ಡಿಯರ್ ಸೋದಿ ಸಾಹೇಬರಿಗೆ, ಈಗ ಜರೂರ್ ಪತ್ರ ಬರೆಯಲು ಕಾರಣವೇನೆಂದರೆ, ಎಷ್ಟೋ ವರ್ಷಗಳಿಂದ ಕಾದಾಡುತ್ತಿದ್ದ ರಷಿಯಾ ಪುಟ್ಯಾ ಮತ್ತು ಉಕ್ರೇನಿನ ಸ್ಮಾರ್ಟ್ ಹುಡುಗ ಝೆಲನ್ ಇಸ್ಕಿ ಅವರನ್ನು ಕೂಡಿಸಿ ಮಾತಾಡಿಸಿ ರಾಜಿ ಮಾಡಿಸಿದಿರಿ ಎಂದು ಮೊನ್ನೆ ಟ್ರಂಪೇಸಿ ಮೆಸೇಜ್ ಕಳಿಸಿದ್ದ ಅದನ್ನು ಓದಿ ನಾನು ಎಷ್ಟು ಖುಷಿಯಾಗಿದ್ದೇನೆ ಅಂದರೆ ಕೂತಲ್ಲಿ ಕೂಡವಲ್ಲೆ, ನಿಂತಲ್ಲಿ ನಿಲ್ಲವಲ್ಲೆ ಎಂದಿಗೂ ಬಗೆಹರಿಯದ ಜಗಳ ನೀವು ಬಗೆಹರಿಸಿದ್ದೀರಿ ಎಂದರೆ ನೀವು ಸಾಮಾನ್ಯರೇ ಅಲ್ಲ. ಈ ರಾಜಿ ಮಾಡಿಸುವ ವಿದ್ಯೆ ಈವರೆಗೆ ಯಾರಿಗೂ ಬಂದಿಲ್ಲ, ಮುಂದೆಯೂ ಬರುವುದಿಲ್ಲ, ಹೆಚ್ಚು ಹೊಗಳುತ್ತಿದ್ದೇನೆ ಎಂದು ಭಾವಿಸದಿರಿ. ಈಗ ನಾನು ನಿಮ್ಮಲ್ಲಿ ಕೇಳಿಕೊಳ್ಳುವುದೇನೆಂದರೆ, ಹೋದ ಎಳ್ಳಮಾಸಿ ದಿನ ನಮ್ಮ ಎತ್ತು ಮೂಲಿಮನಿ ಮಾದೇವನ ಮನೆಯ ಮುಂದೆ ಬೆಳೆದಿದ್ದ ಟೊಮ್ಯಾಟೋ ಗಿಡವನ್ನು ತಿಂದಿತಂತೆ ಅದನ್ನು ಕುಲ್ಡ್ಇರುಪಣ್ಣ ನೋಡಿ ಅವರಿಗೆ ಹೇಳಿದನಂತೆ, ಕೂಡಲೇ ಮಾದೇವ, ಅವನ ಅತ್ತೆ, ಹೆಂಡತಿ ಎಲ್ಲರೂ ಬಂದು ಜಗಳ ಮಾಡಿದರು, ನಮ್ಮ ಎತ್ತು ತಿಂದಿದ್ದಕ್ಕೆ ಸಾಕ್ಷಿ ಏನು ಎಂದು ಕೇಳಿದ್ದಕ್ಕೆ ಕುಲ್ಡ್ ಇರುಪ ಹೇಳಿದ ಅಂದರು. ನಾನೂ ಸುಮ್ಮನಿರಲಿಲ್ಲ. ವಿರುಪಣ್ಣನನ್ನು ಕೇಳಬೇಕೆಂದರೆ ಅವನು ಊರುಬಿಟ್ಟು ಹೋಗಿದ್ದಾನೆ. ದಿನದಿಂದ ದಿನಕ್ಕೆ ನಮ್ಮ ಜಗಳ ತಾರಕಕ್ಕೇರುತ್ತಿದೆ. ನಾನು ಮದ್ರಾಮಣ್ಣನವರನ್ನು ಕೇಳಿದರೆ ನೋಡನ ತಡಿಯಪ ನಂಗೆ ಕಾಲ್ನೋವು ಎಂದು ಹೇಳುತ್ತಿದ್ದಾರೆ. ಸುಮಾರಣ್ಣನವರನ್ನು ಕೇಳಿದರೆ, ತಡಿಯೋ ಮಾರಾಯ ಲೇವಣ್ಣನ ಲಫಡಾ ಬಗೆಹರಿಸಿದ ನಂತರವಷ್ಟೇ ಮುಂದಿನ ಕೆಲಸ ಎಂದು ಹೇಳುತ್ತಿದ್ದಾರೆ. ಬಂಡೆಸಿವು ಅಂತೂ ಕೈಗೆ ಸಿಗುತ್ತಿಲ್ಲ. ಇಲ್ಲಿ ನಿಮ್ಮ ಹುಡುಗರು ನಾ ಮಾಡುತ್ತೇನೆ ಮಸ್ತಿ-ಆಡೋಣ ಕುಸ್ತಿ ಅನ್ನುತ್ತಿವೆ. ಆದ್ದರಿಂದ ನಿಮಗೆ ಹೇಳುತ್ತಿದ್ದೇನೆ. ನೀವು ರಾತ್ರಿ ಬಸ್ಸು ಹತ್ತಿ ಬಂದರೆ ಬೆಳಗಾಮುಂಜಾನೆ ನಮ್ಮೂರಲ್ಲಿ ಇರುತ್ತೀರಿ. ಬೇಕಾದರೆ ನಮ್ಮ ಮನೆಯಲ್ಲಿರಬಹುದು ಬೇಡಪ ಸುಮ್ಮನೇ ಯಾಕೆ ಅಂದರೆ ಬೇರೆ ಕಡೆ ಇರುವುದಕ್ಕೆ ವ್ಯವಸ್ಥೆ ಮಾಡುತ್ತೇನೆ. ನೀವು ಪುಟ್ಯಾನಂಥ ಪುಟ್ಯಾನಿಗೆ ಬುದ್ದಿ ಹೇಳಿದಿರಿ.. ಝಲನ್ ಇಸ್ಕಿಗೂ ಬೈಯ್ದು ಹಂಗಲ್ಲ ಎಂದು ಗದರಿಸಿ ಸುಮ್ಮನಾಗಿಸಿದ್ದೀರಿ. ನಾವೆಲ್ಲ ಯಾ ಪಾಟಿ ನಿಮಗೆ? ಆದ್ದರಿಂದ ನೀವು ಜರೂರ್ ಬಂದು ನಮ್ಮ ಜಗಳ ಬಗೆಹರಿಸಿ ಬರುತ್ತೀರಿ ಎಂದು ನಂಬಿರುವ
ನಿಮ್ಮವನೇ ಆದ ತಿಗಡೇಸಿ ಜಾಲಿಕಟಗಿ….