ಭಕ್ತರ ದಂಡು, ಕುರಿಗಳ ಹಿಂಡು!

Advertisement

ಹಳೆಯ ಕವನ ಪುಸ್ತಕವನ್ನು ಓದುತ್ತಾ ಕುಳಿತಿದ್ದಾಗ ನಿಸಾರ್ ಅಹಮದ್ ಅವರ ಪದ್ಯ ಗಮನ ಸೆಳೆಯಿತು.
`ಕುರಿಗಳು ಸಾರ್, ನಾವು ಕುರಿಗಳು
ಶಾನುಭೋಗ ಗೀಚಿದ್ದಕ್ಕೆ ಹೆಬ್ಬೆಟ್ಟನ್ನು ಒತ್ತುವವರು
ಕಿಸೆಗೆ ಹಸಿರ ನೋಟ ತುರುಕಿ ನುಡಿಗೆ ಬೆಣ್ಣೆ ಹಚ್ಚುವವರು
ಕುರಿಗಳು ಸಾರ್, ನಾವು ಕುರಿಗಳು!’
ಎಲೆಕ್ಷನ್ ಟೈಮಲ್ಲಿ ಇದರ ಅರ್ಥ ಅಪಾರ. ಒಂದು ಕುರಿ ಮುಂದೆ ಹೋದ್ರೆ ಹಿಂಬಾಲಿಸಿ ಎಲ್ಲಾ ಕುರಿಗಳೂ ಹೋಗುತ್ತೆ.
೨೦೦೫ರಲ್ಲಿ ಟರ್ಕಿಯಲ್ಲಿ ನಡೆದ ಸತ್ಯ ಘಟನೆ: ೪೫೦ ಕುರಿಗಳು ಒಮ್ಮೆಗೇ ಆತ್ಮಹತ್ಯೆ ಮಾಡಿಕೊಂಡವಂತೆ! ವಿವರಗಳನ್ನು ನೆಟ್‌ನಲ್ಲಿ ಸಹ ನೋಡಬಹುದು. ಮುಂದೆ ಇರುವ ಲೀಡರ್ ಕುರಿ ದಾರಿಯನ್ನು ತೋರಿಸುತ್ತಾ ಬೆಟ್ಟದ ಮೇಲೆ ಹೋಗುತ್ತಿತ್ತು. ಪೈಲೆಟ್ ಕುರಿ ಎಲ್ಲಿ ಹೋಗುತ್ತೋ ಉಳಿದವೂ ಹಿಂಬಾಲಿಸುತ್ತೆ. ಬೆಟ್ಟದ ತುದಿಯಲ್ಲಿದ್ದ ಕುರಿ ಮುಂದಕ್ಕೆ ಹೋಗಲು ಜಾಗ ಇಲ್ಲದೆ ಧುಮುಕಿ ಕೆಳಗಡೆ ಬಿತ್ತು. ಒಂದರಿಂದ ಒಂದು ಹೋದ ಎಲ್ಲಾ ಕುರಿಗಳೂ ಅದೇ ರೀತಿ ಬೆಟ್ಟದಿಂದ ಜಿಗಿದು ಪ್ರಾಣ ಬಿಟ್ಟವು. ಹೀಗೂ ಉಂಟೆ ಎಂದು ಯೋಚಿಸುತ್ತಿದ್ದೆ. ವಿಶ್ವ ನನ್ನನ್ನೇ ಗಮನಿಸುತ್ತಿದ್ದ.
“ಬೆಂಗಳೂರು ಕರಗ ಹ್ಯಾಗಿತ್ತು ?” ಎಂದ.
