ಬದುಕಿನ ಭದ್ರತೆಯ ಗ್ಯಾರಂಟಿ ಬೇಕಿದೆ..!

ತನ್ನ ಗ್ಯಾರಂಟಿ ಯೋಜನೆಗಳಿಂದಾಗಿ ಸಾಕಷ್ಟು ಜನಪ್ರಿಯತೆಯೊಂದಿಗೆ ಸಂಕಷ್ಟವನ್ನೂ ಎದುರಿಸಿರುವ ರಾಜ್ಯ ಸರ್ಕಾರ ಎರಡು ವರ್ಷ ಪೂರ್ಣಗೊಂಡ ಸಮರ್ಪಣೆ ಸಂಕಲ್ಪ ಸಮಾವೇಶದಲ್ಲಿ ಭೂ ಗ್ಯಾರಂಟಿ' ಘೋಷಣೆ ಮಾಡಿದೆ. ಚುನಾವಣಾ ಪ್ರಣಾಳಿಕೆಯಲ್ಲಿ ಇಲ್ಲದಿದ್ದ ಈ ಭೂ ಗ್ಯಾರಂಟಿ ಸರ್ಕಾರದ ಆರನೇ ಗ್ಯಾರಂಟಿ ! ಶತಮಾನಗಳ ಕಾಲ ತಾಂಡಾ, ಹಾಡಿ, ಕಂದಾಯ ಭೂಮಿ, ಹಾದಿ ಬೀದಿಗಳ ಅಂಚಿನಲ್ಲಿ ಬದುಕು ಸವೆಸುತ್ತಿರುವ ಜನರಿಗೊಂದು ಶಾಶ್ವತ ನೆಲೆ ಒದಗಿಸುವ, ತನ್ಮೂಲಕ ಅವರು ವಾಸಿಸುವ ಜಾಗೆಯ ಭೂಮಿಯ ಹಕ್ಕು ನೀಡುವ ಈ ಯೋಜನೆ ಈ ಮೊದಲಿನ ಗ್ಯಾರಂಟಿಗಳಿಗಿಂತಲೂ ಭಿನ್ನವಾದುದು. ಲಂಬಾಣಿ ತಾಂಡಾಗಳನ್ನು, ಗುಡ್ಡಗಾಡು ಮತ್ತು ಅರಣ್ಯದಂಚಿನ ಪ್ರದೇಶಗಳಲ್ಲಿ ನೆಲೆಸಿರುವ ಜನರ ಬದುಕಿಗೊಂದು ನೆಲೆ ಒದಗಿಸುವ ಈ ಯೋಜನೆಗೆ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಒತ್ತಾಯವಿತ್ತು. ಹಾಗೇ ರಾಜ್ಯಾದ್ಯಂತ ನೆಲೆಸಿರುವ, ವಿಶೇಷವಾಗಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿರುವ ಲಂಬಾಣಿ ಬದುಕಿಗೆ ಇದು ಬಹುದೊಡ್ಡ ಸಕಾರಾತ್ಮಕ ಗಟ್ಟಿ ನೆಲೆಯಾಗಲಿದೆ. ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮವೆಂದು ಪರಿವರ್ತಿಸಿ ಅವರಿಗೆ ಮೂಲಭೂತ ಸೌಕರ್ಯ ಒದಗಿಸಬೇಕೆಂಬ ಆಗ್ರಹ ಮತ್ತು ಯೋಜನೆಗಳು ಇದುವರೆಗೆ ರಾಜಕೀಯ ತಂತ್ರಗಳಾಗಿ ಬಳಕೆಯಾಗಿಬಿಟ್ಟವು. ಕಳೆದ ಮರ‍್ನಾಲ್ಕು ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಎಲ್ಲ ರಾಜಕೀಯ ಪಕ್ಷಗಳು ಭರವಸೆ ಕೊಟ್ಟಿದ್ದೇ ! ಹಿಂದಿನ ಚುನಾವಣೆಗೆ ಮುನ್ನ ಬೀದರ್‌ನಲ್ಲಿ ಒಂದು ಸಮಾವೇಶವನ್ನೂ ನಡೆಸಿ ಪ್ರಧಾನಿಯವರ ಹಸ್ತದಿಂದ ಆ ಜನರಿಗೆ ಭೂ ಹಕ್ಕು ಪಟ್ಟಾ ನೀಡುವ ಕಾರ್ಯಕ್ರಮವೂ ನಡೆದು ಹೋಯಿತು. ಆದರೆ ಯಾರೊಬ್ಬರೂ ತನ್ನ ಗುಡಿಸಿಲಿನ ಒಡೆಯನಾಗಲಿಲ್ಲ. ಆ ಊರಿಗೊಂದು ರಸ್ತೆ, ನೀರು, ಶೌಚಾಲಯ, ಲಭ್ಯವಾಗಲಿಲ್ಲ !! ರಾಜ್ಯ ಸರ್ಕಾರದ ಈಗಿನ ಭೂ ಗ್ಯಾರಂಟಿ ಯೋಜನೆಯಡಿ ೧,೧೧,೧೧೧ ಕುಟುಂಬಗಳ ಭೂ ದಾಖಲೆಯನ್ನು ಸಿದ್ಧಪಡಿಸಿ ಅವರಿಗೆಇ-ಸ್ವತ್ತು’ ಸಹಿತ ದಾಖಲೆ ಒದಗಿಸಿರುವುದಾಗಿ ಘೋಷಿಸಲಾಗಿದೆ. ಇದು ನಿಜವಾಗಿ ಅನುಷ್ಠಾನಗೊಂಡರೆ, ಲಂಬಾಣಿ ತಾಂಡಾಗಳಲ್ಲಿ ಖಂಡಿತ ನಗು ಕಾಣಬಹುದು. ಅವರ ಮಕ್ಕಳ ಮೊಗದಲ್ಲಿ ಸಂತಸದ ಕಳೆ, ಬದುಕಿನ ಬದ್ಧತೆ, ಭರವಸೆ ಮೂಡಬಹುದು.
ಗ್ಯಾರಂಟಿ ಯೋಜನೆ ದೇಶದಲ್ಲಿ ಪ್ರಥಮ ಬಾರಿಗೆ ಕರ್ನಾಟಕದಲ್ಲಿ ಘೋಷಣೆಯಾದಾಗ ಇವು ಇಷ್ಟು ಪರಿಣಾಮವನ್ನು ಜನಜೀವನದ ಮೇಲೆ ಬೀರಬಹುದು ಎಂದು ಯಾರೂ ಅಂದುಕೊಂಡಿರಲಿಲ್ಲ. ಹಾಗಾಗಿಯೇ ಕಾಂಗ್ರೆಸ್ ಸರ್ಕಾರ ನಿಚ್ಚಳ ಬಹುಮತದೊಂದಿಗೆ ಬಂತು. ಅಲ್ಪಸ್ವಲ್ಪ ತೊಡಕು- ವಿವಾದಗಳಿದ್ದರೂ ಅನುಷ್ಠಾನವೂ ಆಯಿತು.
