ಬೆಂಗಳೂರಾಚೆಗೂ ಕಣ್ತೆರೆದು ನೋಡಿದರೆ ರಾಜ್ಯದ ಕಲ್ಯಾಣ

ಜನಾಶಯ

ಬಹುಸಂಸ್ಕೃತಿಯ, ಮಾಹಿತಿ ತಂತ್ರಜ್ಞಾನದ ದೇಶದ ಸಿಲಿಕಾನ್ ವ್ಯಾಲಿ, ಈ ಹಿಂದಿನ ಉದ್ಯಾನನಗರಿ ಬೆಂಗಳೂರು ಜಲಪ್ರಳಯವಾಗಿ ಜಾಗತಿಕ ಮಟ್ಟದ ಸುದ್ದಿಯಾಗಿರುವಾಗಲೇ ಬಿಯಾಂಡ್ ಬೆಂಗಳೂರು' ಇಣುಕಿ ನೋಡುವ ಕಾರ್ಯಕ್ಕೆ ವೇಗ ಬಂದಿದೆ! ತಂತ್ರಜ್ಞಾನದ ಬೆಳವಣಿಗೆ, ಆರ್ಥಿಕತೆ, ಉದ್ಯಮಗಳು ಬೆಂಗಳೂರು ಆಚೆಗೆ ಅಭಿವೃದ್ಧಿಯಾಗಬೇಕೆಂಬ ಯೋಜನೆ- ಯೋಚನೆ ಬಂದಿದ್ದು, ಇದಕ್ಕೆ ಪೂರಕವಾಗಿ ಸರ್ಕಾರ ಕಾರ್ಯಪ್ರವೃತ್ತವಾಗಿ ಕಳೆದೊಂದು ವಾರದಲ್ಲಿ ಚುರುಕಾಗಿರುವುದು ವೇದ್ಯ. ಸರ್ಕಾರ ಹಾಗೂ ಮಂತ್ರಿಗಳು ಡಿಜಿಟಲ್ ಆರ್ಥಿಕತೆಯ ಮೂಲಕ ಹುಬ್ಬಳ್ಳಿ-ಧಾರವಾಡ- ಬೆಳಗಾವಿ, ಮಂಗಳೂರು- ಮೈಸೂರುಗಳನ್ನು ಘಟಕಗಳನ್ನಾಗಿಸಿ, ಬ್ರ್ಯಾಂಡ್ ಮಾಡಿ ಉತ್ತೇಜಿಸುವ ಸ್ಟಾರ್ಟ್ಅಪ್ ಚಿಂತನೆಯನ್ನು ಪ್ರೋತ್ಸಾಹಿಸುವ ಉದ್ದೇಶವನ್ನು ಸರ್ಕಾರ ತೋರ್ಪಡಿಸಿದೆ. ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರಿನ ಬಗ್ಗೆ, ಅಲ್ಲಿನ ವಾಸ್ತವ್ಯ, ಬದುಕು- ವಾತಾವರಣ ಅಸಹನೀಯವಾಗಿರುವವರು, ಕೋವಿಡ್‌ನಲ್ಲಿ ಹಳ್ಳಿ ನೋಡಿದವರು ಬಹುಶಃ ಬೆಂಗಳೂರೇತರ, ಬೆಂಗಳೂರು ಹೊರತುಪಡಿಸಿ ಎನ್ನುವ ಈ ಅಭಿಯಾನಕ್ಕೆ ಕೈಜೋಡಿಸುವ ಸಾಧ್ಯತೆ ಈಗ ಹೆಚ್ಚಿದೆ. ಇಂತಹ ವಾತಾವರಣಕ್ಕೆ ಇವರುಗಳುಶೇಕ್‌ಹ್ಯಾಂಡ್’ ಮಾಡಲಿದ್ದಾರೆ.