“ಬೆಂಗಳೂರು ಕರಗ ಸೂಪರ್! ಭಕ್ತಿ, ಶ್ರದ್ಧೆಯಿಂದ ನಡೆಸೋ ದ್ರೌಪದಿ ಕರಗ. ವಿಪರೀತ ಜನ ಸರ‍್ತಾರೆ. ಎಲ್ಲೆಲ್ಲೂ ಗೋವಿಂದಾ ಗೋವಿಂದಾ ನಾಮಸ್ಮರಣೆ. ಕಂಪು ಬೀರುವ ಮಲ್ಲಿಗೆಯ ಸುವಾಸನೆ” ಎಂದು ನಾನು ಮೆಚ್ಚುಗೆಯನ್ನು ಸೂಚಿಸಿದೆ.
“ಕರಗ ಅಂದ್ರೆ ಶಕ್ತಿ ದೇವತೆ. ಆಕೆ ಎಲ್ಲೆಲ್ಲಿ ಓಡಾಡ್ತಾಳೋ ಅಲ್ಲೆಲ್ಲಾ ಸಾಂಕ್ರಾಮಿಕ ರೋಗ ಬರೊಲ್ಲ ಅನ್ನೋ ನಂಬಿಕೆ ಇದೆ” ಎಂದು ವಿಶಾಲು ಸೇರಿಸಿದಳು.
ಕರಗದ ಹಿಂದೆ ಹಿಂಡು ಹಿಂಡು ಭಕ್ತರ ದಂಡು. ಕರಗ ಎಲ್ಲೇ ಹೋದರೂ ಅದನ್ನು ಹಿಂಬಾಲಿಸ್ತಾರೆ. ಎಂಥ ಭಕ್ತಿ ಎಂದು ಖುಷಿ ಪಟ್ಟಿದ್ದೆ. ಇದಕ್ಕೆ ಪುಷ್ಟಿ ಕೊಡುವಂತೆ ವಿಶ್ವ ಪ್ರಶ್ನೆ ಕೇಳಿದ.
“ಭಕ್ತರು ಕರಗಾನ ಹಿಂಬಾಲಿಸೋ ರೀತಿ ಶಿಷ್ಯರು ಮಂತ್ರೀನ ಹಿಂಬಾಲಿಸ್ತಾರೆ” ಎಂದ. ವಿಶ್ವನಿಂದ ರಾಜಕೀಯ ಉತ್ತರ ಪಡೆಯಲು “ಹೇಗೆ ?” ಎಂದೆ.
“ಮಂತ್ರಿ ಎಲ್ಹೋದ್ರೂ ಸಾವಿರಾರು ಜನ ಅವರ ಹಿಂದೆ ಹೋಗ್ತಾರೆ. ಹತ್ತಾರು ಕಾರುಗಳು ಹೋಗುತ್ತೆ. ಯಾಕೆ ಹೋಗುತ್ತೆ, ಎಲ್ಹೋಗುತ್ತೆ ಗೊತ್ತಾಗೋದೇ ಇಲ್ಲ” ಎಂದ.
“ಅಲ್ಲೇನೋ ಕ್ಯಾಚ್ ಇರುತ್ತೆ ವಿಶ್ವ. ಲಾಭ ಇಲ್ದೆ ಯಾರೂ ಹೋಗೊಲ್ಲ” ಎಂದೆ.
ವಿಶ್ವ ಒಪ್ಪಿಕೊಂಡ.
“ನಿಜ, ಪಾರ್ಟಿ ವರ್ಕರ್ಸ್‌ಗೆ ಸಮಯಕ್ಕೆ ಸರಿಯಾಗಿ ಚಿತ್ರಾನ್ನ ಕೊಡ್ಬೇಕು, ನೀರಿನ ಬಾಟೆಲ್ ಕೊಡ್ಬೇಕು, ದಿನದ ಪೇಮೆಂಟ್ ಕೊಡ್ಬೇಕು, ಆಗ್ಲೇ ಜೈಕಾರದ ಸೌಂಡ್ ಆಚೆಗೆ ಬರೋದು” ಎಂದ. ಅನಂತರ ನನ್ನನ್ನೇ ಪ್ರಶ್ನಿಸಿದ.
