ಬೆಂಗಳೂರು ಜಾಗತಿಕ ಬ್ರಾಂಡ್‌: ನಮ್ಮ ನೀತಿಗಳನ್ನು ಮತ್ತಷ್ಟು ಆಕರ್ಷಕವಾಗಿಸುತ್ತೇವೆ

ಬೆಂಗಳೂರು: ಸಣ್ಣ ಕೈಗಾರಿಕೆಗಳು ನಮ್ಮ ಆರ್ಥಿಕತೆಯ ಬೆನ್ನೆಲುಬು. ನನಗೆ ಅವುಗಳ ಶಕ್ತಿ ಮತ್ತು ಸವಾಲುಗಳ ಬಗ್ಗೆ ಸಂಪೂರ್ಣ ಅರಿವಿದೆ. ಯಾವುದೇ ಕ್ಷೇತ್ರದಲ್ಲಿ ಸ್ಪರ್ಧೆ ಇದ್ದಾಗ ಮಾತ್ರ ಗುಣಮಟ್ಟ ಹೆಚ್ಚಾಗುತ್ತದೆ. ಹಾಗಾಗಿ, ನಮ್ಮ ಕೈಗಾರಿಕೆಗಳಿಗೆ, ವಿಶೇಷವಾಗಿ ಸಣ್ಣ ಕೈಗಾರಿಕೆಗಳಿಗೆ, ಇನ್ನಷ್ಟು ಹೊಸ ಶಕ್ತಿ ತುಂಬಲು ನಾವು ಸಿದ್ಧರಿದ್ದೇವೆ. ನಮ್ಮ ನೀತಿಗಳನ್ನು ಮತ್ತಷ್ಟು ಆಕರ್ಷಕವಾಗಿಸುತ್ತೇವೆ. ಹೂಡಿಕೆಗೆ, ಬೆಳವಣಿಗೆಗೆ ಪೂರಕವಾದ ವಾತಾವರಣವನ್ನು ಸೃಷ್ಟಿಸುವ ಮೂಲಕ, ಉದ್ಯಮಗಳು ಇನ್ನಷ್ಟು ಪ್ರವರ್ಧಮಾನಕ್ಕೆ ಬರಲು ಬೇಕಾದ ಎಲ್ಲ ಬೆಂಬಲವನ್ನು ನೀಡುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ಹೇಳಿದ್ದಾರೆ.
ಕಾಸಿಯಾ ಶ್ರೇಷ್ಠತಾ ಮತ್ತು ನಾವೀನ್ಯತಾ ಕೇಂದ್ರ ಹಾಗೂ ವಸ್ತು ಪ್ರದರ್ಶನ ಕೇಂದ್ರದ ಕಟ್ಟಡಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ ಬೆಂಗಳೂರಿನ ಹೆಮ್ಮೆ ನಮ್ಮಲ್ಲಿರುವ ಅಪ್ರತಿಮ ಪ್ರತಿಭೆಗಳು. ವಿಶ್ವದ ಉನ್ನತ ಹುದ್ದೆಗಳಲ್ಲಿರುವ ಅನೇಕರು ಬೆಂಗಳೂರಿನಲ್ಲೇ ವಿದ್ಯಾಭ್ಯಾಸ ಮಾಡಿದವರು, ಇಲ್ಲೇ ತಮ್ಮ ವೃತ್ತಿಜೀವನ ರೂಪಿಸಿಕೊಂಡವರು. ಇದು ನಮ್ಮ ಶಿಕ್ಷಣ ವ್ಯವಸ್ಥೆ ಮತ್ತು ಪ್ರತಿಭಾ ಪೋಷಣೆಯ ಸಾಮರ್ಥ್ಯಕ್ಕೆ ಸಾಕ್ಷಿ. ಜಾಗತಿಕ ಮಟ್ಟದಲ್ಲಿ ಆಗುತ್ತಿರುವ ತಂತ್ರಜ್ಞಾನದ ಪ್ರಗತಿಯನ್ನು ನಮ್ಮ ರಾಜ್ಯದಲ್ಲಿ ಅಳವಡಿಸಿಕೊಳ್ಳುತ್ತಿದ್ದೇವೆ. ಈ ತಂತ್ರಜ್ಞಾನ ಮತ್ತು ಪ್ರತಿಭೆಗಳ ಸಮ್ಮಿಲನದಿಂದ, ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗಗಳನ್ನು ಸೃಷ್ಟಿಸುವುದು ನಮ್ಮ ಪ್ರಮುಖ ಗುರಿಯಾಗಿದೆ.

ನಮ್ಮ ಸರ್ಕಾರ ಯಾವಾಗಲೂ ನಿಮ್ಮ ಜೊತೆ ಇರುತ್ತದೆ. ಉದ್ಯಮಗಳ ಬೆಳವಣಿಗೆಗೆ, ಉದ್ಯೋಗ ಸೃಷ್ಟಿಗೆ ಪೂರಕವಾದ ಎಲ್ಲ ರೀತಿಯ ಸಹಕಾರ ಮತ್ತು ನೆರವನ್ನು ನೀಡಲು ನಾವು ಸಿದ್ಧ. ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಸಣ್ಣ ಕೈಗಾರಿಕೆಗಳ ಸಮಸ್ಯೆಗಳನ್ನು ಕಾಲಕಾಲಕ್ಕೆ ಸರ್ಕಾರದ ಗಮನಕ್ಕೆ ತರುವಲ್ಲಿ ಮತ್ತು ಪರಿಹಾರ ಕಂಡುಕೊಳ್ಳುವಲ್ಲಿ ನಿಮ್ಮ ಪಾತ್ರ ಶ್ಲಾಘನೀಯ. ಉತ್ತಮ ಕೆಲಸಗಳನ್ನು ಹೀಗೇ ಮುಂದುವರಿಸಿಕೊಂಡು ಹೋಗಿ; ನಿಮ್ಮೊಂದಿಗೆ ನಾವಿದ್ದೇವೆ ಎಂದರು.