ಆದರೆ ಬೆಂಗಳೂರೇತರವಾಗಿ ಯೋಚಿಸುವುದನ್ನು ರಿವರ್ಸ್ ಎಕಾನಮಿ, ರಿವರ್ಸ್ ಡೆವಲಪ್‌ಮೆಂಟ್, ಗಾಂಧಿ ಪ್ರೇಷಿತ ಯೋಚನೆ ಈಗ ಆರಂಭವಾಯಿತೇ? ಹಳ್ಳಿಯಿಂದಲೇ ದೇಶ, ಗ್ರಾಮ ಸ್ವರಾಜ್ಯಕ್ಕೆ ಮತ್ತೆ ಯೋಚನೆ- ಶಕ್ತಿ ಬಂದಿತೇ? ಹಾಗೆಂದು ಕೊಂಡರೆ ಹಾಗಲ್ಲ! ಆ ಮನಸ್ಸು ಕಾಣೆ. ಆದರೆ ಬೆಂಗಳೂರಾಚೆಯ ಜನರಲ್ಲಿ ಬೆರಗು ಬಿನ್ನಾಣದ ಕಂಗಳ ಜೊತೆಗೆ ಆತಂಕವೂ ಮೂಡಿದೆ ಎನ್ನಲೇಬೇಕು.
ನಿಜ. ಇಡೀ ಬೆಂಗಳೂರು ಮಹಾನಗರವೊಂದೇ ಕರ್ನಾಟಕ ಎನ್ನುವಂತೆ, ಬೆಂಗಳೂರಿಗಾಗಿಯೇ ಈ ರಾಜ್ಯದ ಜನರ ಸಂಪತ್ತು ದುಡಿಮೆ, ರಾಜಧಾನಿ ಪೂರಕವಾಗಿಯೇ ಯೋಜನೆಗಳು ಎನ್ನುವಂತೆ ಆರೇಳು ದಶಕಗಳಲ್ಲಿಯೂ ಕಾರ್ಯವಿಧಾನ, ಯೋಜನೆಗಳನ್ನು ರೂಪಿಸಲಾಗಿತ್ತು. ಬೆಂಗಳೂರಿಗೆ ವಿದ್ಯುತ್ ಬೇಕು ಎಂದರೆ ಶರಾವತಿ- ಕಾಳಿ ಯೋಜನೆಗಳು… ಬೆಂಗಳೂರು ಮಹಾನಗರ ಕಟ್ಟಲು ಸಿಮೆಂಟ್ ಕಬ್ಬಿಣ ಬೇಕು.. ಇಲ್ಲಿನ ಮ್ಯಾಂಗನೀಸ್ ಅದಿರು, ಸಿಮೆಂಟ್ ಬಗೆಯಬೇಕು.., ಮಹಾನಗರದಲ್ಲಿ ಮನೆ ಕಟ್ಟಲು ಕಟ್ಟಿಗೆ ಬೇಕು ಎಂದಾಗ ಕೊಡಗು, ಶಿವಮೊಗ್ಗಾ, ಪಶ್ಚಿಮ ಘಟ್ಟ ಕಡಿಯಬೇಕು.. ಕುಡಿಯುವ ನೀರಿಗಾಗಿ ಕಾವೇರಿ, ಕಬಿನಿಗಳಿಗೆ ಆಣೇಕಟ್ಟು ಕಟ್ಟಬೇಕು ! ಹೀಗೆ ನಡೆದಿತ್ತು ಯೋಜನೆ, ಯೋಚನೆಗಳು. ಜನರದೃಷ್ಟಿ ಕೋನ, ನದಿಗಳ ನೀರನ್ನೇ ಹಿಮ್ಮುಖ ತಿರುಗಿಸಲಾಗಿತ್ತು..