“ಹಾಗಿದ್ರೆ ರಾಜಕೀಯ ಸಭೆಗಳಲ್ಲಿ ಸಾವಿರಾರು ಜನ ರ‍್ತಾರಲ್ಲ ಅವರೆಲ್ಲಾ ಪಾರ್ಟಿ ವರ್ಕರ‍್ಸ್ ಅಲ್ವಾ?” ಎಂದ.
“ಖಂಡಿತವಾಗ್ಲೂ ಅಲ್ಲ, ಅವರು ಪಾರ್ಟಿ ವರ್ಕರ‍್ಸೇ ಆಗಿದ್ರೆ ತಾವಾಗಿಯೇ ಬಂದಿರೋವ್ರು. ಲಾರಿಗಳಲ್ಲಿ ಹೇರಿಕೊಂಡು ರ‍್ತಿರಲಿಲ್ಲ. ಪಾರ್ಟಿ ಲೀರ‍್ಸ್ ಹೋಗಿ ಬಲವಂತಕ್ಕೆ ಜನರನ್ನು ರ‍್ಕೊಂಡು ರ‍್ತಾರೆ. ಕಾರ್ಯಕ್ರಮ ಮುಗೀತಿರೋ ಹಾಗೇ ಅವರಿಗೆ ಕೂಲಿ ಬಟವಾಡೆ ಮಾಡ್ತಾರೆ” ಎಂದೆ.
“ಹಾಗಿದ್ರೆ ಬೇರೆ ಬೇರೆ ಪಾರ್ಟಿಗಳ ಸಭೆಗಳಿಗೆ ಜನ ಯಾವ ಲಾಭಕ್ಕೆ ಬರ‍್ತಾರೆ?” ಎಂದು ವಿಶ್ವ ಕೇಳಿದ.
“ಹತ್ತು ರೂಪಾಯಿಗೆ ಒಮ್ಮೆ ಚಪ್ಪಾಳೆ. ೧೫ ರೂಪಾಯಿಗೆ ಒಮ್ಮೆ ಜೈಕಾರ” ಎಂದೆ.
“ನಂಬಿಕೆ ಬರ‍್ತಿಲ್ಲ” ಎಂದ ವಿಶ್ವ.
“ನೋಡು ವಿಶ್ವ, ಸಿನಿಮಾದಲ್ಲಿ ಡ್ಯಾನ್ ಸೀಕ್ವೆನ್ಸ್ ಬರುತ್ತೆ. ಅಲ್ಲಿ ನಾಯಕ-ನಾಯಕಿ ಮಾತ್ರ ಕುಣೀತಾ ರ‍್ತಾರೆ. ಅವರು ಕುಣಿಯೋಕೆ ಶುರು ಮಾಡಿದ ತಕ್ಷಣಾನೇ ಹಿಂದುಗಡೆಯಿಂದ ಐವತ್ತು ಜನ ಬರ‍್ತಾರೆ. ಅವರೂ ಸೇರಿ ಕುಣೀತಾರೆ, ಕಡೇಲಿ ಮಾಯ ಆಗ್ತಾರೆ. ಅವರೆಲ್ಲ ಪೈಡ್ ಆರ್ಟಿಸ್ಟ್ಗಳು. ಅವರಿಗೂ, ಕತೆಗೂ ಸಂಬಂಧ ಇರೊಲ್ಲ. ರಾಜಕೀಯದಲ್ಲೂ ಹಾಗೇ” ಎಂದು ವಿವರಿಸಿದೆ.
“ಪೈಡ್ ಆರ್ಟಿಸ್ಟ್ಗಳು ಮುಂದೆ ಎಲ್ಲಿಗೆ ಹೋಗ್ತಾರೆ ?”
