನಿಮ್ಮ ಮುಂದೆ ಹೇಳುತ್ತೇನೆ ಕೇಳಿ. ನಾನು ಈ ಮುಂಚೆಯೇ ನೀನು ಮುಂದಿನ ಸಿಎಂ ಎಂದು ಹೇಳಿದ್ದೆ. ಅವರು ಮೇಲಿಂದ ಮೇಲೆ ನಾನ್ಯಾವಾಗ? ನಾನ್ಯಾವಾಗ? ಎಂದು ಕೇಳುತ್ತಿದ್ದರು. ಅಲ್ಲದೇ ಅವರ ಮಂದಿಗೂ ಹೇಳುತ್ತಿದ್ದರು. ಅದು ಸದ್ಯದ ಸಿಎಂಗೆ ಗೊತ್ತಾಗಿ ಯಾಕ್ಲಾ? ಎಂದು ಏನು ಹೇಳಬೇಕೋ ಅದನ್ನು ಹೇಳಿದರು. ಅಂದಿನಿಂದ ಭವಿಷ್ಯ ಹೇಳುವುದನ್ನು ಬಿಟ್ಟೆ ನಮಸ್ಕಾರ.