ಬೆಂಗಳೂರಿನಲ್ಲಿ ಜೂ.10ರಂದು ಉತ್ಪಾದನಾ ಮಂಥನ

58 ಉದ್ಯಮ ದಿಗ್ಗಜರು ಮತ್ತು 10 ನವೋದ್ಯಮಗಳು ಭಾಗಿ

ಬೆಂಗಳೂರು: ಜೂ.10ರಂದು ಉತ್ಪಾದನಾ ಮಂಥನ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಕರ್ನಾಟಕವನ್ನು ʼಜಾಗತಿಕ ತಯಾರಿಕಾ ಕೇಂದ್ರʼವನ್ನಾಗಿ ಅಭಿವೃದ್ಧಿಪಡಿಸಲು ನೀಲನಕ್ಷೆ ತಯಾರಿಸುವ ಚಿಂತನ – ಮಂಥನಕ್ಕೆ ವೇದಿಕೆ ಕಲ್ಪಿಸಲಿರುವ ಒಂದು ದಿನದ ʼಉತ್ಪಾದನಾ ಮಂಥನ್ʼ ಸಮಾವೇಶವು ಇದೇ 10ರಂದು (ಮಂಗಳವಾರ) ಬೆಂಗಳೂರಿನಲ್ಲಿ ನಡೆಯಲಿದೆ.

ಪ್ರಮುಖ ಕಂಪನಿಗಳಾದ ಕಾಲಿನ್ಸ್ ಏರೊಸ್ಪೇಸ್, ಮಹೀಂದ್ರಾ ಏರೊಸ್ಪೇಸ್, ಟೆಕ್ಸಾಸ್ ಇನ್‌ಸ್ಟ್ರುಮೆಂಟ್ಸ್, ಅಪ್ಲೈಡ್ ಮಟೇರಿಯಲ್ಸ್, ಏರ್ ಇಂಡಿಯಾ, ಬಿಐಎಲ್ ಸೇರಿದಂತೆ 58 ಕೈಗಾರಿಕೆಗಳು ಹಾಗೂ 10ನವೋದ್ಯಮಗಳು ಸಮಾವೇಶದಲ್ಲಿ ಭಾಗವಹಿಸುವುದನ್ನು ಖಚಿತಪಡಿಸಿವೆ.

ರಾಜ್ಯದ ಬಂಡವಾಳ ಹೂಡಿಕೆಯ ಆಕರ್ಷಣೆ ಹೆಚ್ಚಿಸಲು ರಾಜ್ಯ ಸರ್ಕಾರಕ್ಕೆ ವಲಯವಾರು ನೀಲನಕ್ಷೆ ರೂಪಿಸುವುದು ಈ ಸಮಾವೇಶದ ಮುಖ್ಯ ಉದ್ದೇಶವಾಗಿದೆ.

ʼವೈಮಾಂತರಿಕ್ಷ ಹಾಗೂ ರಕ್ಷಣೆ, ಎಲೆಕ್ಟ್ರಾನಿಕ್ಸ್ (ಬಿಡಿಭಾಗಗಳು) ಸೆಮಿಕಂಡಕ್ಟರ್ಸ್, ಭಾರಿ ಯಂತ್ರೋಪಕರಣ- ಮಷಿನ್‌ಟೂಲ್ಸ್, ರೋಬೊಟಿಕ್ಸ್, ವಾಹನ ತಯಾರಿಕೆ / ಬಿಡಿಭಾಗಗಳು ಮತ್ತು ವಿದ್ಯುತ್‌ಚಾಲಿತ ವಾಹನಗಳು (ಇವಿ), ಜವಳಿ, ಗ್ರಾಹಕ ಉತ್ಪನ್ನಗಳು (ಎಫ್‌ಎಂಸಿಜಿ, ಪಾದರಕ್ಷೆ ಹಾಗೂ ಆಟಿಕೆ) – ಒಳಗೊಂಡಿರುವ 6 ಪ್ರಮುಖ ತಯಾರಿಕಾ ವಲಯಗಳಲ್ಲಿನ ರಾಜ್ಯದ ಸಾಧನೆ ಮುನ್ನಡೆಸಲು ಹಮ್ಮಿಕೊಳ್ಳಬೇಕಾದ ಕ್ರಮಗಳ ಬಗ್ಗೆ ಉದ್ಯಮ ದಿಗ್ಗಜರು ಈ ಸಮಾವೇಶದಲ್ಲಿ ರಾಜ್ಯ ಸರ್ಕಾರಕ್ಕೆ ಸಲಹೆ, ಮಾರ್ಗದರ್ಶನ ನೀಡಲಿದ್ದಾರೆ.

ಏರ್ ಇಂಡಿಯಾದ ಪ್ರಾಜೆಕ್ಟ್ಸ್ ಮುಖ್ಯಸ್ಥ ಶ್ರೀ ಜಿತಿನ್ ಗುಲಾಟಿ, ಮಹೀಂದ್ರಾ ಏರೋಸ್ಪೇಸ್ ನ ಸಿಒಒ ಶ್ರೀಕಾರ್ತಿಕ್ ಕೃಷ್ಣಮೂರ್ತಿ, ಹಿಟಾಚಿ ಎನರ್ಜಿ-ಯ ಸಿಇಒ ಶ್ರೀವೇಣು ನುಗುರಿ, ಟಾಟಾ ಹಿಟಾಚಿಯ ವ್ಯವಸ್ಥಾಪಕ ನಿರ್ದೇಶಕ ಶ್ರೀ ಸಂದೀಪ್ ಸಿಂಗ್, ಹೋಂಡಾ-ದ ಕಾರ್ಯಾಚರಣೆ ಮುಖ್ಯಸ್ಥ ಶ್ರೀ ಸುನಿಲ್ ಮಿತ್ತಲ್, ಸೇರಿದಂತೆ ಹಲವು ಪ್ರಮುಖರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.

ʼಇದು ಬರೀ ಸಮಾವೇಶ ಆಗಿರುವುದಿಲ್ಲ. ಕರ್ನಾಟಕವನ್ನು ಜಾಗತಿಕ ತಯಾರಿಕಾ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ನಿರ್ಣಾಯಕ ಹೆಜ್ಜೆಯಾಗಿರಲಿದೆ ಎಂದಿದ್ದಾರೆ.