ಭಯೋತ್ಪಾದನೆಗೆ ಕುಮ್ಮಕ್ಕು ಕೊಟ್ಟ ಮುನೀರ್

ಏಪ್ರಿಲ್ ೨೨ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದನಾ ದಾಳಿಯಲ್ಲಿ ೨೬ ಅಮಾಯಕ ನಾಗರಿಕರು ಬಲಿಯಾದರು. ಪಾಕಿಸ್ತಾನಿ ಸೇನೆಯ ಬೆಂಬಲ ಹೊಂದಿರುವ ಭಯೋತ್ಪಾದಕರು ಈ ಕೃತ್ಯವನ್ನು ನಡೆಸಿದ್ದಾರೆ ಎಂದು ಭಾರತ ಭಾವಿಸಿದೆ. ಈ ದಾಳಿಗೆ ಒಂದು ವಾರದ ಹಿಂದಷ್ಟೇ ಪಾಕಿಸ್ತಾನಿ ಸೇನಾ ಮುಖ್ಯಸ್ಥ, ಜನರಲ್ ಆಸಿಮ್ ಮುನೀರ್ ಅವರು ಇಸ್ಲಾಮಾಬಾದ್‌ನಲ್ಲಿ ದ್ವೇಷ ಭಾಷಣ ನಡೆಸಿದ್ದು, ಅದು ನವದೆಹಲಿಯ ಹುಬ್ಬು ಮೇಲೇರುವಂತೆ ಮಾಡಿತ್ತು.
ಜನರಲ್ ಮುನೀರ್ ಪ್ರಸ್ತುತ ಪಾಕಿಸ್ತಾನದ ಅತ್ಯಂತ ಪ್ರಭಾವಿ ವ್ಯಕ್ತಿಯಾಗಿದ್ದಾರೆ. ತನ್ನ ಭಾಷಣದಲ್ಲಿ ಮುನೀರ್ ಕಾಶ್ಮೀರ ಪಾಕಿಸ್ತಾನದ ಕತ್ತಿನ ರಕ್ತನಾಳ' (ಮೆದುಳಿನಿಂದ ಹೃದಯಕ್ಕೆ ರಕ್ತ ಪರಿಚಲನೆ ನಡೆಸುವ, ಕತ್ತಿನ ಮೂಲಕ ಸಾಗುವ ಪ್ರಮುಖ ರಕ್ತನಾಳ) ಎಂದು ಬಣ್ಣಿಸಿದ್ದರು. ಈ ಪದವನ್ನು ಮೊದಲಿಗೆ ಪಾಕಿಸ್ತಾನದ ಸ್ಥಾಪಕ ಮುಹಮ್ಮದ್ ಅಲಿ ಜಿನ್ನಾ ಬಳಸಿದ್ದರು. ಅವರ ಮಾತಿನ ಪ್ರಕಾರ, ಪಾಕಿಸ್ತಾನ ತನ್ನ ಉಳಿವಿಗೆ ಕಾಶ್ಮೀರ ಅನಿವಾರ್ಯ ಎಂದು ಪರಿಗಣಿಸಿದೆ. ಪಾಕಿಸ್ತಾನ ಎಂದಿಗೂ ತನ್ನಕಾಶ್ಮೀರಿ ಸೋದರ’ರನ್ನು ಬಿಟ್ಟುಕೊಡುವುದಿಲ್ಲ ಎಂದು ಮುನೀರ್ ಹೇಳಿದ್ದು, ಪ್ರಾಂತ್ಯದ ಉದ್ವಿಗ್ನತೆಗಳಿಗೆ ಪಾಕಿಸ್ತಾನದ ನಿರಂತರ ಬೆಂಬಲ ಇರುವುದಕ್ಕೆ ಸಾಕ್ಷಿಯಾಗಿದೆ.
