`ಬೊಗಸೆ ನೀರು’ ಮಾರ್ಗದರ್ಶಿ ಕೃತಿ: ಹೊರಟ್ಟಿ

ಹುಬ್ಬಳ್ಳಿ: ಪುಸ್ತಕವನ್ನು ಸಾಕಷ್ಟು ಜನ ಬರೆಯುತ್ತಾರೆ. ಆದರೆ, ಇಂದು ಪುಸ್ತಕ ಓದುವವರೇ ಕಡಿಮೆಯಾಗಿದ್ದಾರೆ. ಪತ್ರಕರ್ತನಾಗಿ ಪುಸ್ತಕ ಬರೆಯುವುದು ದೊಡ್ಡ ಸಾಹಸವೇ ಆಗಿದೆ. ಹಿರಿಯ ಪತ್ರಕರ್ತ ಅರುಣಕುಮಾರ ಹಬ್ಬು ಅವರು ನಾಡಿಗೆ ಉತ್ತಮ ಪುಸ್ತಕ ಕೊಟ್ಟಿದ್ದಾರೆ. ಹಬ್ಬು ಪುಸ್ತಕದಲ್ಲಿ ಮಕ್ಕಳಿಗೆ, ಸಮಾಜಕ್ಕೆ ಮಾರ್ಗದರ್ಶನವಿದೆ. ಯುವ ಸಮುದಾಯ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ರವಿವಾರ ನಗರದ ಹವ್ಯಕ ಭವನದಲ್ಲಿ ಡಾ.ಸಂಗಮೇಶ ಹಂಡಿಗಿ ಸಾಹಿತ್ಯ ಪ್ರತಿಷ್ಠಾನ, ಸಂಯುತಾ ಪ್ರತಿಷ್ಠಾನ, ಕನ್ನಡ ಧ್ವನಿ ಟ್ರಸ್ಟ್, ಹು-ಧಾ ಹವ್ಯಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಹಿರಿಯ ಪತ್ರಕರ್ತ ಅರುಣಕುಮಾರ ಹಬ್ಬು ಅವರ ಬದುಕಿನ ಅಂತರಂಗದ ಅನಾವರಣ “ಬೊಗಸೆ ನೀರು” ಕೃತಿ ಬಿಡುಗಡೆ ಕಾರ್ಯಕ್ರಮಕ್ಕೆ ಸಸಿಗೆ ಬೊಗಸೆ ನೀರು ಹಾಕುವ ಮೂಲಕ ಚಾಲನೆ ನೀಡಿ, ಕೃತಿ ಬಿಡುಗಡೆ ಮಾಡಿ ಮಾತನಾಡಿದರು.
ಹಬ್ಬು ಶ್ರೇಷ್ಠ ಬರಹಗಾರರೂ ಆಗಿದ್ದು ತಮ್ಮ ತಲೆಮಾರು, ಹುಟ್ಟೂರು ಸ್ಮರಿಸಿಕೊಂಡು ಬದುಕಿನ ಸವಾಲುಗಳ ಕುರಿತು ಪುಸ್ತಕದಲ್ಲಿ ವಿವರಿಸಿದ್ದಾರೆ. ಈಗಿನ ದಿನಕ್ಕೆ ಇಂಥ ಪುಸ್ತಕಗಳು ಮಾರ್ಗದರ್ಶನವಾಗಬಲ್ಲದು ಎಂದರು.
ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ‘ಪುಸ್ತಕದಲ್ಲಿರುವ ಅನುಭವ ಬೊಗಸೆಯಲ್ಲಿ ಹಿಡಿ ನೀರು ಹಿಡಿದಿಟ್ಟುಕೊಂಡಿದೆ. ಎಲ್ಲವೂ ಇದೆ, ಎಲ್ಲವೂ ಇಲ್ಲ ಎನ್ನುವುದೇ ಬೊಗಸೆ ನೀರು. ಪತ್ರಕರ್ತ ಒಬ್ಬ ನ್ಯಾಯಾಧೀಶ ಇದ್ದಂತೆ. ಸ್ಥಿತಪ್ರಜ್ಞ, ಆ ಪ್ರಜ್ಞೆಯಲ್ಲಿ ಕೆಲಸ ಮಾಡುವವನು ಮಾತ್ರ ನಿಜಪತ್ರಕರ್ತ ಎಂದರು.
ಹಿರಿಯ ಪತ್ರಕರ್ತೆ ಆರ್. ಪೂರ್ಣಿಮಾ ಮಾತನಾಡಿ, ಹಬ್ಬು ಅವರು ‘ಬದುಕು ಅವರಿಗೆ ಹೇಗೆ ಪಾಠ ಕಲಿಸಿದೆ ಎನ್ನುವುದನ್ನು ಪುಸ್ತಕದಲ್ಲಿ ತಿಳಿಸಿದ್ದಾರೆ. ಬರೀ ಜೀವನದ ಕತೆಯಲ್ಲ, ಬದುಕಿನ ಕಥೆ, ಸವಾಲುಗಳು ಇದರಲ್ಲಿ ಕಾಣಬಹುದು. ವೃತ್ತಿ ಬದುಕು ಸಹ ಅವರನ್ನು ಹೇಗೆ ಪರಿಪಕ್ವವನ್ನಾಗಿಸಿತ್ತು, ಸವಾಲನ್ನು ಹೇಗೆ ಎದುರಿಸಿದ್ದೆ ಎನ್ನುವುದನ್ನು ದಾಖಲಿಸಿದ್ದಾರೆ ಎಂದರು.
ಕೃತಿಕಾರ ಪತ್ರಕರ್ತ ಅರುಣಕುಮಾರ ಹಬ್ಬು ಮಾತನಾಡಿ, ಈ ಕೃತಿ ಯುವ ಪತ್ರಕರ್ತರಿಗೆ ಮಾರ್ಗದರ್ಶನವಾಗಬಲ್ಲದು ಎಂಬ ಆಶಯ ವ್ಯಕ್ತಪಡಿಸಿದರು.
ಹವ್ಯಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷ ವಿ.ಎಂ. ಭಟ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಅರುಣಕುಮಾರ ಹಬ್ಬು ದಂಪತಿ, ಸಹೋದರರನ್ನು ಸನ್ಮಾನಿಸಲಾಯಿತು. ಡಾ.ಸಂಗಮೇಶ ಹಂಡಿಗಿ ಸಾಹಿತ್ಯ ಪ್ರತಿಷ್ಠಾನದ ಅಧ್ಯಕ್ಷ ವೀರೇಶ ಹಂಡಗಿ ನಿರೂಪಿಸಿದರು. ಸುಶೀಲೇಂದ್ರ ಕುಂದರಗಿ ಸ್ವಾಗತಿಸಿದರು.
ಕೃತಿ ಕುರಿತು ಪತ್ರಕರ್ತ ಗಣಪತಿ ಗಂಗೊಳ್ಳಿ ಮಾತನಾಡಿದರು.