ರಾಜ್ಯದ ಜನರ ಮತಗಳೂ ಬೆಂಗಳೂರಿಗಾಗಿಯೇ ಮಾರಾಟವಾದವು. ಬೆಂಗಳೂರು ಜನ ಯಾವ ಆಹಾರ ಬಯಸುತ್ತಾರೋ ಅದನ್ನು ರೈತರ ಮೇಲೆ ಪ್ರಯೋಗಿಸಿ ಬೆಳೆಯಲಾಯಿತು. ಬಿತ್ತಲಾಯಿತು. ಒಂದರ್ಥದಲ್ಲಿ ಬೆಂಗಳೂರು ಕುಣಿಸಿದಂತೆ ಇಡೀ ರಾಜ್ಯ ಕುಣಿದಿದೆ, ಕುಣಿಸುತ್ತಿದೆ ಎನ್ನಿ.
ಆದರೆ ಬೆಂಗಳೂರು ಮಾತ್ರ ಹೊರಗಡೆ ಇಣುಕಲಿಲ್ಲ. ಆ ಪ್ರಯತ್ನವನ್ನೂ ಮಾಲಿಲ್ಲ. ತನ್ನ ಆಚೆಯ ಜನರ ಬದುಕು-ಬವಣೆ, ಅಭಿವೃದ್ಧಿ, ಮೂಲಭೂತ ಸೌಲಭ್ಯ, ಶಿಕ್ಷಣ ಇವುಗಳ ನಡುವಿನ ಅಂತರ ವ್ಯಾಪಕವಾಯ್ತು. ಇಪ್ಪತ್ತು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಏನು ಕಾಣುತ್ತಿದ್ದೆವೋ, ಬೀದರ ಭಾಲ್ಕಿ, ಧಾರವಾಡದ ಅಮೀನಗಡ, ನಿಗದಿ, ಜೋಯ್ಡಾ ಪ್ರದಾನಿ ಹಳ್ಳಿಗಳು ಈಗ ಕಾಣುತ್ತಿವೆ.
ನಿಜ. ಬಿಯಾಂಡ್ ಬೆಂಗಳೂರು ಕಳೆದೆರಡು ದಶಕಗಳಿಂದ ಕೇಳಿ ಬರುತ್ತಿರುವ ಒತ್ತಡ. ಬೆಂಗಳೂರು ಬಿಡಿ. ಕರ್ನಾಟಕ ನೋಡಿ ಎನ್ನುವುದು ಜನಸಾಮಾನ್ಯರ- ಚಿಂತಕರ ಒತ್ತಾಸೆ ಕೂಡ. ಏನೆಲ್ಲ ಇದೆ ಕರ್ನಾಟಕದಲ್ಲಿ? ಹೇಗೆಲ್ಲ ಇದೆ ಎನ್ನುವುದನ್ನು ಬೆಳೆಸುವ, ಅಲ್ಲಿನ ಬದುಕು ಹೆಚ್ಚಿಸುವ ಪರಿಕಲ್ಪನೆಗೆ ಬಿಯಾಂಡ್ ಬೆಂಗಳೂರು ಪೂರಕವಾಗಬೇಕಲ್ಲವೇ? ಕೇವಲ ಡಿಜಿಟಲ್, ಸ್ಟಾರ್ಟ್ಅಪ್ ಸೇರಿದಂತೆ ಐಟಿ ಕ್ಷೇತ್ರ ಮಾತ್ರ ಬೆಳೆದರೆ ಬದುಕು ಬದಲಾಗದು.