ಹಾಗೆಂದು ಮುನೀರ್ ಇಂತಹ ಮಾತುಗಳನ್ನಾಡಿರುವುದು ಇದೇ ಮೊದಲಲ್ಲ. ಫೆಬ್ರವರಿ ತಿಂಗಳಲ್ಲಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಮಾತನಾಡಿದ ಮುನೀರ್, “ಕತ್ತಿನ ರಕ್ತನಾಳವನ್ನು ಕತ್ತರಿಸುವುದೆಂದರೆ ಸಾವು. ಅಲ್ಲಾಹನ ಯೋಧರು ನಂಬಿಕೆ, ಧರ್ಮನಿಷ್ಠೆ, ಮತ್ತು ಜಿಹಾದ್ ಮೂಲಕ ಗೆಲುವು ಸಾಧಿಸುತ್ತಾರೆ” ಎಂದಿದ್ದರು.
ಮುನೀರ್ ಭಾಷಣಗಳು ಸಾಮಾನ್ಯವಾಗಿ ಧಾರ್ಮಿಕ ವಿಚಾರಗಳನ್ನು ಒಳಗೊಂಡಿರುತ್ತವೆ. ಮುನೀರ್ ಇತರ ಪಾಕಿಸ್ತಾನಿ ಜನರಲ್‌ಗಳಂತಲ್ಲದೆ, ಹಫೀಜ್-ಇ-ಕುರಾನ್, ಅಂದರೆ ಸಂಪೂರ್ಣ ಧಾರ್ಮಿಕ ಗ್ರಂಥವನ್ನು ಕಂಠಪಾಠ ಮಾಡಿದ್ದಾರೆ. ಅವರು ಭಾಷಣಗಳಲ್ಲಿ ಧರ್ಮಗ್ರಂಥವನ್ನು ಉರ್ದು, ಅರೇಬಿಕ್ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಉಲ್ಲೇಖಿಸುತ್ತಾರೆ. ಅವರ ಆಳವಾದ ಧಾರ್ಮಿಕ ದೃಷ್ಟಿಕೋನಗಳು ಅವರು ಬೆಳೆದುಬಂದ ರೀತಿಯಿಂದಲೇ ರೂಪುಗೊಂಡಿವೆ. ಮುನೀರ್ ತಂದೆ ಓರ್ವ ಶಾಲಾ ಶಿಕ್ಷಕ ಮತ್ತು ಮಸೀದಿಯ ಪ್ರಾರ್ಥನಾ ಮುಖಂಡರಾಗಿದ್ದು, ೧೯೪೭ರಲ್ಲಿ ಭಾರತದಿಂದ ಪಾಕಿಸ್ತಾನಕ್ಕೆ ವಲಸೆ ಹೋಗಿದ್ದರು.
ಮುನೀರ್ ಪಾಕಿಸ್ತಾನದ ಮಿಲಿಟರಿ ಅಕಾಡೆಮಿಯಲ್ಲಿ ಅಧ್ಯಯನ ನಡೆಸಿಲ್ಲ. ಬದಲಿಗೆ, ಮಿಲಿಟರಿ ಸರ್ವಾಧಿಕಾರಿ, ಪಾಕಿಸ್ತಾನಿ ಸೇನೆಯನ್ನು ಹೆಚ್ಚು ಹೆಚ್ಚು ಧರ್ಮದ ಅಮಲಿಗೆ ತಳ್ಳಿದ ಜನರಲ್ ಜಿಯಾ ಉಲ್ ಹಕ್ ಆಡಳಿತದ ಸಂದರ್ಭದಲ್ಲಿ ಮಂಗ್ಲಾದ ಆಫೀಸರ್ಸ್ ಟ್ರೈನಿಂಗ್ ಸ್ಕೂಲ್‌ನಲ್ಲಿ ತರಬೇತಿ ಪಡೆದು, ಫ್ರಾಂಟಿಯರ್ ಫೋರ್ಸ್ ರೆಜಿಮೆಂಟಿನ ೨೩ನೇ ಬಟಾಲಿಯನ್‌ಗೆ ಸೇರ್ಪಡೆಗೊಂಡಿದ್ದರು.
