ಭಗವಂತನ ಮೌಲ್ಯಗಳ ಉಪಾಸನೆ ಇರಲಿ

Advertisement

ಸರ್ವವ್ಯಾಪ್ತನಾದ ಭಗವಂತನನ್ನು ಭಾರತದಲ್ಲಿ ಸಾಕಾರ ರೂಪದಿಂದಲೂ ಮತ್ತು ನಿರಾಕಾರ ರೂಪದಿಂದಲೂ ಆರಾಧಿಸುವದುಂಟು. ಆದರೆ ಕೆಲವರು ಪ್ರತಿಮಾತ್ಮಕವಾಗಿ ದೇವರನ್ನು ಪೂಜಿಸುವ ಪದ್ಧತಿ ಭಾರತದಲ್ಲಿ ಹೆಚ್ಚು ಪ್ರಚಲಿತದಲ್ಲಿದೆ.
ದೇವರು ಎಂದರೆ ಅನುಭೂತಿ. ಸರ್ವವ್ಯಾಪ್ತ. ಎಲ್ಲ ಶಬ್ದಗಳು ಅವನನ್ನೇ ಹೇಳುತ್ತವೆ. ಈ ಪ್ರಕೃತಿ ಪ್ರತಿ ವಸ್ತುಗಳಲ್ಲಿಯೂ ಭಗವಂತನನ್ನು ಕಾಣುವ ದೇಶ ನಮ್ಮದು. ಹೀಗಾಗಿ ಪ್ರತಿವಸ್ತುವಿನ ಒಳಗೂ ಮತ್ತು ಹೊರಗೂ ಭಗವಂತನಿದ್ದಾನೆ ಎಂಬುದನ್ನು ಪ್ರಹ್ಲಾದರಾಜರು ನರಸಿಂಹದೇವರನ್ನು ಕಂಬದಲ್ಲಿ ಪ್ರಕಟಿಸುವಂತೆ ಮಾಡಿ ತೋರಿದ್ದಾರೆ.
ಇನ್ನು ಕೆಲವರು ದೇವರೆಂದರೆ ತತ್ವ ಎಂದು ಹೇಳುವದುಂಟು. ಅದು ಅನುಭವ ನೀಡಿಕೆ. ತತ್ವ ಎಂದರೆ ಭಗವಂತನ ಹೆಸರು ಕೂಡ ಆಗಿದೆ.
ಸಕಲ ಶಾಸ್ತ್ರಗಳು ಮತ್ತು ವೇದಗಳು ದೇವರನ್ನೇ ಹೇಳಿವೆ. ಉತ್ತಮ ಬದುಕಿಗೆ ದೈವದಲ್ಲಿ ಭಕ್ತಿಯನ್ನಿರಿಸಿ ಜೀವನದಲ್ಲಿ ಮೌಲ್ಯ ಮತ್ತು ಸಂಸ್ಕಾರವನ್ನು ರೂಢಿಸಿಕೊಂಡು ಸವೋತ್ಕೃಷ್ಟವಾಗಿ ಬದುಕು ನಡೆಸುವದೇ ಅಯನವಾಗಿದೆ.
ಈ ರೀತಿ ಬದುಕು ನಡೆಸಿ ತೋರಿಸಿದ್ದು ಶ್ರೀ ರಾಮಚಂದ್ರದೇವರು. ಜೀವನದಲ್ಲಿ ಹೇಗೆ ಇರಬೇಕು ಎಂಬುದನ್ನು ತಾನೇ ಪುರುಷೋತ್ತಮನಾಗಿ ತೋರಿಸಿದ ಪ್ರಭು ಶ್ರೀರಾಮಚಂದ್ರದೇವರು ಇಂದು ಭಾರತ ದೇಶದ ಅಸ್ಮಿತೆ.
ಶ್ರೀರಾಮನೆಂದರೆ ಶಿಲಾ ವಿಗ್ರಹವಲ್ಲ. ಅದೊಂದು ಮೌಲ್ಯ, ಸಂಸ್ಕೃತಿ ಅಲ್ಲದೇ ಜೀವನ ವಿಧಾನವೂ ಆಗಿದೆ. ಆದರೆ ಪೌರಾಣಿಕ ನೆಲೆಯಲ್ಲಿ ಶ್ರೀರಾಮನನ್ನು ಒಬ್ಬ ಸರ್ವೋತ್ಕೃಷ್ಟ ಮನುಷ್ಯನನ್ನಾಗಿ ನೋಡಿದ್ದೇವೆ.