ಇಲ್ಲಿ ಕಾಡಿದೆ. ವಿಭಿನ್ನ ಆಹಾರ ವಿಚಾರ ಸಂಸ್ಕೃತಿಗಳಿವೆ. ನದಿ ಹಳ್ಳ ಕೊಳ್ಳ, ಗಾಣ, ಆಲೆಮನೆ, ಕಾಟನ್ ಮಿಲ್‌ಗಳು ಒಂದೇ ಎರಡೇ? ಪ್ರತಿ ಜಿಲ್ಲೆ ಅದರದ್ದೇ ಆದ ಸಂಸ್ಕೃತಿ, ಉದ್ಯಮ- ವ್ಯಾಪಾರ- ಕೃಷಿ- ವಾಣಿಜ್ಯ ಎಲ್ಲವೂ ಮೇಳೈಸಿದೆ. ಇವುಗಳ ಮೂಲಕ ಕರ್ನಾಟಕವನ್ನು ಕಟ್ಟಬೇಕಿದೆ. ಬ್ರ್ಯಾಂಡ್ ಬೆಂಗಳೂರು ನಂತರ ಬಿಯಾಂಡ್ ಬೆಂಗಳೂರು, ಜೊತೆಗೆ ಬ್ರ್ಯಾಂಡ್ ಕರ್ನಾಟಕ ಆಗಬೇಕಿದೆ. ೨೦೨೦ರಲ್ಲಿ ಮೂಸೆಯಲ್ಲಿ ಮೂಡಿದ ಬಿಯಾಂಡ್ ಬೆಂಗಳೂರು ಚಿಂತನೆ ಇನ್ನೂ ಪಂಚತಾರಾ ಹೋಟೆಲುಗಳು, ಕಾರ್ಪೋರೇಟ್ ಕಂಪನಿಗಳ ಸಿಇಓಗಳು, ಅಧಿಕಾರಿಗಳ ಠಾಕುಠೀಕಿನ ಜಾಡಿನಲ್ಲೇ ನಡೆದಿವೆ. ಇವುಗಳ ನಡುವೆಯೇ ಸುತ್ತಾಡುತ್ತಿದೆ.
ಹಾಗಂತ ಎರಡು- ಮೂರನೇ ಶ್ರೇಣಿಯ ನಗರಗಳಲ್ಲಿ ಉದ್ಯಮ ಚಿಂತನೆ ನಡೆದಿಲ್ಲ ಎಂದಲ್ಲ. ಆದರೆ ಕೈ ಹಾಕಿ ಸುಟ್ಟುಕೊಂಡವರೇ ಹೆಚ್ಚು. ವಿಶೇಷವಾಗಿ ಕೆಂಪು ಪಟ್ಟಿಯ ಆಟಾಟೋಪ, ಲಂಚ ರುಷುವತ್ತುಗಳಿಂದಾಗಿ ಈಡೇರಲಿಲ್ಲ. ಹುಬ್ಬಳ್ಳಿಯಲ್ಲಿ ಬಿಯಾಂಡ್ ಬೆಂಗಳೂರಿನ ದುಂಡುಮೇಜಿನ ಸಭೆ ನಡೆದಾಗ ಕೆಂಪು ಪಟ್ಟಿ ನಿವಾರಿಸುವಂತೆ, ಸಿಂಗಲ್ ವಿಂಡೊ ಸಿಸ್ಟಮ್, ಸಕಾಲ ಇವುಗಳನ್ನು ಜಾರಿಗೆ ತನ್ನಿ. ಘೋಷಣೆಗಷ್ಟೇ ಉಳಿಸಬೇಡಿ. ಸ್ಟಾರ್ಟ್ಅಪ್‌ಗಳನ್ನು ಉತ್ತೇಜಿಸಿ. ನಮ್ಮ ಶ್ರಮ ಕೇವಲ ಪರವಾನಗಿ ಪಡೆಯಲು ಓಡಾಡುವಂತಾಗಿದೆ. ಯಾವ ಸರ್ಕಾರ ಬಂದರೂ ಈ ಪರ್ಮಿಟ್ ರಾಜ್ಯದಿಂದ ಮುಕ್ತಿ ಇಲ್ಲ; ಅಧಿಕಾರಶಾಹಿ ಮನಸ್ಥಿತಿ ಬದಲಾಗಿಲ್ಲ ಎಂದಿದ್ದರು ಚಿಂತಕರು. ಎಷ್ಟು ವಾಸ್ತವವಲ್ಲವೇ?