ಮುನೀರ್ ಪಾಕಿಸ್ತಾನದ ಮುಖ್ಯ ಗುಪ್ತಚರ ಸಂಸ್ಥೆಯಾದ ಐಎಸ್‌ಐ ಮುಖ್ಯಸ್ಥರಾಗಿದ್ದ ಸಂದರ್ಭದಲ್ಲಿ, ೨೦೧೯ರಲ್ಲಿ ಪುಲ್ವಾಮಾ ದಾಳಿ ನಡೆದು, ೪೦ ಭಾರತೀಯ ಯೋಧರು ಸಾವಿಗೀಡಾಗಿದ್ದರು. ಈ ಸಂದರ್ಭದಲ್ಲಿ ಮುನೀರ್ ಭಾರತದಲ್ಲೂ ಸುದ್ದಿಯಾಗಿದ್ದರು. ಆದರೆ, ಮುನೀರ್ ಕೇವಲ ಎಂಟು ತಿಂಗಳಷ್ಟೇ ಐಎಸ್‌ಐ ಮುಖ್ಯಸ್ಥರಾಗಿದ್ದರು. ಆಗಿನ ಪ್ರಧಾನಿ ಇಮ್ರಾನ್ ಖಾನ್ ಅವರ ಪತ್ನಿಯ ಪಾಲ್ಗೊಳ್ಳುವಿಕೆ ಇದೆ ಎನ್ನಲಾದ ಭ್ರಷ್ಟಾಚಾರ ಹಗರಣದ ತನಿಖೆ ನಡೆಸಲು ಮುಂದಾದ ಸಂದರ್ಭದಲ್ಲಿ ಮುನೀರ್ ಅನ್ನು ಹುದ್ದೆಯಿಂದ ಕೆಳಗಿಳಿಸಲಾಗಿತ್ತು.
ಬಳಿಕ ಮುನೀರ್ ಕಾರ್ಪ್ಸ್ ಕಮಾಂಡರ್, ಕ್ವಾರ್ಟರ್‌ಮಾಸ್ಟರ್ ಜನರಲ್‌ನಂತಹ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದರು. ನವೆಂಬರ್ ೨೦೨೨ರಲ್ಲಿ, ನಿವೃತ್ತಿಗೆ ಕೆಲ ಸಮಯ ಮುನ್ನ ಅವರನ್ನು ಸೇನಾ ಮುಖ್ಯಸ್ಥರನ್ನಾಗಿಸಲಾಯಿತು.
ಇಂದು ಮುನೀರ್ ಪಾಕಿಸ್ತಾನದಲ್ಲೇ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ೨೦೨೪ರ ಸಾರ್ವತ್ರಿಕ ಚುನಾವಣೆಗಳನ್ನು ಅಕ್ರಮ ಎಂದು ಪರಿಗಣಿಸಲಾಗಿತ್ತು. ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಅಭ್ಯರ್ಥಿಗಳಿಗೆ ಪಕ್ಷದ ಹೆಸರಿನಡಿ ಸ್ಪರ್ಧಿಸಲು ಅವಕಾಶವಿರಲಿಲ್ಲ. ಇಮ್ರಾನ್ ಖಾನ್ ಇಂದಿಗೂ ಸೆರೆಮನೆಯಲ್ಲಿದ್ದು, ಮುನೀರ್ ತನ್ನನ್ನು ವೈಯಕ್ತಿಕವಾಗಿ ಗುರಿಯಾಗಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಇಂದಿಗೂ ಪಾಕಿಸ್ತಾನಿ ಸೇನೆಯೊಳಗೆ ವೈರುಧ್ಯವಿದ್ದು, ಕೆಲವರು ಇಮ್ರಾನ್ ಖಾನ್‌ರನ್ನು ಬೆಂಬಲಿಸಿದರೆ, ಉಳಿದವರು ಮುನೀರ್ ಬೆಂಬಲಿಗರಾಗಿದ್ದಾರೆ.
