ದಾವಣಗೆರೆ: ಕಷ್ಟಪಟ್ಟು ಸಣ್ಣ ಮಕ್ಕಳಂತೆ ಸಾಕಿ ಬೆಳೆಸಿದ ಆರು ವರ್ಷ ತುಂಬಿ ಫಸಲಿಗೆ ಬಂದಿದ್ದ ಅಡಿಕೆ ಗಿಡಗಳನ್ನು ದುಷ್ಕರ್ಮಿಗಳು ಕಡಿದು ನಾಶ ಪಡಿಸಿರುವ ಘಟನೆ ತಾಲೂಕಿನ ಶಂಕರನಹಳ್ಳಿ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಅಣಬೇರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಂಕರನಹಳ್ಳಿ ಗ್ರಾಮದ ಪುಷ್ಪಮ್ಮ ರೇವಪ್ಪ ಎಂಬುವರಿಗೆ ಸೇರಿದ ಅಡಿಕೆ ತೋಟದಲ್ಲಿ ೧೨೦೦ ಗಿಡಗಳನ್ನು ಶ್ರಮಪಟ್ಟ ಸಣ್ಣ ಮಕ್ಕಳಂತೆ ಸಾಕಿ ಬೆಳೆಸಿದ್ದರು. ಸೋಮವಾರ ಮಧ್ಯಾಹ್ನ ೧೨.೩೦ರ ಸುಮಾರಿನ ಹಾಡುಹಗಲೇ ಅಡಿಕೆ ಗಿಡಗಳನ್ನು ಕಡಿದು ನಾಶ ಪಡಿಸಿದ್ದಾರೆ ಎಂದು ಹೇಳಲಾಗಿದೆ.
ಭಾನುವಾರ ರಾತ್ರಿ ಮಳೆ ಬಂದಿದ್ದರಿಂದ ತೋಟಗಳಿಗೆ ರೈತರು ಹೋಗಿರಲಿಲ್ಲ. ಅಲ್ಲದೇ ಬೆಳಗ್ಗೆ ೧೦ ಗಂಟೆಯೊಳಗೆ ವಿದ್ಯುತ್ ಪೂರೈಸಿ ೧೦ ಗಂಟೆ ಬಳಿಕ ವಿದ್ಯುತ್ ಸ್ಥಗಿತಗೊಳಿಸಿದ್ದರಿಂದ ರೈತರು ತೋಟಗಳಲ್ಲಿ ಯಾರು ಇರಲಿಲ್ಲ. ಈ ಸಮಯ ಬಳಸಿಕೊಂಡ ದುಷ್ಕರ್ಮಿಗಳು ಪುಷ್ಪಮ್ಮ ರೇವಪ್ಪ ಅವರ ತೋಟದಲ್ಲಿ ಬೆಳೆದು ಫಸಲಿಗೆ ಬಂದಿದ್ದ ಅಡಿಕೆ ಗಿಡಗಳನ್ನು ಕಡಿದು ಹಾಕಿರುವುದರಿಂದ ಅಂದಾಜು ೮೦ ಲಕ್ಷ ರೂ. ನಷ್ಟ ಸಂಭವಿಸಿದೆ. ಪಕ್ಕದ ಜಮೀನಿನ ಪುಷ್ಪಮ್ಮ ರೇವಪ್ಪ ಅವರ ಸಂಬಂಧಿಕರು ಈ ದುಷ್ಕೃತ್ಯ ನಡೆಸಿರಬಹುದು ಎಂದು ಶಂಕಿಸಲಾಗಿದೆ. ಈ ಘಟನೆ ಬಗ್ಗೆ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.