ಚಳ್ಳಕೆರೆ, ಜುಲೈ 4: ಬಯಲುಸೀಮೆಯ ಜನತೆಗೆ ಉತ್ತರ ಕರ್ನಾಟಕ ಶೈಲಿಯ ರಂಗಕಲೆಯ ಸೊಗಡನ್ನು ಪರಿಚಯಿಸಲು ಇಳಕಲ್ ತಾಲ್ಲೂಕಿನ ರಂಗಸಂಗಮ ಕಲೆ ಮತ್ತು ಸಾಂಸ್ಕೃತಿಕ ಸಂಘ ಸಜ್ಜಾಗಿದೆ. ‘ಮಾಯಾ ಮದ ಮರ್ಧನ ಅಲ್ಲಮಪ್ರಭು’ ಎಂಬ ಐತಿಹಾಸಿಕ ನಾಟಕದ ಮೂಲಕ ಸಮಾಜಮುಖಿ ಸಂದೇಶ ನೀಡಲು ಮುಂದಾಗಿದೆ ಎಂದು ಸಂಘದ ಅಧ್ಯಕ್ಷೆ ರೇಷ್ಮಾ ಸಿ. ಅಳವಂಡಿ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೇಷ್ಮಾ ಸಿ. ಅಳವಂಡಿ, 12ನೇ ಶತಮಾನದಲ್ಲಿ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದ ಮೂಲಕ ವಚನ ಸಾಹಿತ್ಯವು ಸಮಾಜಕ್ಕೆ ನೀಡಿದ ಉತ್ತಮ ಸಂದೇಶಗಳನ್ನು ಸ್ಮರಿಸಿದರು. ಅಲ್ಲಮಪ್ರಭು ಅವರ ಬೋಧನೆಗಳನ್ನು ಪ್ರಚುರಪಡಿಸುವ ಈ ಐತಿಹಾಸಿಕ ನಾಟಕವನ್ನು ಜುಲೈ 13ರಂದು ಸಂಜೆ 6:30ಕ್ಕೆ ಚಳ್ಳಕೆರೆ ತಾಲ್ಲೂಕಿನ ವೀರಶೈವ ಕಲ್ಯಾಣ ಮಂಟಪದಲ್ಲಿ ಪ್ರದರ್ಶಿಸಲಾಗುವುದು ಎಂದು ತಿಳಿಸಿದರು.
ಈ ನಾಟಕವನ್ನು ವೀಕ್ಷಿಸಲು ತಾಲ್ಲೂಕಿನ ಸಮಸ್ತ ನಾಗರಿಕರು, ರೈತ ಬಾಂಧವರು ಹಾಗೂ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ನೂರು ರೂಪಾಯಿಗಳ ಪ್ರವೇಶ ಶುಲ್ಕ ನೀಡಿ ಕಲಾವಿದರನ್ನು ಪ್ರೋತ್ಸಾಹಿಸುವಂತೆ ಅವರು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ನಾಟಕದ ಬಿತ್ತಿಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದ ಅಖಿಲ ಭಾರತ ವೀರಶೈವ ಮಹಾಸಭಾ ಮಹಿಳಾ ಉಪಾಧ್ಯಕ್ಷೆ ಭಾಗ್ಯಮ್ಮ, ಚಳ್ಳಕೆರೆ ಬರಪೀಡಿತ ಪ್ರದೇಶ ಎಂಬ ಹಣೆಪಟ್ಟಿಯನ್ನು ಹೊಂದಿದ್ದರೂ, ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ಎಂದಿಗೂ ಕೊರತೆ ಎದುರಿಸಿಲ್ಲ ಎಂದು ಶ್ಲಾಘಿಸಿದರು. ತಳುಕಿನ ವೆಂಕಣ್ಣಯ್ಯ, ತ.ರಾ.ಸು. ಅವರಂತಹ ಹಲವು ದಿಗ್ಗಜ ಸಾಹಿತಿಗಳು ಈ ನೆಲದಲ್ಲಿ ಜನಿಸಿದ್ದು, ಇಂದಿಗೂ ಇಲ್ಲಿನ ಜನತೆ ನಾಟಕ, ಕಲೆ ಮತ್ತು ಸಾಹಿತ್ಯಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ ಎಂದು ಬಣ್ಣಿಸಿದರು. ಇಂತಹ ಪೌರಾಣಿಕ ನಾಟಕಗಳು ತಾಲ್ಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರದರ್ಶನಗೊಂಡು ಯಶಸ್ವಿಯಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ನೃತ್ಯನಿಕೇತನ ಸಂಗೀತ ಶಾಲೆಯ ಅಧ್ಯಕ್ಷ ವಿಷ್ಣುಮೂರ್ತಿ ರಾವ್, ಫರೀದ್ ಖಾನ್, ಸಂಜೀವಿನಿ ಲ್ಯಾಬ್‌ನ ಎಂ.ಎನ್. ಮೃತ್ಯುಂಜಯ ಮತ್ತು ಮಹಾದೇವಿ ಉಪಸ್ಥಿತರಿದ್ದರು.