ಪಾಕಿಸ್ತಾನದ ಪರಿಸ್ಥಿತಿಯೂ ಈಗ ಉದ್ವಿಗ್ನಗೊಂಡಿದೆ. ಬಲೂಚಿಸ್ತಾನದಲ್ಲಿ ಬಂಡಾಯ ಹೆಚ್ಚುತ್ತಿದೆ. ಮಾರ್ಚ್ ತಿಂಗಳಲ್ಲಿ, ಬಲೂಚ್ ಹೋರಾಟಗಾರರು ಪ್ರಯಾಣಿಕ ರೈಲೊಂದನ್ನು ಅಪಹರಿಸಿ, ೬೪ ಜನರನ್ನು ಹತ್ಯೆಗೈದಿದ್ದರು. ಪಾಕಿಸ್ತಾನವನ್ನು ಕಟ್ಟರ್ ಇಸ್ಲಾಮಿಕ್ ರಾಷ್ಟ್ರವನ್ನಾಗಿಸುವ ಗುರಿ ಹೊಂದಿರುವ ಪಾಕಿಸ್ತಾನ್ ತಾಲಿಬಾನ್ (ಟಿಟಿಪಿ) ಸಹ ತನ್ನ ದಾಳಿಗಳನ್ನು ತೀವ್ರಗೊಳಿಸಿದೆ. ಚೀನೀ ಕಾರ್ಮಿಕರು ಮತ್ತು ಅಲ್ಪಸಂಖ್ಯಾತ ಸಮುದಾಯಗಳನ್ನು ಗುರಿಯಾಗಿಸಿ ದಾಳಿಗಳಾಗುತ್ತಿವೆ.
ಏಪ್ರಿಲ್ ೧೫ರ ಭಾಷಣದಲ್ಲಿ ಮುನೀರ್ “ಹಿಂದೂಗಳು ಮತ್ತು ಮುಸ್ಲಿಮರು ಪ್ರತ್ಯೇಕ ರಾಷ್ಟ್ರಗಳು” ಎಂಬ ಹೇಳಿಕೆ ನೀಡಿದ್ದು, ಇದನ್ನು ಉದ್ವಿಗ್ನತೆಗೆ ಉತ್ತೇಜನ ನೀಡಲು ಆಡಿದ ಮಾತುಗಳು ಎಂದು ಭಾರತದಲ್ಲಿ ಪರಿಗಣಿಸಲಾಗಿದೆ. ಅಥವಾ ಪಾಕಿಸ್ತಾನದ ಸ್ಥಾಪನೆಯ ಉದ್ದೇಶವನ್ನು ಜನರಿಗೆ ನೆನಪಿಸಿ, ಮತ್ತೆ ಜನ ಬೆಂಬಲ ಗಳಿಸುವ ಉದ್ದೇಶವೂ ಮುನೀರ್ ಹೇಳಿಕೆಯ ಹಿಂದಿರಬಹುದು. ಪಹಲ್ಗಾಮ್ ದಾಳಿ ನಡೆದಿರುವ ಸಮಯವನ್ನು ಗಮನಿಸಿದರೆ, ಮುನೀರ್ ಭಾಷಣ ಮುಂದೆ ನಡೆಯುವುದರ ಎಚ್ಚರಿಕೆಯಾಗಿತ್ತೇ? ಅಥವಾ ಭಾರತದಲ್ಲಿ ಆತಂಕ ಸೃಷ್ಟಿಸಿ, ಪಾಕಿಸ್ತಾನಿಯರ ಗಮನವನ್ನು ಆಂತರಿಕ ಸಮಸ್ಯೆಗಳಿಂದ ಭಾರತದತ್ತ ತಿರುಗಿಸುವ ಪ್ರಯತ್ನವಾಗಿತ್ತೇ?
ಒಂದು ವೇಳೆ ಮುನೀರ್ ಭಾಷಣ ಪಾಕಿಸ್ತಾನದ ಉದ್ವಿಗ್ನ ಇತಿಹಾಸದಲ್ಲಿ ಮುಖ್ಯ ಘಟನೆಯಾಗುತ್ತದೆಯೇ ಅಥವಾ ಕೇವಲ ಇನ್ನೊಂದು ಅಧ್ಯಾಯವೇ ಎನ್ನುವುದನ್ನು ಕಾಲವೇ ಹೇಳಬೇಕಿದೆ.