ಚೈತ್ರಮಾಸದ ಶುಕ್ಲಪಕ್ಷದ ನವಮಿಯ ದಿವಸ ಮಧ್ಯಾಹ್ನ ಕಾಲದಲ್ಲಿ ಅಷ್ಟ್ಟಮಿಯ ಸಂಪರ್ಕವಿಲ್ಲದ ತಿಥಿಯಲ್ಲಿ ಪುನರ್ವಸು ನಕ್ಷತ್ರವಿದ್ದಾಗ ಶ್ರೀರಾಮಚಂದ್ರನು ಅವತಾರ ಮಾಡಿದನು. ಶ್ರೀರಾಮನು ಅವತಾರ ಮಾಡಿದಾಗ ಚಂದ್ರ ಹಾಗೂ ಬೃಹಸ್ಪತಿಗ್ರಹಗಳು ಯತಿಯಲ್ಲಿದ್ದರು. ಪಂಚಗ್ರಹಗಳು ಉಚ್ಚದಲ್ಲಿದ್ದರು. ಪೂರ್ವದಲ್ಲಿ ಉದಯವಾಗುತ್ತಿದ್ದ ಲಗ್ನವು ಕರ್ಕಾಟಕದಲ್ಲಿತ್ತು. ಸೂರ್ಯನು ಮೇಷರಾಶಿಯಲ್ಲಿ ಉಚ್ಚನಾಗಿದ್ದನು. ಇಂಥ ಸುಮುಹೂರ್ತದಲ್ಲಿ ಶ್ರೀರಾಮಚಂದ್ರನು ಕೌಸಲ್ಯಯ ಗರ್ಭದಿಂದ ಅವತಾರ ಮಾಡಿದನು. ಪೂರ್ವ ಜನ್ಮದಲ್ಲಿ ಸುಕೃತಗಳು ಇದ್ದರೆ ಇಂಥ ಉತ್ತಮ ಪಂಚಾಂಗ ಶುದ್ಧಿಯ ದಿನದಲ್ಲಿ ಜನಿಸಿದ ಮನುಷ್ಯ ಉತ್ತಮ ಜೀವನ ನಡೆಸುತ್ತಾನೆ. ಏನೇ ಕಷ್ಟ ಕೋಟಲೆಗಳು ಬಂದರೂ ಕೂಡ ಸಂಯಮದಿಂದ ವರ್ತಿಸುತ್ತಾನೆ ಎಂದು ಹೇಳುವದುಂಟು ಇಂಥ ರಾಮನ ವ್ರತದ ರೂಪದಲ್ಲಿ ಆರಾಧನೆ ಮಾಡುವ ರೂಢಿ ಇದೆ. ಶ್ರೀರಾಮದೇವರ ಪ್ರತಿಮೆಯು ಇಲ್ಲದಿದ್ದರೆ ಕೇವಲ ಕಲಶದಲ್ಲಿ ಶ್ರೀರಾಮಚಂದ್ರ ದೇವರನ್ನು ಆವಾಹನೆ ಮಾಡಿ ಪೂಜಿಸಬೇಕು.
ಸಾಕಾರರೂಪಿಯಾಗಿ ಆತ್ಮಾನುಸಂಧಾನದ ಮೂಲಕ ಪೂಜಿಸುವ ರಾಮನನ್ನು ಕಲಶದಲ್ಲಿ ಪೂಜಿಸುವುದಾದರೆ ಹೀಗೆ ಮಾಡಬೇಕು. ಬೆಳ್ಳಿಯ ಎರಡು ದೊಡ್ಡ ಕಲಶಗಳನ್ನಿಡಬೇಕು. ಅವೆರಡರಲ್ಲಿ ಶ್ರೀರಾಮಚಂದ್ರದೇವರನ್ನು ಹಾಗೂ ಸೀತಾದೇವಿಯನ್ನು ಆವಾಹನೆ ಮಾಡಬೇಕು. ಸುತ್ತಲೂ ಲಕ್ಷ್ಮಣ, ಭರತ, ಶತ್ರುಘ್ನ, ಹಾಗೂ ಹನುಮಂತದೇವರಿಗೆ ಪ್ರತ್ಯೇಕವಾದ ಕಲಶಗಳನ್ನು ಇಡಬೇಕು. ಪ್ರತಿಯೊಂದು ಕಲಶಗಳನ್ನು ಗಂಧ, ಅಕ್ಷತೆ, ಪುಷ್ಪ, ತೆಂಗಿನಕಾಯಿ, ಸಕಲ ಔಷಧಿಗಳು, ಭಂಗಾರ, ರತ್ನ, ಬೆಳ್ಳಿ ಇವುಗಳಿಂದ ಅಲಂಕರಿಸಿರಬೇಕು. ಆ ಕಲಶಗಳಿಗೆ ಹಸಿದಾರವನ್ನು ಸುತ್ತಿರಬೇಕು. ಮತ್ತು ಅನಂತಪೂಜೆಯಲ್ಲಿ ಹೇಳಿದಂತೆ ಭೂಪ್ರಾರ್ಥನೆ ಕಲಶಪೂಜೆ ಮೊದಲಾದವುಗಳನ್ನು ವಿಧಿಪ್ರಕಾರವಾಗಿ ಮಾಡಬೇಕು. ಪ್ರಧಾನ ಕಲಶದ ಮೇಲೆ ರಾಮಯಂತ್ರವನ್ನು ಮತ್ತು ಸೀತಾರಾಮಪ್ರತಿಮೆಗಳನ್ನು ಇಡಬೇಕು. ಪ್ರಾಣಪ್ರತಿಷ್ಠೆ ಮೊದಲಾದವುಗಳನ್ನು ಆಚರಿಸಿ, ಷೋಡಶೋಪಚಾರ ಪೂಜೆಗಳಿಂದ ಪೂಜಿಸಬೇಕು. ಇದರೊಂದಿಗೆ ಮನೋಸಂಯಮ ಮತ್ತು ಅನುಸಂಧಾನ ಅತಿ ಅವಶ್ಯಕ.