ಭಟ್ಕಳ ಸಮುದ್ರ ತೀರಕ್ಕೆ ತೇಲಿ ಬಂದ ಕಂಟೈನರ್

ಭಟ್ಕಳ: ತಾಲೂಕಿನ ಜಾಲಿ ಕೋಡಿ ಸಮುದ್ರ ತೀರದಲ್ಲಿ ಕಂಟೈನರ್ ಒಂದು ತೇಲಿಕೊಂಡು ಬಂದು ಸಿಲುಕಿ ಹಾಕಿಕೊಂಡಿದೆ. ಕೊಚಿನ್ ಶಿಪ್‌ಯಾರ್ಡ್ ಕಂಪನಿಗೆ ಸೇರಿದ ಕಂಟೈನರ್ ಇದಾಗಿದ್ದು, ಕೇರಳ ಶಿಪ್‌ಯಾರ್ಡಿನಿಂದ ಮುಂಬೈಗೆ ಹೋಗುವ ಮಾರ್ಗದಲ್ಲಿ ಶಿಪ್‌ನಿಂದ ಬೇರ್ಪಟ್ಟು ತೀವ್ರ ಗಾಳಿಯಿರುವುದರಿಂದ ದಡಕ್ಕೆ ಬಂದು ಅಪ್ಪಳಿಸಿದೆ ಎನ್ನಲಾಗಿದೆ.
ಬೆಳಗಿನ ಜಾವ ೨ ಗಂಟೆಯ ಸುಮಾರಿಗೆ ಬೃಹತ್ ಗಾತ್ರದ ಈ ಕಂಟೈನರ್ ಸಮುದ್ರದಲ್ಲಿ ತೇಲಿಕೊಂಡು ಬಂದು ಜಾಲಿ ಕೋಡಿ ಸಮುದ್ರದ ದಡದಲ್ಲಿ ಸಿಲುಕಿ ಹಾಕಿಕೊಂಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಜಾಲಿ ಕೋಡಿಯ ತೀರದಲ್ಲಿರುವ ಬಂಡೆಗಲ್ಲಿನಿಂದ ಒಳಕ್ಕೆ ಬಂದ ಕಾರಣ ಇಲ್ಲಿಂದ ಮುಂದಕ್ಕೆ ತೇಲಿಕೊಂಡು ಬಂದು ದಡದಲ್ಲಿ ಸಿಲುಕಿಕೊಂಡಿದೆ ಎನ್ನಲಾಗಿದೆ. ಸಂಪೂರ್ಣ ಕಂಟೈನರ್ ಆ್ಯಂಕರ್ ಹಾಕಿ ನಿಲ್ಲಿಸಿದ ರೀತಿಯಲ್ಲಿ ನಿಂತು ಕೊಂಡಿದ್ದು ಎಲ್ಲಿಯೂ ಇದಕ್ಕೆ ಹಾನಿಯಾದಂತೆ ಕಂಡು ಬರುತ್ತಿಲ್ಲ.
ಮೀನುಗಾರರು ಹೇಳುವ ಪ್ರಕಾರ ಸಮುದ್ರದಲ್ಲಿ ಒಂದು ದೊಡ್ಡ ಹಡಗು ನಿಂತಿದ್ದು, ಈ ಹಡಗಿಗೆ ಸೇರಿದ ಕಂಟೈನರ್ ಇದು ಎನ್ನುವ ಸಂಶಯ ವ್ಯಕ್ತವಾಗಿದೆ.
ಕರಾವಳಿ ಕಾವಲು ಪಡೆಯ ಇನ್ಸ್ಪೆಕ್ಟರ್ ಕುಸುಮಾಧರ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಕೊಚಿನ್‌ಶಿಪ್ ಯಾರ್ಡ್ನ ಸಂಪರ್ಕ ಮಾಡಿದ್ದಾರೆ. ಕೊಚಿನ್ ಶಿಪ್‌ಯಾರ್ಡ್ನ ಮೂವರು ಸಿಬ್ಬಂದಿ ಮಧ್ಯಾಹ್ನ ಜಾಲಿ ಕೋಡಿ ಬೀಚಿಗೆ ಆಗಮಿಸಿ ದಡಕ್ಕೆ ಬಂದಿರುವ ಕಂಟೈನರ್ ತಮ್ಮ ಕಂಪೆನಿಗೆ ಸೇರಿದ್ದು ಎಂದು ದೃಢೀಕರಿಸಿದ್ದಾರೆ.
ಕರಾವಳಿಯ ತೀರಕ್ಕೆ ಬಂದಿರುವ ಕಂಟೈನರ್‌ನ್ನು ಮತ್ತೆ ಪುನಃ ಹೊರಕ್ಕೆ ಸಾಗಿಸುವುದು ತೀರಾ ಕಷ್ಟಕರ ಎನ್ನಲಾಗುತ್ತಿದ್ದು ಹಡಗು ಕಂಪೆನಿ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.