“ಯಾರು ಕಾಲ್‌ಶೀಟ್ ಕೇಳ್ತಾರೋ ಅಲ್ಲಿಗೆ ಹೋಗ್ತಾರೆ. ಪೇಮೆಂಟ್ ಕೊಟ್ರೆ ಕುಣೀತಾರೆ. ಇದು ಎಲ್ಲಾ ಸಭೆಗಳಲ್ಲಿ ನಾನು ಕಂಡಿರೋದು. ನೀನು ಸಭೇಲಿ ಇರೋ ಜನಗಳ್ನ ಅಬ್ರ‍್ವ್ ಮಾಡು. ಒಂದೇ ಟೈಪು ಮುಖಗಳು ಅನೇಕ ಪಾರ್ಟಿ ಸಭೇಲಿ ಇರುತ್ತೆ” ಎಂದೆ.
“ಹಾಗಿದ್ರೆ ಬರೋ ವ್ಯಕ್ತಿಗಳಿಗೆ ಸಿದ್ಧಾಂತ ಅಂಬೋದಿರೊಲ್ವ ?”
“ಸಿದ್ಧಾಂತ ಅಂಬೋದು ರಾಜಕೀಯ ನಾಯಕರಿಗೇ ಇರೊಲ್ಲ, ಇನ್ನು ಪಾರ್ಟಿಗೆ ಬರೋ ಸಭಿಕರಲ್ಲಿ ಇರುತ್ತಾ? ಪಾರ್ಟಿಯಿಂದ ಪಾರ್ಟಿಗೆ ಕಪ್ಪೆಯಂತೆ ಜಿಗಿಯೋದು ನೋಡ್ಲಿಲ್ವಾ?”
“ಇದರ ಅರ್ಥ ಏನು?” ಅಂದ.
“ಮನುಷ್ಯ ಮಂಗನಿಂದಾದವನು. ಕೊಂಬೆಯಿಂದ ಕೊಂಬೆಗೆ ಜಿಗಿದು ಅಭ್ಯಾಸ. ಸಾವಿರಾರು ವರ್ಷಗಳ ಹಿಂದೆ ನದೀ ತೀರ ಹುಡುಕ್ಕೊಂಡು ಬಂದು ಅಲ್ಲಿ ಸಂಸಾರ ಮಾಡ್ದ. ತನಗೆ ಹಣ್ಣುಗಳನ್ನು ಕೊಡೋಂಥ ಮರಗಳನ್ನು ಬೆಳೆಸಿದ. ತನಗೆ ಬೇಕಾದ ಆಹಾರ ಅಕ್ಕಿ, ರಾಗಿ ತಾನೇ ಬೆಳ್ಕೊಂಡ. ಆದ್ರೆ ಅವನು ಮಾಡಿದ ದೊಡ್ಡ ತಪ್ಪು ಅಂದ್ರೆ ಲೀಡರ್ ಆಗಿ ನಮ್ಮನ್ನ ಕಾಯಪ್ಪ ಅಂತ ದುಡ್ ತಿನ್ನೋವನಿಗೆ ಓಟ್ ಕೊಟ್ಟು ಮುಂದಾಳು ಮಾಡಿದ್ದು”
“ಎಲ್ರೂ ದುಡ್ ತಿಂತಾರಾ?” ಎಂದು ವಿಶ್ವ ಕೇಳಿದಾಗ ನನಗೆ ನಗು ಬಂತು.
“ಇವತ್ತು ಕೋಟಿಗಳಲ್ಲಿ ಖರ್ಚು ಮಾಡ್ಲಿಲ್ಲ ಅಂದ್ರೆ ಎಲೆಕ್ಷನ್‌ನಲ್ಲಿ ಗೆಲ್ಲೋಕೆ ಸಾಧ್ಯ ಇಲ್ಲ. ಆ ಹಣ ಜನರ ಹಣ” ವಿಶ್ವನಿಗೆ ತಲೆ ಬಿಸಿಯಾಯಿತು.
“ಬಹಳ ಚೆನ್ನಾಗಿದೆ ಇದು, ರಾಜಕೀಯ ಸಖತ್ ಲಾಭದಾಯಕ ಬ್ಯುಸಿನೆಸ್ಸು. ನನಗೆ ಅವಕಾಶ ಸಿಕ್ರೆ ನಾನೂ ಸರ‍್ಕೋತೀನಿ” ಅಂದ.