ಸರ್ಕಾರ ಏನೇ ಸಮರ್ಥನೆ ನೀಡಿದರೂ ವಾಸ್ತವ ಮಾತ್ರ ಇದುವೇ. ಹುಬ್ಬಳ್ಳಿ ಧಾರವಾಡದಲ್ಲಿ ಐಟಿ ಪಾರ್ಕ್ ನಿರ್ಮಾಣಕ್ಕಾಗಿ, ಹಾಗೆಯೇ ಹುಬ್ಬಳ್ಳಿ ಆರ್ಯಭಟ ಪಾರ್ಕ್ನಲ್ಲಿ ಜಾಗ ಪಡೆಯಲು ಸಾಹಸ ಪಟ್ಟವರೆಷ್ಟು? ನೌಕರಿ ಪಡೆಯಲು ಹೆಣಗಾಡಿದವರು ಎಷ್ಟು? ಅಸಂಖ್ಯ ಜನರ ಮುಗಿಯದ ಅನುಭವವಿದು. ಭೂಮಿಗೆ ಚಿನ್ನದ ಬೆಲೆ ಇದೆ ಹಾಗಾಗಿ, ಸರ್ಕಾರದ ಕೈಗಾರಿಕಾ ಭೂಮಿ ಮತ್ತು ಕೈಗಾರಿಕಾ ವಸಹಾತುಗಳು ನಿಧಾನವಾಗಿ ರಿಯಲ್ ಎಸ್ಟೇಟ್‌ಗಳಾಗಿ ವಿಕ್ರಿಯಾಗುತ್ತಿವೆ. ಪರಿವರ್ತನೆ ಹೊಂದುತ್ತಿವೆ.
ಬಿಯಾಂಡ್ ಬೆಂಗಳೂರು ಈ ಕಾರ್ಯಕ್ಕೆ ಬೆಂಗಳೂರೇತರ ಜನಪ್ರತಿನಿಧಿಗಳ, ನಾಯಕರ ಇಚ್ಛಾಶಕ್ತಿ ಮತ್ತು ಮನೋಭಾವ ಹೇಗಿದೆ? ಬೆಂಗಳೂರು ಅಚಿನ ತಮ್ಮ ಕ್ಷೇತ್ರಗಳ ಅಭಿವೃದ್ಧಿಯನ್ನಿವರು ನಿಜವಾಗಿ ಬಯಸುವರೇ? ಬೆಂಗಳೂರಿಗರು ಕರ್ನಾಟಕದಲ್ಲಿ ಬೇರೆಡೆ ಹೊರಬರುವುದು ಕೇವಲ ಪ್ರವಾಸಕ್ಕೆ ಮಾತ್ರ. ಉದ್ಯೋಗ, ಉದ್ಯಮ ಅಥವಾ ಬದುಕಿಗಾಗಿ ಅಲ್ಲ. ಕರಾವಳಿ, ಕಡಲು, ಮಲೆನಾಡಿನ ರೆಸಾರ್ಟ್ಗಳು, ದಾರಿಯುದ್ದಕ್ಕೂ ಇರುವ ದೇವಾಲಯಗಳು ಇವಿಷ್ಟೇ ಬೆಂಗಳೂರಿಗರು ಕಂಡ ಕರ್ನಾಟಕ.
ಇಲ್ಲಿಯೂ ಜನರಿದ್ದಾರೆ. ಸುಸಂಸ್ಕೃತವಾಗಿ ಜೀವನ ನಡೆಸುತ್ತಿದ್ದಾರೆ. ಅವರಿಗೂ ಬದುಕಿಗೆ ಎನ್ನುವ ಮನೋಭಾವನೆ ಸರ್ಕಾರದ ಮಟ್ಟದಲ್ಲೊಂದೇ ಅಲ್ಲ, ಬೆಂಗಳೂರಿಗರಲ್ಲೂ ಬರಬೇಕಾಗಿದೆ.