ಯಾರು ಗ್ಯಾರಂಟಿ ಯೋಜನೆಗಳನ್ನು ಟೀಕಿಸಿ, ಫ್ರೀ ಬೀ' ಯಿಂದ ಸರ್ವನಾಶ ಆದೀತು ಎಂದೆಲ್ಲ ಘೋಷಿಸಿದ್ದರೋ, ಸ್ವತಃ ಪ್ರಧಾನಿಯಾದಿಯಾಗಿ, ಎಲ್ಲ ರಾಜಕೀಯ ಪಕ್ಷಗಳೂ ಇತರ ರಾಜ್ಯಗಳಲ್ಲಿ ಯಥಾವತ್ತಾಗಿ, ಅಥವಾ ಇನ್ನೂ ಹೆಚ್ಚು ಕೊಡುಗೆಗಳನ್ನು ನೀಡುವ ಗ್ಯಾರಂಟಿ ಸ್ಕೀಂಗಳನ್ನು ಘೋಷಿಸಿ ರಾಜಕೀಯ ಲಾಭ ಹೆಕ್ಕಿಕೊಂಡರು. ಮಧ್ಯಪ್ರದೇಶ, ದೆಹಲಿ, ಹರಿಯಾಣಾ, ಆಂಧ್ರಪ್ರದೇಶ, ಮಹಾರಾಷ್ಟçಗಳ ಚುನಾವಣೆಗಳಲ್ಲಿ ಸದ್ದು ಮಾಡಿ ಗದ್ದಲ ಎಬ್ಬಿಸಿದ್ದು ಇದೇ ಗ್ಯಾರಂಟಿಯಲ್ಲವೇ? ಜನ ಇನ್ನಷ್ಟು ಗ್ಯಾರಂಟಿ ಕೇಳುತ್ತಿದ್ದಾರೆ. ಅದು ಬದುಕಿನ ಬದ್ಧತೆಯ ಮತ್ತು ಭವಿಷ್ಯದ ಗ್ಯಾರಂಟಿ, ನೆಲ- ಜಲ- ಭಾಷೆಗಳ ಗ್ಯಾರಂಟಿ. ಈ ಗ್ಯಾರಂಟಿಗಳಿಗೆ ಆರ್ಥಿಕ ಆಯಾಮಕ್ಕಿಂತಲೂ ಬದ್ಧತೆ, ಪ್ರಾಮಾಣಿಕತೆ ಮತ್ತು ಕಾನೂನು ತೊಡಕುಗಳ ನಿವಾರಣೆ ಮುಖ್ಯ. ರಾಜ್ಯದ ವಿವಿಧ ಯೋಜನೆಗಳಿಂದಾಗಿ ಮತ್ತುಯೋಜನೆಗಳಿಗಾಗಿ’ ಲಕ್ಷಾಂತರ ಮಂದಿ ತಮ್ಮ ನೆಲೆ ಕಳೆದುಕೊಂಡು ಸಂತ್ರಸ್ಥರಾಗಿದ್ದಾರೆ. ಸಾವಿರಾರು ಕುಟುಂಬಗಳು ರಾಷ್ಟ್ರೀಯ- ರಾಜ್ಯ ಯೋಜನೆಗಳಿಗಾಗಿ ತ್ಯಾಗ ಮಾಡಿವೆ. ಆಲಮಟ್ಟಿ, ಕಾರಂಜಾ, ತುಂಗಭದ್ರಾ, ಆರ್‌ಟಿಪಿಎಸ್, ಕೈಗಾ, ಸೀಬರ್ಡ್, ಶರಾವತಿ, ಕಾಳಿ, ರಾಷ್ಟ್ರೀಯ- ರಾಜ್ಯ ಹೆದ್ದಾರಿಗಳಿಗಾಗಿ ತಮ್ಮ ಬದುಕು ತ್ಯಾಗ ಮಾಡಿದ ಜನರ ಕಣ್ಣನ್ನು ಸರ್ಕಾರ ಒರಸಬೇಕಿದೆ. ಘೋಷಣೆ ಮತ್ತು ನಿಯಮದಂತೆ ಆ ಜನರಿಗೆಲ್ಲ ಸೂಕ್ತ ಪರಿಹಾರ, ಪುನರ್ವಸತಿ ಕಲ್ಪಿಸುವುದರ ಜೊತೆಗೆ, ಒಕ್ಕಲೆಬ್ಬಿಸಿದವರಿಗೆ ಪುನಃ ಸ್ವಂತ ನೆಲೆ ಒದಗಿಸಿ, ಭೂಮಿಯ ಭದ್ರತೆ ನೀಡಬೇಕಿದೆ.
