ಉಡುಪಿ: ಬ್ರಹ್ಮಾವರ ಸಮೀಪದ ಬಾಳೆಕುದ್ರು ಮಠದ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ ಶುಕ್ರವಾರ ಬ್ರಹ್ಮೈಕ್ಯರಾಗಿದ್ದಾರೆ. ಅವರಿಗೆ 55 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ವರ್ಷದಿಂದ ಅನಾರೋಗ್ಯಪೀಡಿತರಾಗಿ ಚಿಕಿತ್ಸೆ ಪಡೆಯುತ್ತಿದ್ದರು.
ಇಂದು ಬೆಳಿಗ್ಗೆ ಎಂದಿನಂತೆ ಡಯಾಲಿಸಿಸ್ ಗೆಂದು ಉಡುಪಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಬ್ರಹ್ಮಾವರ ಸಮೀಪ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ನು ತಕ್ಷಣ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿತಾದರೂ ಮಾರ್ಗಮಧ್ಯದಲ್ಲೇ ಅಸು ನೀಗಿದರು.
ಶ್ರೀಗಳ ಪಾರ್ಥೀವ ಶರೀರವನ್ನು ಬಾಳೆಕುದ್ರು ಮಠಕ್ಕೆ ತರಲಾಗಿದ್ದು, ಸಂಜೆ 4 ಗಂಟೆ ವರೆಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಶ್ರೀಮಠದ ಉತ್ತರಾಧಿಕಾರಿ ಶಿಷ್ಯ ಶ್ರೀ ವಾಸುದೇವ ಸದಾಶಿವಾಶ್ರಮ ಸ್ವಾಮೀಜಿ ಮೂಲಕ ಅಂತಿಮ ವಿಧಿ ವಿಧಾನಗಳು ನೆರವೇರಲಿವೆ ಎಂದು ಮಠದ ಮೂಲಗಳು ತಿಳಿಸಿವೆ.
ಉಡುಪಿ ಜಿಲ್ಲೆಯ ಶಾಂಕರ ಪರಂಪರೆಯ ಏಕೈಕ ಸ್ಮಾರ್ತ ಶಿವಳ್ಳಿ ಅದ್ವೈತ ಮಠವಾದ ಬಾಳೆಕುದ್ರು ಮಠದ ಪೂರ್ವ ಯತಿ ಶ್ರೀ ಶಂಕರಾಶ್ರಮ ಸ್ವಾಮೀಜಿ ಬ್ರಹ್ಮೈಕ್ಯರಾದ ಬಳಿಕ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ 2006ರಲ್ಲಿ ಬಾಳೆಕುದ್ರು ಮಠದ ಪೀಠಾಧಿಪತಿಗಳಾದರು. ಶೃಂಗೇರಿ ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸ್ವಾಮೀಜಿ ನೇತೃತ್ವದಲ್ಲಿ ಹೆಬ್ಬೂರು ಮಠದ ಶ್ರೀ ನಾರಾಯಣಾಶ್ರಮ ಸ್ವಾಮೀಜಿ ಸನ್ಯಾಸ ದೀಕ್ಷೆ ನೀಡಿದ್ದರು.
ಹಲವು ವರ್ಷಗಳಿಂದ ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಶ್ರೀಗಳಿಗೆ ವಾರಕ್ಕೆರಡು ಬಾರಿ ಡಯಾಲಿಸಿಸ್ ನಡೆಯುತ್ತಿತ್ತು.
2024ರ ನ.25ರಂದು ಮಂಗಳೂರು ಸಮೀಪದ ಗುರುಪುರ ನಿವಾಸಿ ಮಧುಸೂದನ ಭಟ್ ಎಂಬ ವಟುವನ್ನು ತಮ್ಮ ಉತ್ತರಾಧಿಕಾರಿ ಶಿಷ್ಯನನ್ನಾಗಿ ಸ್ವೀಕರಿಸಿ, ಶ್ರೀ ವಾಸುದೇವ ಸದಾಶಿವಾಶ್ರಮ ಎಂಬ ಯೋಗಪಟ್ಟ ನೀಡಿದ್ದರು. ಹರಿಹರಪುರ ಮಠದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಸ್ವಾಮೀಜಿ ಹಾಗೂ ಬೆಂಗಳೂರಿನ ಕೈಲಾಸಾಶ್ರಮದ ಶ್ರೀ ಜಯೇಂದ್ರಪುರಿ ಸ್ವಾಮೀಜಿ ನೇತೃತ್ವದಲ್ಲಿ ಶಿಷ್ಯ ಸ್ವೀಕಾರ ಸಮಾರಂಭ ನಡೆದಿದ್ದು, ಅದಕ್ಕೆ ಶ್ರೀಮಠದ ಕೆಲವು ಶಿಷ್ಯರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.