ಬಾಗಲಕೋಟೆ: ಜಿಲ್ಲೆಯ ಬಾದಾಮಿ ತಾಲೂಕಿನ ಹೂಲಗೇರಿ ವಲಯದ ಯಂಡಿಗೇರಿ ಗ್ರಾಮದ ಅಂಗನವಾಡಿ ಕೇಂದ್ರದ ವಿದ್ಯಾರ್ಥಿಯದ್ದು ಎನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
3 ವರ್ಷದ ಈ ಪುಟ್ಟಪೋರನ ಜ್ಞಾನವನ್ನು ಅಂಗವಾಡಿ ಕೇಂದ್ರದ ಶಿಕ್ಷಕಿ ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು ಅಪಾರ ಮೆಚ್ಚುಗೆ ಗಳಿಸಿದೆ. ವಿದ್ಯಾರ್ಥಿಯ ಹೆಸರು ಅಗಸ್ತ್ಯ ಎಂದು ತಿಳಿದು ಬಂದಿದೆ.
ತನ್ನ ತಂದೆ-ತಾಯಿ, ಗ್ರಾಮದ ವಿವರದಿಂದ ಹಿಡಿದು, ವಿಜ್ಞಾನಿಗಳು, ಸಾಹಿತಿಗಳು, ದೇಶದ ಪ್ರಧಾನಿ, ಮುಖ್ಯಮಂತ್ರಿ, ವಿಜ್ಞಾನದ ವಿಷಯಗಳ ಕುರಿತಾಗಿ ಪಟಪಟನೆ ಟೀಚರ್ ಪ್ರಶ್ನೆ ಕೇಳುತ್ತಿದ್ದಂತೆ ವಿವರಿಸಿದ್ದಾನೆ. ಅಂಗನವಾಡಿ ಕೇಂದ್ರವೊಂದರಲ್ಲಿ ಕಲಿಯುತ್ತಿರುವುದು ಮಾತ್ರವಲ್ಲದೇ ಇನ್ನೂ ಪೂರ್ತಿ ಮೂರು ವರ್ಷವೂ ತುಂಬದ ಬಾಲಕನ ಸಾಮಾನ್ಯ ಜ್ಞಾನ ನೆಟ್ಟಿಗರಿಗೆ ಬೆರಗು ಮೂಡಿಸಿದೆ. ಮೂರು ನಿಮಿಷಗಳ ಕಾಲ ಶಿಕ್ಷಕಿ ನಿರರ್ಗಳವಾಗಿ ಪ್ರಶ್ನೆಗಳ ಸುರಿಮಳೆಗೈಯುತ್ತಿದ್ದರೆ ಬಾಲಕ ಅಷ್ಟೇ ವೇಗದಲ್ಲಿ ಆತ್ಮವಿಶ್ವಾಸದಿಂದ ಉತ್ತರ ನೀಡಿದ್ದಾನೆ. ಈ ವಿಡಿಯೋಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ಅಂಗನವಾಡಿ ಕೇಂದ್ರ, ಸರ್ಕಾರಿ ಶಾಲೆಗಳೇ ನಿಜವಾದ ಜ್ಞಾನ ದೇಗುಲ ಎಂಬ ಕಮೆಂಟ್‌ಗಳು ಬಂದಿವೆ.