ಭರಮನಿಯವರು ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯಲಿ

ಬೆಂಗಳೂರು: “ಸಿದ್ದರಾಮಯ್ಯನವರ ಸರ್ಕಾರದಲ್ಲಿ ಗೌರವಸ್ಥ ಅಧಿಕಾರಿಗಳಿಗೆ ಉಳಿಗಾಲವಿಲ್ಲ …….” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಗೌರವಸ್ಥ ಕ್ರಿಯಾಶೀಲ ಅಧಿಕಾರಿಗಳಿಗೆ ಕಪಾಳಮೋಕ್ಷ, ಸಾರ್ವಜನಿಕವಾಗಿ ಬಹಿರಂಗ ವೇದಿಕೆಯಲ್ಲೇ ಅಪಮಾನಿಸುವುದು, ಏಕವಚನದಲ್ಲಿ ಸಂಬೋಧಿಸುವುದು, ಶ್ರದ್ಧೆಯಿಂದ ಕರ್ತವ್ಯ ನಿಭಾಯಿಸಿದರು ತಮ್ಮದಲ್ಲದ ತಪ್ಪಿಗೆ ಅಮಾನತ್ತಿನ ಶಿಕ್ಷೆ ಅನುಭವಿಸುವುದು ಕಾಂಗ್ರೆಸ್‌ ಸರ್ಕಾರದ ಆಡಳಿತದ ನಿತ್ಯಕಥೆಯಾಗಿದೆ. ಬೆಳಗಾವಿಯ ಬಹಿರಂಗ ವೇದಿಕೆಯಲ್ಲಿ ಮುಖ್ಯಮಂತ್ರಿಗಳಿಂದ ನಿಂದನೆ ಅನುಭವಿಸಿದ್ದ ಪೊಲೀಸ್ ಅಧಿಕಾರಿ ನಾರಾಯಣ ಭರಮನಿ ಇದೀಗ ತಮಗಾದ ಅವಮಾನದಿಂದ ಮನನೊಂದು ಗೌರವದಿಂದ ಕರ್ತವ್ಯ ನಿಭಾಯಿಸಿದರೂ ಕೆಟ್ಟ ವ್ಯವಸ್ಥೆಯಲ್ಲಿ ಸೇವೆ ಸಲ್ಲಿಸುವುದು ಸಾಧ್ಯವೇ ಇಲ್ಲ ಎಂಬ ನಿರ್ಧಾರಕ್ಕೆ ಬಂದು ಸೇವೆಯಿಂದ ನಿವೃತ್ತಿ ಬಯಸಿರುವುದು ಅತ್ಯಂತ ನೋವಿನ ಹಾಗೂ ದುರ್ದೈವದ ಸಂಗತಿ.

ಇಂತಹ ಅಧಿಕಾರಿಗಳಿಗೆ ನೈತಿಕ ಬಲ ತುಂಬಲು ಈ ನಾಡಿನಲ್ಲಿ ಪ್ರಜ್ಞಾವಂತ ಜನರಿದ್ದಾರೆ, ಮಾಧ್ಯಮಗಳಿದ್ದಾವೆ, ಭರಮನಿಯವರು ಯಾವುದೇ ಕಾರಣಕ್ಕೂ ಎದೆಗುಂದದೆ ತಮ್ಮ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯಲಿ ಎಂದು ವಿನಂತಿಸುವೆ, ನಾವು ನಿಮ್ಮೊಂದಿಗೆ ಇದ್ದೇವೆ ಎಂದಿದ್ದಾರೆ.