ಬಂದೇ ಬಿಟ್ಟಳು ಸುನೀತಕ್ಕ

ಸುನೀತಕ್ಕ ಬೆಳಗಾಮುಂಜಾನೆ ೩.೩೦ಕ್ಕೆ ಬರುತ್ತಿದ್ದಾಳೆ… ವಿಮಾನದಲ್ಲಿ ಬರುತ್ತಾಳೆ, ನಗುತ್ತ ಬರುತ್ತಾಳೆ, ಆನಂದಿಸುತ್ತ ಬಂದಳು, ಎಲ್ಲರಿಗೂ ಕೈ ಬೀಸುತ್ತ ಬರುತ್ತಾಳೆ.
ಇನ್ನೇನು ಹೆಚ್ಚು ಸಮಯವಿಲ್ಲ ಬಂದೇಬಿಟ್ಟಳು, ಎಲ್ಲ ತಯಾರಿ ಮಾಡಿಕೊಳ್ಳಿ ಎಂದು ಕಿವುಡನುಮಿ ತನ್ನ ಚಾನಲ್‌ನಲ್ಲಿ ಬಿಟ್ಟೂಬಿಡದೇ ಒದರಿದ್ದೇ ತಡ, ಕರಿಭೀಮವ್ವಳಿಗೆ ಭಾರೀ ಖುಷಿ ಆಯಿತು. ರಾತ್ರಿಯೇ ಎಲ್ಲ ತಯಾರಿ ಮಾಡಿಟ್ಟುಕೊಂಡಳು, ಅರ್ಧಂಬರ್ಧ ನಿದ್ದೆ ಮಾಡಿದಳು. ಇನ್ನೂ ಎರಡು ಗಂಟೆ ಆಗಿತ್ತೋ ಇಲ್ಲೋ ಆಗಲೇ ಹಾಸಿಗೆಯಿಂದ ಎದ್ದು ಎಲ್ಲರನ್ನೂ ಎಬ್ಬಿಸತೊಡಗಿದಳು. ಏಳ್ರೀ..ಏಳ್ರೀ ಸುನೀತಕ್ಕ ಬರುತ್ತಾಳೆ ಎಂದು ಜೋರಾದ ಧನಿಯಲ್ಲಿ ಒದರಿದಳು. ಅಷ್ಟು ಸಾಲದೆಂಬಂತೆ ಪಕ್ಕದ ಮನೆಗೆ ಹೋಗಿ ಬಾಗಿಲು ಬಡಿದಳು. ಅವರು ಎಷ್ಟೋ ಹೊತ್ತಾದ ಮೇಲೆ ಯಾಕೆ ಎಂದು ಕೇಳಿದಾಗ…ಬೇಗ ತಯಾರಾಗಿ ಸುನೀತಕ್ಕ ಬರುತ್ತಿದ್ದಾಳೆ ಎಂದು ಹೇಳಿ ಹೋದಳು. ಅವರು ಗೊಂದಲದಲ್ಲಿ ಬಿದ್ದು ಇಲ್ಯಾಕೆ ಬರುತ್ತಾಳಂತೆ? ಎಂದು ತಮ್ಮಷ್ಟಕ್ಕೆ ತಾವು ಪ್ರಶ್ನೆ ಹಾಕಿಕೊಂಡು ಅವರು ತಯಾರಾಗತೊಡಗಿದರು. ಹಿಂದಿನ ಮನೆಗೆ ಹೋದ ಕರಿಭೀಮವ್ವ ಅಲ್ಲಿಯೂ ಬಾಗಿಲು ಬಡಿದು ಇಂಗಿಂಗೆ ಎಂದು ಹೇಳಿ ಅವರನ್ನೂ ತಯಾರಾಗುವಂತೆ ಹೇಳಿದಳು. ಮುಂದಿನ ಮನೆ, ಆಜು ಮನೆ-ಬಾಜು ಮನೆ ಹೀಗೆ ಅರ್ಧ ಊರನ್ನೇ ಎಬ್ಬಿಸಿ ಕೂಡಿಸಿದಳು. ನೋಡಿ ಕರೆಕ್ಟಾಗಿ ಆಕೆ ೩.೩೦ಕ್ಕೆ ಬರುತ್ತಾಳೆ ಎಲ್ಲರೂ ನಮ್ಮ ಮನೆಯ ಮುಂದೆ ಬಂದುಬಿಡಿ, ಅಲ್ಲಿಂದ ಮುಂದೆ ಡಿಸೈಡ್ ಮಾಡೋಣ ಎಂದಳು. ಎಲ್ಲರೂ ಗಾಬರಿಯಾಗಿ ಈಕೆ ಯಾಕೆ ಕರೆಯುತ್ತಿದ್ದಾಳೆ ಎಂದು ಅಂದುಕೊಂಡರು. ಎಲ್ಲ ಮನೆಗಳ ಸುಮಾರು ಐವತ್ತರವತ್ತು ಜನರು ಕರಿಭೀಮವ್ವಳ ಮನೆಮುಂದೆ ಸೇರಿದರು. ಎಲ್ಲಿದ್ದಾಳೆ ಸುನೀತಕ್ಕ? ಎಲ್ಲಿದ್ದಾಳೆ ಸುನೀತಕ್ಕ ಎಂದು ಕೇಳಿದಾಗ…ಕರಿಭೀಮವ್ವಳ ಗಂಡ ಕಣ್ಣುತಿಕ್ಕಿಕೊಳ್ಳುತ್ತ ಹೊರಗಡೆ ಬಂದು, ಆಕೆ ಇಲ್ಲಿ ಬರುವುದಿಲ್ಲ ಅಲ್ಲಿ ಅಲ್ಲಿ ಅಲ್ಲಿಗೆ ಬರುತ್ತಿದ್ದಾಳಂತೆ ಹೋಗಿ ಇಲ್ಲಿಂದ ಎಂದು ಜಬರಿಸಿದ.. ಎಲ್ಲರೂ ಕರಿಭೀಮವ್ವಳನ್ನು ಬಯ್ಯುತ್ತ ಅಲ್ಲಿಂದ ತೆರಳಿದರು.