೨೦ನೇ ಶತಮಾನದ ಐದು- ಆರನೇ ದಶಕದಲ್ಲಿ ಅನುಷ್ಠಾನಗೊಂಡಿರುವ ಶರಾವತಿ ಯೋಜನೆಗೆ ನಿರಾಶ್ರಿತಗೊಂಡವರ ಬದುಕು ಇನ್ನೂ ಅಭದ್ರತೆಯಲ್ಲಿ ಇದೆ ಎಂದರೆ ಇದಕ್ಕಿಂತ ಅಮಾನವೀಯತೆ ಇನ್ನೊಂದು ಬೇಕೆ? ಇವರ ದಾರುಣ ಸ್ಥಿತಿ ಎಂಥವರಿಗೂ ಅರ್ಥವಾಗದೇ ಇರದು. ನಾಡಿಗೆ ಬೆಳಕು ಕೊಟ್ಟವರು, ನೀರು ಕೊಟ್ಟವರು, ರಕ್ಷಣೆಗೆ ಭೂಮಿ ಬಿಟ್ಟವರು ಈಗ ನಿರಾಶ್ರಿತರಾಗಿ ಬದುಕುತ್ತಿರುವುದು ವ್ಯವಸ್ಥೆಯ ಮತ್ತು ಕಾನೂನಿನ ಲೋಪದಿಂದಲೇ.
ಈ ನಿರಾಶ್ರಿತ ಜನ ಗ್ಯಾರಂಟಿ ನಮಗೂ ಕೊಡಿ ಎಂದು ಆಗ್ರಹಿಸುತ್ತಿದ್ದಾರೆ. ನಮಗೆ ನೀಡಬೇಕಾದ ಪರಿಹಾರದ ಗ್ಯಾರಂಟಿ ಎಲ್ಲಿ? ನೀವೇ ಕೊಟ್ಟ ಭೂಮಿ ಗ್ಯಾರಂಟಿ ನಮಗೇಕಿಲ್ಲ ಎಂದು ಕೇಳುತ್ತಿದ್ದಾರೆ. ನಮ್ಮ ನೀರು ನಮ್ಮ ಹಕ್ಕು. ನಮಗೇಕಿಲ್ಲ ನೀರಿನ ಗ್ಯಾರಂಟಿ ಎಂದು ಪ್ರಶ್ನಿಸುತ್ತಿದ್ದಾರೆ.
ನಿಜ. ರಾಜ್ಯದ ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡಿಕೊಂಡು ಬಂದಿರುವ ಲಕ್ಷಾಂತರ ಜನ ನ್ಯಾಯಾಲಯದ ತೂಗುಗತ್ತಿಯಲ್ಲಿ, ಸರ್ಕಾರದ ನಿರ್ಲಕ್ಷö್ಯದಲ್ಲಿ, ಜನಪ್ರತಿನಿಧಿಗಳ ಆಟಾಟೋಪದಿಂದ ಅತಂತ್ರ ಬದುಕು ಸಾಗಿಸುತ್ತಿದ್ದಾರೆ. ಶರಾವತಿ ಯೋಜನೆಗೆ ಭೂಮಿ ತ್ಯಾಗ ಮಾಡಿದವರಿಗೆ ಸರ್ಕಾರವೇ ಪುನರ್ವಸತಿ ಕಲ್ಪಿಸಿದ ಜನರನ್ನು ಮತ್ತೆ ಹೊರ ಹಾಕುವ ಆದೇಶ ಹೊರಟಿದೆ.