ಶಾಲೆಗೆ ಶಿಕ್ಷಕರನ್ನು ಕೊಡಿ, ವೈದ್ಯರಿಲ್ಲ; ಆಸ್ಪತ್ರೆ ಇಲ್ಲ; ಬರುತ್ತಿದ್ದ ಬಸ್ ನಿಂತಿದೆ, ಅಥವಾ ಸಂಪರ್ಕವೇ ಇಲ್ಲ; ನಮ್ಮೂರಿಗೊಂದು ರಸ್ತೆ ಮಾಡಿಕೊಡಿ ಎನ್ನುವ ಕೂಗನ್ನು ಕೇಳಿಸಿಕೊಳ್ಳದಿದ್ದರೆ ಬಿಯಾಂಡ್ ಬೆಂಗಳೂರು ಕಾಗದಕ್ಕೆ, ಸಭೆಗೆ, ಟಿಪ್ಪಣಿಗೆ ಮುಗಿದು ಹೋಗುತ್ತದಷ್ಟೇ.
ಪರಿಸರವಾದದ ನೆಪದಲ್ಲಿ…
ಇಡೀ ವಾರ ಇನ್ನೊಂದು ವಿದ್ಯಮಾನ ಗಮನ ಸೆಳೆಯಿತು. ಅದೇ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ. ಹುಬ್ಬಳ್ಳಿಗೆ ಎಂದು ರೈಲು ಬಂತೋ, ಕಾರವಾರ-ಕುಮಟಾ ಬಂದರುಗಳಲ್ಲಿ ಹಡಗು ನಿಂತಿತೋ ಅಂದೇ ಬ್ರಿಟಿಷರು ಈ ಯೋಜನೆಯ ಕನಸು ಕಂಡಿದ್ದರು. ನಾಲ್ಕಾರು ದಶಕಗಳ ಹಿಂದಿನ ಈ ಯೋಜನೆಗೆ ಈಗ ಷರಾ ಬರೆಯುವ ಹಂತ ಬಂದಿದೆ.
ಕಳೆದ ವಾರವಿಡೀ ಉತ್ತರ ಕನ್ನಡ, ಧಾರವಾಡ ಭಾಗಗಳಲ್ಲಿ ಕೇಂದ್ರ ವನ್ಯಜೀವಿ ಮಂಡಳಿಯಿಂದ ನೇಮಕವಾದ ಉನ್ನತಾಧಿಕಾರ ಸಮಿತಿ ಜನರ ಅಹವಾಲು, ಸಾಧಕ- ಬಾಧಕ- ಪರವಿರೋಧಗಳ ಅಭಿಪ್ರಾಯವನ್ನು ಸಂಗ್ರಹಿಸಿದೆ. ಕರಾವಳಿ ಮತ್ತು ಕರ್ನಾಟಕ ಒಳನಾಡಿಗೆ ಬೆಸುಗೆಯಾಗಲಿರುವ ಈ ಯೋಜನೆಗೆ ೯೦ರ ದಶಕದಲ್ಲೇ ಅಂದಿನ ಪ್ರಧಾನಿ ವಾಜಪೇಯಿ ಅಡಿಗಲ್ಲನ್ನು ಇಟ್ಟಿದ್ದರು. ಎಲ್ಲವೂ ನಿರಾತಂಕವಾಗಿ ನಡೆದಿದ್ದರೆ ಯೋಜನೆ ಜಾರಿಗೆ ಬಂದು ದಶಕವಾಗುತ್ತಿತ್ತು. ಪರಿಸರ- ವನ್ಯಜೀವಿ ಅಂಶಗಳಿಂದಾಗಿ ನೆನೆಗುದಿಗೆ ಬಿದ್ದಿತ್ತು.