“ಸೇರೋಕೆ ಸಿಂಪಲ್ಲಾದ ಮೆಥಡ್ ಇದೆ. ಗಾಡ್‌ಫಾದರ್‌ನ ಹಿಡಿ. ಕೇಂದ್ರ ಆದ್ರೆ ರಾಜ್ಯಸಭಾ ಸದಸ್ಯ ಆಗೋದು. ರಾಜ್ಯ ಆದ್ರೆ ಎಂ.ಎಲ್.ಸಿ. ಆಗೋದು. ಚುನಾವಣೆಗೆ ನಿಲ್ಲೋಷ್ಟಿಲ್ಲ. ಯಾರನ್ನಾದ್ರೂ ಹಿಡಿದು ನೀನು ರಾಜಕೀಯಕ್ಕೆ ಎಂಟ್ರಿ ತಗೊಂಡ್ರೆ ಅಲ್ಲಿಂದಾಚೆ ಬೇಡ ಅಂದ್ರೂ ನಿನ್ಗೆ ಗೌರವ ಬರುತ್ತೆ, ಹಣಾನೂ ಬರುತ್ತೆ” ಎಂದೆ.
ವಿಶ್ವನ ಬಾಯಲ್ಲಿ ನೀರೂರಿತು.
“ಆಮೇಲೆ ನಾನು ರಾಜಕೀಯದಲ್ಲಿ ಇರಬಹುದಾ?” ಎಂದ.
“ಒಮ್ಮೆ ಎಂ.ಎಲ್.ಎ. ಆದವನಿಗೆ ಆ ಜಾಗ ಬಿಟ್ಕೊಡೋಕೆ ಇಷ್ಟ ಇರೊಲ್ಲ. ಆತ ಸಾಯೋವರೆಗೂ ಎಂ.ಎಲ್.ಎ. ಆಗರ‍್ತಾನೆ. ಆಸ್ಪತ್ರೇಲಿದ್ರೂ ಎಂ.ಎಲ್.ಎ., ಜೈಲಲ್ಲಿದ್ರೂ ಎಂ.ಎಲ್.ಎ.”
“ಆದ್ರೆ ನನ್ನ ಮನಸ್ಸಿನ ವಿರುದ್ಧ ನಾನು ನಡೀಬೇಕಾಗುತ್ತಲ್ಲ” ಎಂದ.
“ಮನಸ್ಸನ್ನ ನೆಚ್ಕೊಂಡವನು ರಾಜಕಾರಣಿ ಆಗೊಲ್ಲ, ಕೇಜ್ರೀವಾಲು ಭ್ರಷ್ಟಾಚಾರದ ವಿರುದ್ಧ ಹೋರಾಡ್ತಿದ್ರು. ಅಣ್ಣಾ ಹಜಾರೆ ಶಿಷ್ಯ ಆಗಿದ್ರು. ಭ್ರಷ್ಟಾಚಾರ ನಿರ್ಮೂಲನೆ ಮಾಡ್ತೀನಿ ಅಂತ ಬಂದ್ರು. ಇವತ್ತು ನಂಬರ್ ವನ್ ಭ್ರಷ್ಟಾಚಾರಿಯಾಗಿದ್ದಾರೆ” ಎಂದೆ.
ವಿಶಾಲುಗೆ ಗಾಬರಿಯಾಯಿತು.
“ರೀ, ಮರ್ಯಾದೆಯಿಂದ ಮನೇಲಿರಿ. ನೀವು ಏನಾದ್ರೂ ರಾಜಕಾರಣಕ್ಕೆ ಹೋದ್ರೆ……” ಎಂದು ಹೆದರಿಸಿದಳು.
“ಏನ್ಮಾಡ್ತೀಯ?” ಎಂದ.
“ಡೈವೊರ್ಸ್ ಕೊಡ್ತೀನಿ”
“ಹಾಂ !” ಎಂದು ವಿಶ್ವ ಕುಸಿದು ಬಿದ್ದ.