ಬೆಳ್ಳಂಬೆಳಗ್ಗೆ ರೌಡಿಶೀಟರ್‌ಗಳಿಗೆ ನಡುಕು ಹುಟ್ಟಿಸಿದ ಪೊಲೀಸರು

೫೨ ರೌಡಿಶೀಟರ್ ಮನೆಗಳ ಮೇಲೆ ದಾಳಿ: ಕೃತ್ಯಗಳಿಗೆ ಬಳಸುವ ವಸ್ತುಗಳ ಶೋಧನೆ : ಪರಿಶೀಲನೆ ಸಂದರ್ಭದಲ್ಲಿ ಯಾವುದೇ ವಸ್ತುಗಳು ಸಿಕ್ಕಿಲ್ಲ

ದಾವಣಗೆರೆ: ರೌಡಿಶೀಟರ್ ಸಂತೋಷ್‌ಕುಮಾರ್ ಆಲಿಯಾಸ್ ಕಣುಮ ಹತ್ಯೆ ಬಳಿಕ ಪೊಲೀಸರು ರೌಡಿಶೀಟರ್‌ಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದು, ಬೆಳ್ಳಂಬೆಳಗ್ಗೆ ರೌಡಿಶೀಟರ್‌ಗಳ ಮನೆಗಳ ಮೇಲೆ ದಾಳಿ ಮಾಡಿ ಶಾಕ್ ಮುಟ್ಟಿಸಿದ್ದಾರೆ.
ರೌಡಿಶೀಟರ್‌ಗಳ ಮನೆಗೆ ದಿಢೀರ್ ಭೇಟಿ ನೀಡಿದ ಪೊಲೀಸರು, ರೌಡಿಗಳ ಚಲನವಲನ, ಮನೆಯನ್ನು ಶೋಧಿಸಿದರು. ರೌಡಿಶೀಟರ್‌ಗಳು ಪೊಲೀಸರು ಮನೆಗೆ ಬರುತ್ತಿದ್ದಂತೆ ಬೆಚ್ಚಿ ಬಿದ್ದಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ನಿರ್ದೇಶನದಂತೆ ಹೆಚ್ಚುವರಿ ಎಸ್ಪಿ ವಿಜಯ್‌ಕುಮಾರ್ ಎಂ.ಸಂತೋಷ್, ಜಿ.ಮಂಜುನಾಥ್ ಮಾರ್ಗದರ್ಶನದಲ್ಲಿ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಸ್ಯಾಮ್ ವರ್ಗೀಸ್ ಹಾಗೂ ನಗರ ಡಿವೈಎಸ್ಪಿ ಬಿ. ಶರಣ ಬಸವೇಶ್ವರ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳ ತಂಡಗಳು ದಾಳಿ ನಡೆಸಿ, ಅಹಿತಕರ ಘಟನೆಗಳಲ್ಲಿ ತೊಡಗಿಕೊಂಡರೆ ಕಠಿಣ ಕ್ರಮ ತೆಗೆದುಕಲೊಳ್ಳುದಾಗಿ ರೌಡಿಶೀಟರ್‌ಗಳಿಗೆ ಎಚ್ಚರಿಕೆ ನೀಡಿದರು.

ನಗರದಲ್ಲಿ ಇತ್ತೀಚಿಗೆ ನಡೆದ ಕೊಲೆ ಪ್ರಕರಣ, ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಅಪರಾಧಗಳನ್ನು ತಡೆಯುವ ಉದ್ದೇಶದಿಂದ ಗುರುವಾರ ಬೆಳ್ಳಂಬೆಳಗ್ಗೆ ರೌಡಿಶೀಟರ್‌ಗಳ ಮನೆಗಳಿಗೆ ದಿಢೀರ್ ದಾಳಿ ಮಾಡಿ ಪರಿಶೀಲನೆ ನಡೆಸಲಾಗಿದೆ. ಒಟ್ಟು ೫೨ ರೌಡಿಶೀಟರ್‌ಗಳ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂದರ್ಭದಲ್ಲಿ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಿಗೆ ಬಳಸುವ ವಸ್ತುಗಳು ಕಂಡು ಬಂದಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.