ಅಭಿವೃದ್ಧಿ ಮತ್ತು ಪರಿಸರ ಎರಡೂ ಪರಸ್ಪರ ವಿರೋಧದ ಸಂಗತಿಗಳೇ. ಜನರಿಗೆ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಹುಬ್ಬಳ್ಳಿ- ಅಂಕೋಲಾ ರೈಲು ಯೋಜನೆ ಅಗತ್ಯ. ಎಂತೆಂಥ ಗುಡ್ಡಕಾಡು, ದಂಡಕಾರಣ್ಯದ ನಡುವೆಯೇ ರೈಲು ಹಾದು ಹೋಗಿರುವಾಗ ಇಲ್ಲಿಗೇಕೆ ಹೀಗೆ? ಇಲ್ಲಿಗಷ್ಟೇ ಏಕೆ ಆಕ್ಷೇಪ ಎನ್ನುವ ಪ್ರಶ್ನೆ. ಉತ್ತರ ಕನ್ನಡ ಅಭಿವೃದ್ಧಿಗೆ ಅಲ್ಲಿಯ ಪರಿಸರ ಅಡ್ಡಿ ಎನ್ನುವುದೂ ಅಷ್ಟೇ ಸತ್ಯ. ಒಂದು ವಾರದ ಅಧಿಕಾರಿಗಳ ಪ್ರವಾಸದ ಸಂದರ್ಭದಲ್ಲಿ ಎದ್ದಿರುವ ಪ್ರಶ್ನೆ, ಹಕ್ಕೊತ್ತಾಯ ಹಾಗೂ ಆಕ್ಷೇಪಣೆಗಳನ್ನು ಗಮನಿಸಿದರೆ ನೋವಾಗುತ್ತದೆ. ಏಕೆಂದರೆ ಯೋಜನೆಗೆ ಆಕ್ಷೇಪ ಸಲ್ಲಿಸಿದವರು ಬೆಂಗಳೂರಿನ ಎನ್‌ಜಿಓಗಳು. ಇವರು ಈವರೆಗೆ ಕಾಡು ಅಡ್ಡಾಡಿದವರಲ್ಲ. ಇದರ ಮಹತ್ವ ಗೊತ್ತಿಲ್ಲದವರು. ಪುಸ್ತಕದ ಅಥವಾ ವಿಶ್ವವಿದ್ಯಾಲಯಗಳಲ್ಲಿ ಪರಿಸರ ಅಧ್ಯಯನ ನಡೆಸಿ ಪಿಎಚ್‌ಡಿ ಪಡೆದು, ಒಂದಿಷ್ಟು ಬಂಡವಾಳ ಪಡೆದು ಬೆಂಗಳೂರಿನಲ್ಲಿ ಎನ್‌ಜಿಓ ನಡೆಸುತ್ತಿರುವವರು.
ಪರಿಸರ ಹೋರಾಟ ಕಳೆದೆರಡು ದಶಕಗಳ ಈಚೆಗೆ ಹೇಗೆ ಫ್ಯಾಷನ್ ಆಗಿದೆಯೋ, ಪರಿಸರದ ವಿಚಾರಗಳು ಹೇಗೆ ಅಲಂಕಾರಿಕ ಮಾತುಗಳಾಗಿವೆಯೋ ಹಾಗೇ ಎನ್‌ಜಿಓಗಳಿಗೆ ಹಣ ಗಳಿಸುವ, ವಿದೇಶಿ ಪ್ರಯಾಣ ಮಾಡುವ, ಉಪನ್ಯಾಸ- ಸಿಂಪೋಸಿಯಮ್ ಇತ್ಯಾದಿಗಳಲ್ಲಿ ಪೋಸ್ ನೀಡುವ ವೃತ್ತಿಯಾಗಿಬಿಟ್ಟಿದೆ.
