ಬುಟ್ಟಿ ಕಸಕ್ಕೆ ಲಕ್ಷ ರೂಪಾಯಿ ನೋಡ್ರಿ..!

ಧಾರವಾಡ: ಒಂದು ಬುಟ್ಟಿ ಕಸಕ್ಕೆ ಲಕ್ಷ ರೂಪಾಯಿ ನೋಡ್ರಿ… ಇಂಥಾ ಭಾಗ್ಯ ಯಾರಿಗುಂಟು ಯಾರಿಗಿಲ್ಲ…. ಫುರ್‌ನೇ ಬರೋದು…. ಫುರ್‌ನೇ ಹೋಗೋದು…
ಧಾರವಾಡ(ಗೂಡಿಸಲು)ದಲ್ಲಿ ಸ್ವಚ್ಛತಾ ಅಭಿಯಾನದ ಹಿನ್ನೆಲೆಯಲ್ಲಿ ಕೊಳಗೇರಿಯಲ್ಲಿಯ ಕೊಳಚೆಯನ್ನು ತೆಗೆದು ಹಾಕಲು ಸ್ವತಃ ಜಿಲ್ಲಾ ಉಸ್ತುವಾರಿ ಸಚಿವರೇ ವಿಶೇಷ ವಿಮಾನದ ಮೂಲಕ ಬಂದು ಸ್ವಚ್ಛತೆ ಮಾಡಿ ಮರಳಿ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ತೆರಳಿದರು. ಅಂದರೆ ಅದು ಧಾರವಾಡದಲ್ಲಿಯ ಕಸದ ಮಹಿಮೆಯೇ ಅಥವಾ ಸಚಿವರೇ ಬಂದು ಸ್ವಚ್ಛತೆ ಮಾಡಿದರೆ ಮಾತ್ರ ಕೊಳಗೇರಿಗಳು ಸ್ವಚ್ಛವಾಗುವುದೇ…!
ಮುಂಜಾನೆ ಕಸದ ಬುಟ್ಟಿ ಎತ್ತಲು ಆಗಮಿಸಿದ್ದ ಸಚಿವ ಲಾಡ್ ಅವರ ಕಾರ್ಯಕ್ರಮದಲ್ಲಿ ಪಾಲಿಕೆ ಮಹಾಪೌರ ರಾಮಣ್ಣ ಬಡಿಗೇರ, ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿ.ಪಂ. ಸಿಇಒ ಭುವನೇಶ ಪಾಟೀಲ, ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಸೇರಿದಂತೆ ಜಿಲ್ಲೆಯ ಇತರೆ ಅಧಿಕಾರಿಗಳು ಪಾಲ್ಗೊಂಡಿದ್ದರು. ಸ್ವಚ್ಛತೆಗಾಗಿಯೇ ಸಚಿವರು ಬೆಂಗಳೂರಿನಿಂದ ಬರಬೇಕು ಎಂದರೆ ಅದಕ್ಕೆ ವಿಶೇಷ ವಿಮಾನದಿಂದ ಬರಬೇಕು. ಇದು ಸ್ವಚ್ಛತೆಗೆ ನೀಡಿದ ಮಹತ್ವವೋ ಅಥವಾ ಸರಕಾರ ನೀಡಿದ ಮಹತ್ವವೋ ಎನ್ನುವುದೇ ಪ್ರಶ್ನಾತೀತ.
ಸುಮಾರು ಎರಡುವರೆ ಗಂಟೆಯ ಕಾರ್ಯಕ್ರಮದಲ್ಲಿ ಸಚಿವರು ಅಂದಾಜು ಐದಾರು ಬುಟ್ಟಿ ಕಸವನ್ನು ಎತ್ತಿ ಗಾಡಿಗೆ ಹಾಕಿರಬಹುದು, ಹತ್ತಾರು ಕಸ ಕಡ್ಡಿಗಳನ್ನು ಕಿತ್ತಿರಬಹುದು… ಮರ‍್ನಾಲ್ಕು ಚರಂಡಿ ಸ್ವಚ್ಛಗೊಳಿಸಿರಬಹುದು. ಇದೊಂದು ಸ್ವಚ್ಛತಾ ಅಭಿಯಾನ ಹೊರತುಪಡಿಸಿದರೆ ಬೇರೆ ಯಾವುದೇ ಕಾರ್ಯಕ್ರಮಗಳೂ ಇದ್ದಿಲ್ಲ. ಎರಡೂವರೆ ಗಂಟೆ ಕಾರ್ಯಕ್ರಮಕ್ಕೆ ಮಾತ್ರವೇ ಸಚಿವರು ಲಕ್ಷಾಂತರ ರೂಪಾಯಿ ವ್ಯಯಿಸಿ ಬಂದು ಹೋಗಿರುವುದು ಧಾರವಾಡ ಕಸದ ಮಹತ್ವವನ್ನೂ ತೋರಿಸುತ್ತದೆ.
ಕಳೆದ ಮುರ್ನಾಲ್ಕು ದಿನಗಳ ಹಿಂದಷ್ಟೇ ಹುಬ್ಬಳ್ಳಿಯಲ್ಲಿ ಸ್ವಚ್ಛತಾ ಅಭಿಯಾನ ಮಾಡಿದ್ದ ಸಚಿವ ಸಂತೋಷ ಲಾಡ್ ಅಂದೇ ಧಾರವಾಡದಲ್ಲಿಯೂ ಮಾಡಬಹುದಿತ್ತು. ಅಥವಾ ಜಿಲ್ಲಾಡಳಿತ, ಮಹಾನಗರ ಪಾಲಿಕೆಯವರು ಧಾರವಾಡದಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಬಹುದಿತ್ತು. ಅದಕ್ಕೆ ಉಸ್ತುವಾರಿ ಸಚಿವರೇ ಬರುವಾಗಲೂ ವಿಶೇಷ ವಿಮಾನ, ಎರಡೂವರೆ ಗಂಟೆ ಮುಗಿಸಿ ಹಿಂದಿರುಗಲೂ ವಿಶೇಷ ವಿಮಾನ.. ಹೀಗೆ ಇಷ್ಟೊಂದು ಖರ್ಚು ಮಾಡಿಕೊಂಡು ಬರಬೇಕಾಗಿತ್ತೇ… ಎಂಬುದು ಸಾರ್ವಜನಿಕ ಚರ್ಚೆಗೆ ಗ್ರಾಸವಾಯಿತು.