ರಾಜ್ಯದ ಸಾವಿರಾರು ಕುಟುಂಬಗಳು ಅನಾದಿ ಕಾಲದಿಂದ ಅರಣ್ಯದಂಚಿಗೆ ವಾಸಿಸಿ ಸಾಗುವಳಿ ಮಾಡುತ್ತಿವೆ. ಈ ಜನ ಸರ್ಕಾರದ, ಜನಪ್ರತಿನಿಧಿಗಳ ಅಸಡ್ಡೆ ಮತ್ತು ನ್ಯಾಯಾಂಗದ ಪ್ರಕ್ರಿಯೆಗಳ ಅಡಿ ಬದುಕು ಸಾಗಿಸುತ್ತಿದ್ದಾರೆ. ಅಪ್ಪ ಸತ್ತರೂ ಮಕ್ಕಳ ಹೆಸರಿಗೆ ಭೂ ದಾಖಲೆ ಬರೆಸಿಕೊಳ್ಳಲಾಗದ ಆತಂಕದಲ್ಲಿದ್ದಾರೆ. ಎಂತಹ ದುಸ್ಥಿತಿ..!. ಮರ‍್ನಾಲ್ಕು ತಲೆಮಾರುಗಳ ದಾಖಲೆ ಕೊಡಿ ಎಂದು ಅಧಿಕಾರಿಗಳು ಕೇಳಿದರೆ, ನ್ಯಾಯಾಲವೋ ಪ್ರಾಣಿಗಳಿಗೆಲ್ಲಿ ಭೂಮಿ?, ಅವರನ್ನು ಒಕ್ಕಲೆಬ್ಬಿಸಿ ಎಂದು ಆದೇಶ ಹೊರಡಿಸುತ್ತದೆ. ಈ ಜನ ನಾಲ್ಕು ದಶಕಗಳಿಂದಲೂ ಭೂ ಗ್ಯಾರಂಟಿ ಮತ್ತು ಬದುಕಿನ ಗ್ಯಾರಂಟಿ ಕೇಳುತ್ತಿದ್ದಾರೆ.
ಉತ್ತರ ಕರ್ನಾಟಕದ ಜನ ಯುಕೆಪಿ, ಆಲಮಟ್ಟಿ ನೀರಿನ ಗ್ಯಾರಂಟಿ ಕೇಳುತ್ತಿದ್ದಾರೆ. ನೀರಿನ ಹಕ್ಕು ರಾಜ್ಯಕ್ಕೆ ದೊರೆತು ಹದಿನೈದು ವರ್ಷವಾಯಿತು. ಬಚಾವತ್ ವರದಿಯಂತೆ ಬಿ ಸ್ಕೀಂ ಪೂರ್ಣಗೊಳಿಸಬೇಕು. ರೈತರ ಭೂಮಿಗೆ ನೀರು ಹರಿಯಬೇಕಿದ್ದರೆ ಕೇಂದ್ರ ಸರ್ಕಾರ ನ್ಯಾಯಾಧೀಕರಣದ ಐತೀರ್ಪಿನ ಗೆಜೆಟ್ ಪ್ರಕಟಿಸಬೇಕು. ಒಂದು ಗೆಜೆಟ್ ಅಧಿಸೂಚನೆಗೆ ಹದಿನೈದು ವರ್ಷ ಬೇಕೇ?
ಪ್ರತಿ ಚುನಾವಣೆಯಲ್ಲಿ ಆಯ್ಕೆಯಾದ ತಕ್ಷಣ ಕೃಷ್ಣಾ ನೀರು ಜಮೀನುಗಳಿಗೆ ಹರಿಸುವ ಆದೇಶ ಬರುತ್ತದೆ ಎಂದು ಭರವಸೆ ನೀಡಿದವರು ಈಗ ಐಷಾರಾಮಿ ಬಂಗಲೆ- ಅಧಿಕಾರಗಳನ್ನು ಪಡೆದು ತಮ್ಮ ಗ್ಯಾರಂಟಿಯನ್ನು ಭದ್ರಪಡಿಸಿಕೊಂಡಿದ್ದಾರೆ. ಕೃಷ್ಣಾ ನೀರಿನ ಹಕ್ಕಿನ ಗ್ಯಾರಂಟಿ ಕೊಡಿ ಎಂದು ಜನ ಕೇಳಿದರೆ, ಇತ್ತ ಉತ್ತರ ಕರ್ನಾಟಕದ ಇನ್ನೊಂದು