ಜನ ಪ್ರಶ್ನಿಸಿದರು. ಬೆಂಗಳೂರಿನ ಎನ್‌ಜಿಓಗಳು ನಮ್ಮ ಊರಿನ ಯೋಜನೆಗಳಿಗೆ ಆಕ್ಷೇಪಿಸುವುದು ಏಕೆ? ಈ ಹಿಂದೆ ಜಿಲ್ಲೆಯ ಎಷ್ಟು ಪರಿಸರ ನಾಶ ಯೋಜನೆಗಳಿಗೆ ಇವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ? ಎಂದು ಸವಾಲನ್ನೇ ಹಾಕಿದರು.
ಈ ಸವಾಲು ಆಕ್ರೋಶ ಭರಿತವಾಗಿತ್ತು. ಎಷ್ಟೆಂದರೆ ಬೀದಿಗೂ ಇಳಿದರು. ಇನ್ನೂ ವಿಚಿತ್ರ ಎಂದರೆ ಹುಬ್ಬಳ್ಳಿ ಅಂಕೋಲಾ ರೈಲಿಗೆ ಆಕ್ಷೇಪಿಸಿದವರಲ್ಲಿ ನಿವೃತ್ತ ಅರಣ್ಯಾಧಿಕಾರಿಗಳಿದ್ದಾರೆ. ಇದೇ ಅರಣ್ಯಾಧಿಕಾರಿಗಳು, ಉತ್ತರ ಕನ್ನಡ, ಶಿವಮೊಗ್ಗ, ಧಾರವಾಡ, ಬಳ್ಳಾರಿ, ಚಿಕ್ಕಮಗಳೂರು ಇತ್ಯಾದಿಗಳಲ್ಲಿ ಪರಿಸರ ನಾಶ ಯೋಜನೆಗೆ, ಮೊನೊ ಕಲ್ಚರ್‌ಗೆ ಹೇರಳವಾಗಿ ಕೊಡುಗೆ ನೀಡಿದವರು. ವನ್ಯಜೀವಿಗಳನ್ನು ಬೇಟೆ ಮಾಡಿದವರಿಗೆ ರಕ್ಷಣೆ ನೀಡಿದವರು. ಈ ನಿವೃತ್ತ ಅರಣ್ಯಾಧಿಕಾರಿಗಳಿಂದಲೇ ದೇಶದ ರಾಜ್ಯದ ಅರಣ್ಯ ರಕ್ಷಣೆ ಕಳೆದುಕೊಂಡಿತು. ಯೋಜನೆಗಳು ಹಣಗಳಿಕೆ ಕೇಂದ್ರವಾಗಿದ್ದವು. ಮೊದಲು ಗಿಡ ಮರ ಕಡಿದು, ನಂತರ ಗಿಡ ನೆಡುವ ಮೂಲಕ ಹಣ ಬಗೆದದ್ದು ವೇದ್ಯವಾಗಿಯೇ ಇದೆ. ಇತ್ತೀಚಿಗಷ್ಟೇ ಅರಣ್ಯಕ್ಕೆ ತಂತಿ ಬೇಲಿ ಹಾಕುವ ಯೋಜನೆಗೆ ಈ ಯೋಜಕರು ಯೋಜನೆ ರೂಪಿಸಿದ್ದನ್ನು ಗಮನಿಸಬಹುದು. ಅಂದಿನ ಅಧಿಕಾರಿ ಈಗ ಅಂಕೋಲಾ ಹುಬ್ಬಳ್ಳಿ ರೈಲು ಆರಂಭಿಸಬಾರದು; ಅರಣ್ಯ- ವನ್ಯಜೀವ ವೈವಿಧ್ಯವಿದೆ ಎಂದು ವಾದಿಸಿದರು.
ಪರಿಸರವಾದಿಗಳು ಅಪಹಾಸ್ಯಕ್ಕೆ ಈಡಾಗುತ್ತಿರುವುದಕ್ಕೆ ಇದೊಂದು ಉತ್ತಮ ಉದಾಹರಣೆ.