ಭಾಗದಲ್ಲಿ ದಶಕಗಳ ಕಾಲ ಹೋರಾಟ ಮಾಡಿ ಪೆಟ್ಟು ತಿಂದ ಜನ ಮಹದಾಯಿ ನೀರಿನ ಗ್ಯಾರಂಟಿ ಕೇಳುತ್ತಿದ್ದಾರೆ. ಇದೂ ಅಷ್ಟೇ. ಮಹದಾಯಿ ಐತೀರ್ಪು ಬಂದು ನೀರು ಹಂಚಿಕೆಯಾಗಿದ್ದರೂ ಪ್ರಕರಣ ನ್ಯಾಯಾಲಯದಲ್ಲಿದೆ ಎಂದು ಅಧಿಸೂಚನೆ ಹೊರಡಿಸುತ್ತಿಲ್ಲ. ರಕ್ತದಲ್ಲಿ ಬರೆದುಕೊಡುವೆ'ಮಹದಾಯಿ ನೀರು ಕೊಟ್ಟೇ ಸಿದ್ದ ಎಂದವರು, ನಕಲಿ ಪತ್ರದ ಪ್ರತಿ ತೋರಿಸಿ ಚುನಾವಣೆಯಲ್ಲಿ ಆಯ್ಕೆಯಾದವರೇ ಮಹದಾಯಿ ರಾಜಕಾರಣ ಮುಂದುವರಿಸಿದ್ದಾರೆ. ಕಲ್ಯಾಣ ಕರ್ನಾಟಕದ ಜನ ತಮ್ಮ ಮೀಸಲಾತಿ, ಉದ್ಯೋಗ, ಸಮಾನತೆಯ ಗ್ಯಾರಂಟಿ ಕೇಳುತ್ತಿದ್ದಾರೆ. ಕರಾವಳಿ ಮೀನುಗಾರರು ಸಮುದ್ರಕ್ಕೆ ಇಳಿದು ಮೀನು ಹಿಡಿದು ಮಾರುವ ಮೂಲ ಕಸುಬಿನ ಗ್ಯಾರಂಟಿ ಕೇಳುತ್ತಿದ್ದಾರೆ. ಬೆಂಗಳೂರು ಬೃಹನ್ನಗರದ ಮಹಾಜನತೆ ಶುದ್ಧ ಗಾಳಿ, ಟ್ರಾಫಿಕ್ ವಿಮೋಚನೆ, ಜೊತೆಗೆ ಮಳೆಯಿಂದ ಆಗುವ ಪ್ರವಾಹದಿಂದ ಮುಕ್ತಿಯ ಗ್ಯಾರಂಟಿ ಕೇಳುತ್ತಿದ್ದಾರೆ !! ಈ ನಡುವೆ ಒಳಮೀಸಲಾತಿ, ಜಾತಿ ಗಣತಿ, ಜೊತೆ ಜೊತೆಗೆ ಯುದ್ಧ ಉನ್ಮಾದ, ಭಯೋತ್ಪಾದನೆ, ಮತೀಯ ಗಲಭೆಗಳು... ಇವೆಲ್ಲವುಗಳ ಮುಕ್ತಿಗೂ ಬೇಕಲ್ಲವೇ ಗ್ಯಾರಂಟಿ !? ನಿಜ. ಪಂಚ ಗ್ಯಾರಂಟಿಗಳುಫೈನ್ ಟ್ಯೂನ್’ ಆಗಬೇಕಾದದ್ದು ಈಗ ಅಗತ್ಯವಿದೆ. ಉಳ್ಳವರು, ಅನುಕೂಲವಂತರೂ ಕೂಡ ಸರ್ಕಾರ ಕೊಡುವ ಗ್ಯಾರಂಟಿಗಳ ಫಲಾನುಭವಿಗಳಾದರೆ ಏನೂ ಇಲ್ಲದವನ ಕೈಗೆ ಈ ಯೋಜನೆಯ ಲಾಭ ಸಿಗುವುದು ಅಷ್ಟಕ್ಕಷ್ಟೇ. ಹಾಗಾಗಿ ಅವುಗಳೊಟ್ಟಿಗೆ ಬದುಕಿನ ಭದ್ರತೆಯ ಗ್ಯಾರಂಟಿ ಬೇಕಲ್ಲವೇ? ಇದಕ್ಕೆ ಯಾರು ಜವಾಬ್ದಾರಿ? ಯಾರು ನೀಡುವರು ಈ ಗ್ಯಾರಂಟಿ?